ತುರುವೇಕೆರೆ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಬಿರುಗಾಳಿ, ಮಿಂಚು, ಗುಡುಗು ಸಹಿತ ಸುರಿದ ಹದ ಮಳೆಯಿಂದ ಮುಂಗಾರು ಬಿತ್ತನೆ ಮಾಡಿದ್ದ ರೈತರಲ್ಲಿ ಸಂತಸ ತಂದಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರಾತ್ರಿ ಒಂದು ಗಂಟೆಗೂ ಹೆಚ್ಚು ಸಮಯ ರಭಸದ ಮಳೆ ಸುರಿಯಿತು.
ಪಟ್ಟಣ ಹಾಗೂ ಕಸಬಾ ವ್ಯಾಪ್ತಿಯಲ್ಲಿ ನಾಲ್ಕು ಸೆಂ.ಮೀ.ಗೂ ಹೆಚ್ಚು ಮಳೆಯಾಗಿರುವ ಕಾರಣ ಹಾವಾಳ, ತಾವರೇಕೆರೆ, ಮುನಿಯೂರು, ಬಾಣಸಂದ್ರ, ಸೂಳೇಕೆರೆ, ಮಾದಿಹಳ್ಳಿ, ಅರಳೀಕೆರೆ, ಸೋಮೇನಹಳ್ಳಿ ಗ್ರಾಮಗಳಲ್ಲಿ ಮಂಗಾರು ತಾಕುಗಳಿಗೆ ಜೀವಕಳೆ ತಂದಿದೆ.
ಪೂರ್ವ ಮುಂಗಾರಿನ ಹೆಸರು, ಉದ್ದ ಬೆಳೆಗಳನ್ನು ಹಾಕದ ಕೆಲ ರೈತರು ಭೂಮಿ ಹದ ಮಾಡಿದ್ದರು. ಅಲ್ಲಲ್ಲಿ ಪುಷ್ಯ ಮತ್ತು ಆಶ್ಲೇಷ ಮಳೆ ಬಿದ್ದ ಕಾರಣ ರಾಗಿ, ತೊಗರಿ, ಜೋಳ, ಹರಳು, ಜೋಳ, ಹುರುಳಿ ಮತ್ತು ಸಾಸಿವೆ ಬಿತ್ತನೆ ಮಾಡಿದ್ದಾರೆ. ಆಗಾಗ್ಗೆ ಸೋನೆ ಮಳೆಯಾಗುತ್ತಿದ್ದರಿಂದ ಪೈರು ಮೂರ್ನಾಲ್ಕು ಇಂಚು ಬೆಳದಿತ್ತು. ಕೊನೆಕೊನೆಗೆ ಆಶ್ಲೇಷ ಮಳೆ ಕೈಕೊಟ್ಟಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು.
ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಘೆ ಮಳೆಗೆ ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ಹಸಿರಾಗಿ ನಳನಳಿಸುತ್ತಿವೆ. ಇನ್ನೂ ಕೆಲವರು ಭೂಮಿ ಹದ ಮಾಡಿಕೊಂಡಿದ್ದರೂ ರಾಗಿ ಭಿತ್ತನೆಗೆ ಅವಕಾಶ ಸಿಗದೆ ಪರದಾಡುತ್ತಿದ್ದಾರೆ. ನಾಲ್ಕು ಹೋಬಳಿಯ ಕೆಲ ಭಾಗಗಳಲ್ಲಿ ರೈತರು ಪೈರು ನಾಟಿ ಮಾಡಲು ಭೂಮಿ ಸಾಲು ಹೊಡೆದುಕೊಂಡು ಪೈರು ಒಂದು ಅರ್ಧ ಅಡಿ ಬೆಳೆಯುತ್ತಿದ್ದಂತೆ ನಾಟಿ ಮಾಡಲು ಸಿದ್ಧರಾಗಿದ್ದಾರೆ
ಕೆಲವೆಡೆ ರೈತರು, ತೊಗರಿ, ಅವರೆಮತ್ತು ಮುಸುಕಿನ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಭಿತ್ತನೆ ಮಾಡಿದ್ದಾರೆ. ನಿರಂತರ ಮಳೆಯಿಂದ ಕೆಲವೆಡೆ ಅವರೆ ಗಿಡದ ಎಲೆಗಳು ಸಣ್ಣ ಸಣ್ಣ ತೂತು ಬಿದ್ದು ರೋಗಪೀಡಿತವಾಗಿವೆ. ತೆಂಗಿನ ಸಸಿಗಳಿಗೆ ಕೆಂಪು ಮೂತಿ ಹುಳ ಹಾಗೂ ಬಿಳಿ ನೊಣದ ಹಾವಳಿ ಹಾಗೂ ಅಡಿಕೆಗೆ ಕೊಳೆ ರೋಗದ ಭೀತಿ ಹೆಚ್ಚಾಗಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎನ್ನುತ್ತಾರೆ ಲೋಕಮ್ಮನಹಳ್ಳಿ ಕಾಂತರಾಜು.
ತಾಲ್ಲೂಕಿನಾದ್ಯಂತೆ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೋಟ ಸಾಲು, ಅಡಿಕೆ ಸಾಲು, ಬಾಳೆ ಮತ್ತು ಹೊಲಗಳಲ್ಲಿ, ಚೆಕ್ ಡ್ಯಾಂ, ಕಟ್ಟೆಗಳು ಸೇರಿದಂತೆ ತಗ್ಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಎಲ್ಲ ಕಡೆ ಹದ ಮಳೆಯಾಗಿರುವ ಕಾರಣ ಭೂಮಿ ಹೆಚ್ಚು ತೇವಾಂಶದಿಂದ ಕೂಡಿದ್ದು, ಇನ್ನೂ ಎರಡು ದಿನ ಮುಂಗಾರು ಭಿತ್ತನೆಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ಕಾಯಬೇಕಿದೆ. ಮಳೆ ಹೆಚ್ಚಾಗಿರುವ ಕಾರಣ ಗೊಬ್ಬರದ ಅಂಗಡಿಗಳಲ್ಲಿ ಡಿಎಪಿ, ಯೂರಿಯಾ ಸೇರಿದಂತೆ ಹಲವು ರಾಸಾಯಿನಿಕ ಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಅಂಗಡಿ ಮಾಲೀಕ ಕೈಲಾಸಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.