ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಸೂಕ್ತ ಮಾರುಕಟ್ಟೆಯ ಕೊರತೆ– ಡ್ರ್ಯಾಗನ್‌ ಫ್ರೂಟ್‌ ಮಾರಾಟವೇ ಸವಾಲು!

ಕಳೆದ ವರ್ಷ 253 ಟನ್‌ ಹಣ್ಣು ಉತ್ಪಾದನೆ
Published : 17 ಸೆಪ್ಟೆಂಬರ್ 2024, 7:49 IST
Last Updated : 17 ಸೆಪ್ಟೆಂಬರ್ 2024, 7:49 IST
ಫಾಲೋ ಮಾಡಿ
Comments

ತುಮಕೂರು: ಒಂದು ಕಡೆ ಡ್ರ್ಯಾಗನ್‌ ಫ್ರೂಟ್‌ ಬೆಳೆಯ ವಿಸ್ತೀರ್ಣ ಪ್ರತಿ ವರ್ಷವೂ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಹಣ್ಣುಗಳ ಮಾರಾಟಕ್ಕೆ ಸಮರ್ಪಕ ಮಾರುಕಟ್ಟೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ.

‘ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಮುಖಾಂತರ ಹಣ್ಣು ಖರೀದಿ ಪ್ರಕ್ರಿಯೆ ನಡೆಯುತ್ತಿದ್ದರೂ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ರೈತರಿಂದ ಕೆ.ಜಿ ಹಣ್ಣನ್ನು ₹80ರಿಂದ ₹100ಗೆ ಖರೀದಿಸಿ, ಮಾರುಕಟ್ಟೆಯಲ್ಲಿ ₹250ರಿಂದ ₹300ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇತ್ತ ಬೆಳೆದ ರೈತರಿಗೂ ಲಾಭ ಸಿಗುತ್ತಿಲ್ಲ. ಗ್ರಾಹಕರಿಗೂ ನೆರವಾಗುತ್ತಿಲ್ಲ. ಮಧ್ಯವರ್ತಿಗಳ ಜೇಬು ತುಂಬುತ್ತಿದೆ. ಕೆಲವೊಮ್ಮೆ ಹಣ್ಣು ಕೇಳುವವರು ಇರುವುದಿಲ್ಲ’ ಎಂದು ಡ್ರ್ಯಾಗನ್‌ ಫ್ರೂಟ್‌ ಬೆಳೆಗಾರ ರಮೇಶ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು, ಕೇರಳ ಮತ್ತು ಮುಂಬೈನಲ್ಲಿ ಡ್ರ್ಯಾಗನ್‌ ಫ್ರೂಟ್‌ಗೆ ಪ್ರತ್ಯೇಕವಾದ ಮಾರುಕಟ್ಟೆ ಇದೆ. ಜಿಲ್ಲೆಯ ರೈತರಿಗೆ ತಾವು ಬೆಳೆದ ಹಣ್ಣನ್ನು ದೂರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ತಾವಿದ್ದ ಸ್ಥಳದಲ್ಲೇ ಕಡಿಮೆ ದರಕ್ಕೆ ಹಣ್ಣು ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಬೆಂಗಳೂರಿನ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಸೂಕ್ತ ಬೆಲೆ ಸಿಗದೆ ವಾಪಸ್‌ ಆಗುತ್ತಿದ್ದಾರೆ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಗಿಡ ನಾಟಿ ಮಾಡಿದವರಿಗೆ ಇದೀಗ ನಿರಾಸೆ ಎದುರಾಗಿದೆ.

ಶಿರಾ, ಮಧುಗಿರಿ, ಪಾವಗಡ ತಾಲ್ಲೂಕಿನ ಹೆಚ್ಚಿನ ಪ್ರದೇಶದಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲಾಗುತ್ತಿದೆ. 2020–21ರಲ್ಲಿ ಕೇವಲ 6 ಹೆಕ್ಟೇರ್‌ನಲ್ಲಿದ್ದ ಡ್ರ್ಯಾಗನ್‌ ಫ್ರೂಟ್ ಬೆಳೆ ಪ್ರಸ್ತುತ 60 ಹೆಕ್ಟೇರ್‌ಗೆ ವಿಸ್ತರಿಸಿದೆ. ಸದ್ಯ ಪ್ರತಿ ಹೆಕ್ಟೇರ್‌ಗೆ 5ರಿಂದ 6 ಟನ್‌ ಇಳುವರಿ ಸಿಗುತ್ತದೆ.

‘ಡಿಸೆಂಬರ್‌ ತಿಂಗಳು, ರಂಜಾನ್‌, ಕ್ರಿಸ್‌ಮಸ್‌ ಹಬ್ಬಗಳ ಸಮಯದಲ್ಲಿ ಹಣ್ಣಿಗೆ ಬೇಡಿಕೆ ಇರುತ್ತದೆ. ಇಂತಹ ಸಮಯದಲ್ಲೂ ಹೆಚ್ಚಿನ ದರಕ್ಕೆ ಮಾರಾಟ ಆಗುವುದಿಲ್ಲ. ಆಗ ಕೆ.ಜಿ.ಗೆ ₹140 ಸಿಗುತ್ತದೆ. ಕೆಲವೊಮ್ಮೆ ಗಿಡದಿಂದ ಹಣ್ಣು ಕೀಳಿಸಿದ ಕೂಲಿಯೂ ಸಿಗುವುದಿಲ್ಲ’ ಎಂದು ರೈತರು ಹೇಳುತ್ತಾರೆ.

‘ನಾಟಿ ಮಾಡಿ 2 ವರ್ಷ ಜೋಪಾನವಾಗಿ ಗಿಡಗಳನ್ನು ಕಾಪಾಡಿದ ನಂತರ ಹಣ್ಣು ಮಾರುವುದೇ ಸವಾಲಿನ ಕೆಲಸವಾಗಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಗಿಡ ಕೊಟ್ಟು ಸುಮ್ಮನಾಗುತ್ತಾರೆ. ಮಾರುಕಟ್ಟೆಗೆ ಯಾವುದೇ ರೀತಿಯಲ್ಲೂ ನೆರವಾಗುತ್ತಿಲ್ಲ. ನಾವೇ ನಗರ ಪ್ರದೇಶದಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಹಣ್ಣು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಡ್ರ್ಯಾಗನ್‌ ಫ್ರೂಟ್‌ ಬೆಳೆದ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಾರಾಯಣಗೌಡ ಅಳಲು ತೋಡಿಕೊಂಡರು.

ಮಾರುಕಟ್ಟೆ ಸಮಸ್ಯೆ ಇಲ್ಲ

ಜಿಲ್ಲೆಯಲ್ಲಿ ಸದ್ಯಕ್ಕೆ ಡ್ರ್ಯಾಗನ್‌ ಫ್ರೂಟ್‌ ಮಾರಾಟಕ್ಕೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ವಿವಿಧ ಮಾಲ್‌ಗಳಿಗೆ ಚಿಲ್ಲರೆಯಾಗಿಯೂ ಹಣ್ಣು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ತೋಟಗಾರಿಕಾ ಇಲಾಖೆಯಿಂದಲೂ ಅಗತ್ಯ ಸಹಾಯ ಧನ ನೀಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಬಿ.ಸಿ.ಶಾರದಮ್ಮ ಉಪ ನಿರ್ದೇಶಕಿ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT