ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹37.74 ಕೋಟಿ ಪ್ರೋತ್ಸಾಹಧನ ಬಾಕಿ

ಹಣ ಕೈ ಸೇರದೆ ಸಂಕಷ್ಟಕ್ಕೆ ಸಿಲುಕಿರುವ ಹಾಲು ಉತ್ಪಾದಕರು
Last Updated 26 ಜುಲೈ 2020, 16:43 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಲು ಪೂರೈಕೆಯಾಗದೆ ತುಮಕೂರು ಹಾಲು ಒಕ್ಕೂಟದ ಬಳಿಯೇ ಹಾಲು ಉಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಲೀಟರ್ ಹಾಲಿನ ಬೆಲೆಯನ್ನು ತುಮುಲ್ ₹ 3.50ರಷ್ಟು ಕಡಿಮೆ ಮಾಡಿದೆ. ಇದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎನ್ನುವ ಹೊತ್ತಿನಲ್ಲಿಯೇ ಕಳೆದ ಐದು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಸರ್ಕಾರವು ಪ್ರೋತ್ಸಾಹ ಧನ ನೀಡಿಲ್ಲ. ಇದು ರೈತರಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.

ಸರ್ಕಾರ ಲೀಟರ್ ಹಾಲಿಗೆ ₹5 ಪ್ರೋತ್ಸಾಹ ಧನ ನೀಡುತ್ತಿದೆ. ಜಿಲ್ಲೆಯಲ್ಲಿ ಒಟ್ಟು 78,000 ಹಾಲು ಉತ್ಪಾದಕರು ಇದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿವೆ.

ತುಮಕೂರು ಹಾಲು ಒಕ್ಕೂಟವು ಲಾಕ್‌ಡೌನ್‌ಗೂ ಮುನ್ನ ಮಾರ್ಚ್‌ನಲ್ಲಿ ಪ್ರತಿ ಲೀಟರ್‌ಗೆ ₹28.50 ನೀಡಿ ಉತ್ಪಾದಕರಿಂದ ಹಾಲು ಖರೀದಿಸುತ್ತಿತ್ತು. ಆದರೆ, ಪ್ರಸ್ತುತ ₹25 ಮಾತ್ರವೇ ನೀಡುತ್ತಿದೆ.

ಪ್ರೋತ್ಸಾಹಧನವು ಕೋವಿಡ್‌ನ ಈ ಸಂಕಷ್ಟದ ಕಾಲದಲ್ಲಾದರೂ ಕೈ ಸೇರಲಿದೆ ಎಂದುಕೊಂಡಿದ್ದ ರೈತರಿಗೆ ಈವರೆಗೂ ಪ್ರೋತ್ಸಾಹಧನ ಕೈ ಸೇರಿಲ್ಲ. ಈ ನಡುವೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯ ಸರ್ಕಾರದಿಂದ ಹೈನುಗಾರರಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿದೆ ಎಂದು ತಿಳಿಸಿ ಹಲವು ದಿನಗಳೇ ಕಳೆದಿದ್ದರೂ ಇದುವರೆಗೂ ಜಿಲ್ಲೆಯ ಯಾವೊಬ್ಬ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಿಲ್ಲ.

ಖರ್ಚು ಹೆಚ್ಚು: ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆ ಲಾಭದ ಉದ್ಯಮವಾಗಿ ಉಳಿದಿಲ್ಲ. ಪಶು ಆಹಾರ, ಔಷಧಿ ಹೀಗೆ ಪ್ರತಿಯೊಂದರ ಬೆಲೆಯೂ ಹೆಚ್ಚಳವಾಗಿದೆ. ಖರ್ಚು ಸಹ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುವ ₹5 ರೂಪಾಯಿ ಪ್ರೋತ್ಸಾಹಧನ ಸಿಗದಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹಾಲು ಉತ್ಪಾದಕ ಮಂಜುನಾಥ್ ಅಳಲು ತೋಡಿಕೊಂಡರು.

-----------

5 ತಿಂಗಳು ಬಾಕಿ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್)ಹಾಲು ಉತ್ಪಾದಕರಿಗೆ ಫೆಬ್ರುವರಿ ಅಂತ್ಯದವರೆಗೂ ಪ್ರೋತ್ಸಾಹಧನ ಸಿಕ್ಕಿದೆ. ಸರ್ಕಾರದಿಂದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್‌ನಿಂದ ₹37.74 ಕೋಟಿ ಹಣ ಸರ್ಕಾರದಿಂದ ಬರಬೇಕಿದೆ. ನಾವು ಈಗಾಗಲೇ ಉತ್ಪಾದಕರು ಹಾಲು ಹಾಕಿರುವ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೆಎಂಎಫ್‌ ಅಧ್ಯಕ್ಷರು ಪ್ರೋತ್ಸಾಹಧನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ರೈತರ ಖಾತೆಗೆ ಜಮೆಯಾಗಿಲ್ಲ. ಶೀಘ್ರವೇ ಜಮೆಯಾಗುವ ನಿರೀಕ್ಷೆಯಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

--------

ದಿಕ್ಕುತೋಚದ ಸ್ಥಿತಿ

ಬೆಂಗಳೂರು ಸೇರಿದಂತೆ ಪಟ್ಟಣಗಳನ್ನು ಸೇರಿದ್ದ ಸಾವಿರಾರು ಮಂದಿ ಇದೀಗ ಹಳ್ಳಿಗಳಿಗೆ ಮರಳಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಮಾರ್ಚ್‌ ವೇಳೆಗೆ 74 ಸಾವಿರದಷ್ಟಿದ್ದ ಹಾಲು ಉತ್ಪಾದಕರ ಸಂಖ್ಯೆ 78 ಸಾವಿರ ದಾಟಿದೆ. ಫೆಬ್ರುವರಿ, ಮಾರ್ಚ್‌ನಲ್ಲಿ ಪ್ರತಿದಿನ ಸಂಗ್ರಹವಾಗುತ್ತಿದ್ದ 6.30 ಲಕ್ಷ ಲೀಟರ್‌ ಇದೀಗ 8.60 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಇರುವ ಉದ್ಯೋಗಗಳನ್ನು ಕಳೆದುಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಹಾಲಿನ ದರ ಕಡಿತ, ಮತ್ತೊಂದೆಡೆ ಪ್ರೋತ್ಸಾಹಧನ ಸಿಗದಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT