ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮುಲ್‌ಗೆ ಪೌಡರ್‌, ಬೆಣ್ಣೆ ಹೊರೆ; ಗೋದಾಮುಗಳಲ್ಲಿ ₹ 86 ಕೋಟಿ ಮೌಲ್ಯದ ಉತ್ಪನ್ನ

ಪೌಡರ್ ರೂಪು ಪಡೆಯುತ್ತಿದೆ ನಿತ್ಯ 3 ಲಕ್ಷ ಲೀಟರ್ ಹಾಲು
Last Updated 2 ನವೆಂಬರ್ 2020, 2:59 IST
ಅಕ್ಷರ ಗಾತ್ರ
ADVERTISEMENT
"ಸಿ.ವಿ.ಮಹಾಲಿಂಗಯ್ಯ"

ತುಮಕೂರು: ತುಮಕೂರು ಹಾಲು ಒಕ್ಕೂಟದ (ತುಮುಲ್‌) ಗೋದಾಮುಗಳಲ್ಲಿ ₹ 86 ಕೋಟಿ ಮೌಲ್ಯದ ಹಾಲಿನ ಪುಡಿ ಮತ್ತು ಬೆಣ್ಣೆ ದಾಸ್ತಾನಿದ್ದು ತುಮುಲ್ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಈ ಸಂಕಷ್ಟ ರೈತರ ಮೇಲೂ ಪರಿಣಾಮ ಬೀರುತ್ತಿದೆ. ಆರ್ಥಿಕ ಹರಿವು ಸುಗಮವಾಗಿದ್ದರೆ ರೈತರು ಪೂರೈಸುವ ಹಾಲಿನ ದರವನ್ನು ತುಮುಲ್ ಹೆಚ್ಚಿಸುತ್ತಿತ್ತು.

ಕೋವಿಡ್ ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕಿವೆ. ತುಮುಲ್ ಸಹ ಕೋವಿಡ್ ಪರಿಣಾಮ ₹ 30 ಕೋಟಿ ಆದಾಯ ಕಳೆದುಕೊಂಡಿದೆ. ರೈತರಿಗೆ ಹಾಲು ಪೂರೈಕೆ ಹಣ ಬಟವಾಡೆ ಮಾಡುವ ಸಲುವಾಗಿ ₹ 90 ಕೋಟಿ ಸಾಲ ಸಹ ಪಡೆದಿದೆ.

ಕೋವಿಡ್ ತುಮುಲ್ ಅನ್ನು ಆರ್ಥಿಕವಾಗಿ ಹೈರಾಣಾಗಿಸಿದೆ. ಸಾಮಾನ್ಯ ದಿನಗಳಲ್ಲಿ ತುಮುಲ್ ಪ್ರತಿ ನಿತ್ಯ ಮುಂಬೈಗೆ 2.3 ಲಕ್ಷ ಲೀಟರ್ ಹಾಲು ಪೂರೈಸುತ್ತಿತ್ತು. ಆದರೆ ಈಗ ಬೇಡಿಕೆ ಇಲ್ಲದ ಕಾರಣ ಅಷ್ಟೊಂದು ಪ್ರಮಾಣದ ಹಾಲು ಆ ರಾಜ್ಯಕ್ಕೆ ಸರಬರಾಜಾಗುತ್ತಿಲ್ಲ. ಶಾಲೆಗಳು ಇಲ್ಲದ ಕಾರಣ ಕ್ಷೀರಭಾಗ್ಯ ಯೋಜನೆಯ ಹಾಲು ಸಹ ಉಳಿಕೆ ಆಗುತ್ತಿದೆ. ಮದುವೆ, ಶುಭ ಸಮಾರಂಭಗಳು, ಹೋಟೆಲ್‌ಗಳ ಚಟುವಟಿಕೆಗಳು ಲಾಕ್‌ಡೌನ್ ವೇಳೆ ಬಂದ್ ಆಯಿತು. ಲಾಕ್‌ಡೌನ್ ತೆರವಾದರೂ ಕೋವಿಡ್ ಪೂರ್ವದಲ್ಲಿ ಇದ್ದ ಸ್ಥಿತಿಗೆ ಇವುಗಳ ಚಟುವಟಿಕೆಗಳು ಮರಳಿಲ್ಲ.

ಈ ಎಲ್ಲ ಕಾರಣಗಳಿಂದ ಈಗ ನಿತ್ಯ 3 ಲಕ್ಷ ಲೀಟರ್ ಹಾಲು ಪೌಡರ್ ಮತ್ತು ಬೆಣ್ಣೆ ರೂಪು ತಳೆಯುತ್ತಿದೆ. ಈ ಹಿಂದೆ ತುಮುಲ್‌ಗೆ ಪೂರೈಕೆ ಆಗುತ್ತಿದ್ದ ಹಾಲು ಕನಿಷ್ಠ ಪ್ರಮಾಣದಲ್ಲಿಯೂ ಉಳಿಯುತ್ತಿರಲಿಲ್ಲ. ಅಂದಿನ ಹಾಲು ಅಂದೇ ಮಾರಾಟ ಆಗುತ್ತಿತ್ತು. ಇದರಿಂದ ಹಣದ ಹರಿವು ಚಲನಶೀಲ ವಾಗಿತ್ತು. ಹಾಲು, ಪೌಡರ್ ರೂಪು ಪಡೆದ ನಂತರ ಹಣದ ಹರಿವು ಸ್ಥಗಿತವಾಯಿತು.

ಮುಂಬೈ ಮಾರುಕಟ್ಟೆಯ ಪೆಟ್ಟು: ತುಮುಲ್ ಮುಂಬೈಗೆ ಹಾಲು ಪೂರೈಸುವ ಮೂಲಕ ಹೊರರಾಜ್ಯಕ್ಕೂ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.

‘ಕೋವಿಡ್ ಕಾರಣ ಮುಂಬೈಗೆ ಹಾಲು ಪೂರೈಕೆ ಗಣನೀಯವಾಗಿ ಇಳಿಕೆ ಆಯಿತು. ಅಲ್ಲಿ ನಮ್ಮಿಂದ 54 ವಿತರಕರು ಹಾಲು ಖರೀದಿಸುವರು. ನಿತ್ಯ ಕನಿಷ್ಠ 1 ಸಾವಿರ ಲೀಟರ್ ಮೇಲ್ಪಟ್ಟು ಬೇಡಿಕೆ ಸಲ್ಲಿಸಿದರೆ ಅಂತಹವರಿಗೆ ಹಾಲು ಪೂರೈಸಲಾಗುವುದು. ಮುಂಬೈಗೆ ನಿತ್ಯ ಎರಡು ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದೆವು. ಕೋವಿಡ್ ಸಮಯದಲ್ಲಿ 57 ಸಾವಿರ ಲೀಟರ್‌ಗೆ ಕುಸಿಯಿತು. ಈಗ 92 ಸಾವಿರ ಲೀಟರ್‌ಗೆ ತಲುಪಿದೆ’ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್ ತಿಳಿಸಿದರು.

ಸುಬ್ರಾಯ್ ಭಟ್

ನಾನೇ ಖುದ್ದು ಮುಂಬೈಗೆ ತೆರಳಿ ವಿತರಕರ ಜತೆ ಸಭೆ ನಡೆಸಿದೆ. ಅಲ್ಲಿ ತುಮುಲ್‌ 12 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿದೆ. ಅವರಿಗೂ ಪ್ರೋತ್ಸಾಹಧನ ನೀಡಲು ಮುಂದಾದೆವು. ಮಾರುಕಟ್ಟೆ ಹೆಚ್ಚಳಕ್ಕಾಗಿ ಲೀಟರ್ ಹಾಲಿಗೆ 3 ತಿಂಗಳ ಕಾಲ 70 ಪೈಸೆಯನ್ನು ಹೆಚ್ಚುವರಿಯಾಗಿ ನೀಡುವುದಾಗಿ ವಿತರಕರಿಗೆ ಭರವಸೆ ನೀಡಿದೆವು. ನಮ್ಮ ಆಡಳಿತ ಮಂಡಳಿಯವರು ಈ ವಿಚಾರದಲ್ಲಿ ನನಗೆ ಎಲ್ಲ ಸಹಕಾರ ನೀಡಿದರು. ಮುಂಬೈ ಮಾರುಕಟ್ಟೆ ಈಗ ಚೇತರಿಕೆ ಹಾದಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು.

ಮುಂಬೈನಲ್ಲಿ ನಾವು ವಿತರಕರಿಗೆ ಮುಂಗಡವಾಗಿಯೇ ಹಣ ಕಟ್ಟಿಸಿಕೊಳ್ಳುತ್ತೇವೆ. ಕೆಲವು ವೇಳೆ ಹೆಚ್ಚಿನ ಬೇಡಿಕೆಯೂ ಇರುತ್ತದೆ. ಮುಂಬೈಗೆ ಹಾಲು ಕಳುಹಿಸುವುದರಿಂದ ಹಣದ ಹರಿವು ಹೆಚ್ಚಳವಾಗುತ್ತಿದೆ. ರೈತರಿಗೆ ಬಟವಾಡೆ ಸೇರಿದಂತೆ ತುಮುಲ್ ಚಟುವಟಿಕೆಗಳಿಗೆ ಪ್ರಮುಖ ಬಲ ಇದಾಗಿದೆ. ‌ಆದರೆ ಅಲ್ಲಿ ಇನ್ನೂ ಸ್ಥಳೀಯ ರೈಲುಗಳು ಆರಂಭವಾಗಿಲ್ಲ. ಈ ಹಿಂದಿನ ಸ್ಥಿತಿಯಲ್ಲಿ ನಾವು ಅಲ್ಲಿ ಮಾರುಕಟ್ಟೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಥಾಸ್ಥಿತಿಗೆ ಬರಲು ಎರಡು ತಿಂಗಳು ಆಗಬಹುದು.ಕಳೆದ ಎರಡು ತಿಂಗಳಿನಿಂದ ಒಕ್ಕೂಟ ಅಲ್ಪಮಟ್ಟಿಗೆ ಚೇತರಿಕೆ ಹಾದಿಯಲ್ಲಿ ಇದೆ ಎಂದು ತಿಳಿಸಿದರು.

ತುಮಕೂರು ಹಾಗೂ ಬೆಂಗಳೂರಿನಲ್ಲಿಯೂ ಮಾರುಕಟ್ಟೆ ಕುಸಿದಿತ್ತು. ಈಗ ಜಿಲ್ಲೆಯಲ್ಲಿ 94 ಸಾವಿರ ಲೀಟರ್ ಹಾಗೂ ಬೆಂಗಳೂರಿನಲ್ಲಿ 1.55 ಲಕ್ಷ ಲೀಟರ್ ಹಾಲನ್ನು ತುಮುಲ್ ಮಾರಾಟ ಮಾಡುತ್ತಿದೆ. ಹೀಗೆ ದಿನದಿಂದ ದಿನಕ್ಕೆ ಹಾಲು ಪೂರೈಕೆಯ ಹೆಚ್ಚಳ ಆಶಾವಾದ ಮೂಡಿಸಿದೆ.

ಮಾರಾಟ: ಪೌಡರ್‌ನ ಬಳಕೆಯ ಕಾಲಮಿತಿ ಒಂದು ವರ್ಷಗಳು ಮಾತ್ರ. ಈ ಅವಧಿಯೊಳಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಸಂದಿಗ್ಧವೂ ತುಮುಲ್‌ಗೆ ಇದೆ. ಕೋವಿಡ್ ನಂತರ ತುಮುಲ್, 1,195 ಟನ್ ಬೆಣ್ಣೆ ಹಾಗೂ 1,003 ಟನ್ ಕೆನೆ ರಹಿತ ಹಾಲಿನ ಪುಡಿ ಹಾಗೂ 1,201 ಟನ್ ಕೆನೆ ಭರಿತ ಹಾಲಿನ ಪುಡಿ ಮಾರಾಟ ಮಾಡಿದೆ.

ದೀಪಾವಳಿ, ದಸರಾ ಸಮಯದಲ್ಲಿ ಉತ್ತರ ಭಾರತದಿಂದ ಬೆಣ್ಣೆ ಮತ್ತು ಪೌಡರ್‌ಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಈಗ ಯಾವುದೇ ಸಮಾರಂಭಗಳು ಇಲ್ಲದ ಕಾರಣ ದಾಸ್ತಾನು ಉಳಿಯುತ್ತಿದೆ. ‌

ಉತ್ಪಾದನೆ ಹೆಚ್ಚಳ: ಒಂದು ಕಡೆ ಹಾಲಿಗೆ ಬೇಡಿಕೆ ಕಡಿಮೆ ಆಗಿದ್ದರೆ ಮತ್ತೊಂದು ಕಡೆ ಜಿಲ್ಲೆಯಲ್ಲಿ ಉತ್ಪಾದನೆ ಹೆಚ್ಚಿದೆ. ಲಾಕ್‌ಡೌನ್, ಕೊರೊನಾ ಕಾರಣದಿಂದ ಸ್ವಗ್ರಾಮಗಳಿಗೆ ಮರಳಿದ ಜನರು ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಅವಲಂಬಿಸಿದರು. ಕೆಲವು ಖಾಸಗಿ ಡೇರಿಗಳು ಸಹ ಹಾಲು ಖರೀದಿ ನಿಲ್ಲಿಸಿದವು. ಈ ಎಲ್ಲ ಕಾರಣದಿಂದ ತುಮುಲ್‌ಗೆ ಹಾಲು ಸಂಗ್ರಹ ಹೆಚ್ಚಿತ್ತು. ನಿತ್ಯ ಸರಾಸರಿ 7.20 ಲಕ್ಷ ಲೀಟರ್ ಸಂಗ್ರಹವಾಗುತ್ತಿದ್ದ ಹಾಲು ಈಗ 8 ಲಕ್ಷ ಲೀಟರ್ ದಾಟಿದೆ.

₹ 35.42 ಕೋಟಿ ಸಾಲ ತೀರಿಸಿದ್ದೇವೆ

ಹಾಲು ಪೂರೈಸಿದ ರೈತರಿಗೆ ನಾವು ಸಕಾಲಕ್ಕೆ ಹಣ ಬಟವಾಡೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಕೆಎಂಎಫ್‌ ಮೂಲಕ ಒಕ್ಕೂಟಗಳಿಗೆ ಸಾಲ ನೀಡಿದೆ. ಅದರಲ್ಲಿ ನಮ್ಮ ಒಕ್ಕೂಟ ₹ 90 ಕೋಟಿ ಸಾಲ ಪಡೆದಿದ್ದು ₹ 83.35 ಕೋಟಿಯನ್ನು ಬಳಸಿಕೊಂಡಿದೆ. ಈ ಸಾಲದ ಹಣದಲ್ಲಿ ಈಗಾಗಲೇ ₹ 35.42 ಕೋಟಿಯನ್ನು ತೀರಿಸಿದ್ದೇವೆ. ಉಳಿದ ₹ 47 ಕೋಟಿ ಬಾಕಿ ಇದೆ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್ ಮಾಹಿತಿ ನೀಡಿದರು.

ನಷ್ಟ ಖಚಿತ

ಒಂದು ಕೆ.ಜಿ ಪೌಡರ್ ಸಿದ್ಧವಾಗಲು ಗರಿಷ್ಠ 9ರಿಂದ 10 ಲೀಟರ್ ಹಾಲು ಅಗತ್ಯ. ಜತೆಗೆ ಪ್ಯಾಕಿಂಗ್, ನಿರ್ವಹಣೆ ವೆಚ್ಚ ₹5 ತಗಲುತ್ತದೆ. ಒಂದು ಕೆ.ಜಿ ಪೌಡರ್ ಸಿದ್ಧವಾಗಲು ₹236ರಿಂದ ₹240 ವೆಚ್ಚವಾಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಕೆ.ಜಿ ಪೌಡರ್ ಬೆಲೆ ಸರಾಸರಿ ₹190 ಇದೆ. ಇಷ್ಟು ಬೆಲೆಗೆ ಮಾರಾಟ ಮಾಡಿದರೆ ಒಕ್ಕೂಟಗಳಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಕೊರೊನಾ ಪೂರ್ವದಲ್ಲಿ ಒಂದು ಕೆ.ಜಿ ಪೌಡರ್ ಬೆಲೆ ₹250 ಇತ್ತು.

ಗರಿಷ್ಠ ಹಾಲು ಪೂರೈಕೆ

ಲಾಕ್‌ಡೌನ್ ಪೂರ್ವದಲ್ಲಿ ನಿತ್ಯ ಸರಾಸರಿ 7.20 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿತ್ತು. ಆದರೆ ಕೋವಿಡ್ ಕಾರಣದಿಂದ ಜನರು ಹಳ್ಳಿಗಳಿಗೆ ಮರಳಿದರು. ತುಮುಲ್ ಇತಿಹಾಸದಲ್ಲಿಯೇ ಗರಿಷ್ಠ ಎನಿಸಿದ 8.80 ಲಕ್ಷ ಲೀಟರ್‌ವರೆಗೆ ಹಾಲು ಸಂಗ್ರಹವಾಯಿತು. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎನ್ನುವ ಉದ್ದೇಶ ನಮ್ಮದು ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.

ಸಿ.ವಿ.ಮಹಾಲಿಂಗಯ್ಯ

‘ಕೆಲವು ಒಕ್ಕೂಟಗಳು ₹ 1 ಇಳಿಸಿದರೂ ನಾವು ಮಾತ್ರ ಬೆಲೆ ಇಳಿಸಲಿಲ್ಲ. ಇದೂ ಒಕ್ಕೂಟಕ್ಕೆ ಹೊರೆ ಆಯಿತು. ರೈತರಿಗೆ ಸಕಾಲದಲ್ಲಿಯೇ ಹಣ ಬಟವಾಡೆ ಮಾಡುತ್ತಿದ್ದೇವೆ. ಹಣದ ಚಲನೆ ಇಲ್ಲ ಎಂದರೆ ನಾವು ರೈತರಿಗೆ ಹಾಲಿನ ದರವನ್ನು ಹೆಚ್ಚಿಸುವುದಾದರೂ ಹೇಗೆ’ ಎಂದು ಪ್ರಶ್ನಿಸುವರು.

ಒಕ್ಕೂಟ ಸಾಮಾನ್ಯ ಸ್ಥಿತಿಯಲ್ಲಿ ಇದಿದ್ದರೆ ಖಂಡಿತ ರೈತರು ಪೂರೈಸುವ ಹಾಲಿನ ದರವನ್ನು ಹೆಚ್ಚಿಸುತ್ತಿದ್ದೆವು. ಆದರೆ ಸದ್ಯಕ್ಕೆ ಸಾಧ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT