ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ರೈತರ ಸಮಸ್ಯೆಗೆ ಸ್ಪಂದಿಸಲು ಆಗ್ರಹ

Last Updated 7 ಸೆಪ್ಟೆಂಬರ್ 2021, 4:34 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಹಬಲೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಸಂಘಟಿತರಾದ ಪದಾಧಿಕಾರಿಗಳು ತಾಲ್ಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಆನಂದ್ ಪಟೇಲ್ ಮಾತನಾಡಿ, ಮಾರ್ಕೋನಹಳ್ಳಿ ಜಲಾಶಯದಿಂದ ಕಳೆದ 20 ವರ್ಷದಲ್ಲಿ 20 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದಿದೆ. ಆದರೆ, ಒಂದು ಕಿ.ಮೀ ದೂರದಲ್ಲಿರುವ ಮಂಗಳ ಜಲಾಶಯಕ್ಕೆ 2008ರಲ್ಲಿ ಸಂಪರ್ಕ ಕಾಲುವೆ ನಿರ್ಮಿಸಿ ನೀರು ಹರಿಸಲು ಸರ್ಕಾರದಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಿತಿಯ ಮಂಜೂರಾತಿ ಪಡೆಯಲಾಗಿದೆ. ₹ 5 ಕೋಟಿ ವೆಚ್ಚದ ಸಂಪರ್ಕ ನಾಲೆ ನಿರ್ಮಿಸಲು ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಡಾ.ರಂಗನಾಥ್ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನ ನೀರಾವರಿ ಯೋಜನೆಯ ಕಾಮಗಾರಿಗಳಿಗಾಗಿ ಮಂಜೂರಾಗಿದ್ದ ₹ 50 ಕೋಟಿಯನ್ನು ಸಂಸದರು ಮತ್ತು ಶಾಸಕರು, ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ. ಆ ಮೂಲಕ ಕ್ಷೇತ್ರದ ಜನತೆಗೆ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.

ಹೇಮಾವತಿ ವಿತರಣಾ ನಾಲೆ 26ರ ಮೂಲಕ 22 ಸಣ್ಣ ಕೆರೆಗಳನ್ನು ತುಂಬಿಸಿ ಭಗೀರಥ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕರು ಕುಣಿಗಲ್ ದೊಡ್ಡಕೆರೆ, ಚಿಕ್ಕಕೆರೆ, ಕೊತ್ತಗೆರೆ, ಬೇಗೂರು ಕೆರೆಗಳಿಗೆ ಮಾತ್ರ ನೀರು ಹರಿಸಿಲ್ಲ. ಶ್ರೀರಂಗ ಏತ ನೀರಾವರಿ ಎಂಬ ಖಾಲಿ ಪೈಪ್‌ಲೈನ್ ಯೋಜನೆಯಲ್ಲಿ ಶೇಕಡವಾರು ಹಣ ಪಡೆದು ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಹಶೀಲ್ದಾರ್ ಮಹಬಲೇಶ್ವರ್ ಮಾತನಾಡಿ, ನೂತನವಾಗಿ 25 ಸರ್ವೆಯರ್‌ಗಳ ನೇಮಕವಾಗಿದೆ. ಸರ್ವೆ ಕಾರ್ಯಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಂಡು ಅನಧಿಕೃತವಾಗಿ ಕಚೇರಿ ಪ್ರಾರಂಭಿಸುವುದರ ಬಗ್ಗೆ ದೂರು ಬಂದರೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಹೇಮಾವತಿ ನಾಲಾ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೈರಾಜ್ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ ಮತ್ತು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT