ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಶೇ 7.5ಕ್ಕೆ ಹೆಚ್ಚಿಸಲು ಒತ್ತಾಯ

ಜಯಂತಿಯಲ್ಲಿ ವಾಲ್ಮೀಕಿಯ ಗುಣಗಾನ: ಅಧ್ಯಯನ ಪೀಠದ ಭರವಸೆ
Last Updated 13 ಅಕ್ಟೋಬರ್ 2019, 15:36 IST
ಅಕ್ಷರ ಗಾತ್ರ

ತುಮಕೂರು: ನಾಯಕ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕೆಂಬ ಕೂಗು ನಗರದಲ್ಲಿ ಭಾನುವಾರ ಪ್ರತಿಧ್ವನಿಸಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಾಲ್ಮೀಕಿ ಜಯಂತಿ’ಯಲ್ಲಿ ಸಮುದಾಯದ ಮುಖಂಡರು ಮೀಸಲಾತಿ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದಾಗ ಸೇರಿದ್ದ ಜನರೆಲ್ಲರೂ ಕರತಾಡನದ ಮೂಲಕ ಅದನ್ನು ಅನುಮೋದಿಸಿದರು.

ಸದ್ಯ ಇರುವ ಶೇ 3ರಷ್ಟು ಮೀಸಲಾತಿಯಲ್ಲಿ ಬೇರೆ ಸಮುದಾಯದವರು ಸಹ ಪಾಲು ಪಡೆಯುತ್ತಿದ್ದಾರೆ. ಇದರಿಂದ ನಮ್ಮವರಿಗೆ ಕೊರತೆ ಉಂಟಾಗುತ್ತಿದೆ. ಹಾಗಾಗಿ ಮೀಸಲಾತಿಯ ಪ್ರಮಾಣ ಹೆಚ್ಚಿಸಲೇಬೇಕು. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಾಲ್ಮೀಕಿ ಭವನಕ್ಕೆ ಅನುದಾನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್‌.ಆರ್‌.ಶಾಂತಲಾ ರಾಜಣ್ಣ ಒತ್ತಾಯಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ, ತುಮಕೂರು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸುತ್ತೇವೆ. ಅಂತಹ ಪೀಠಗಳಿಂದ ಪೂರ್ವಜರ ಪರಿಚಯ ನಮಗೆ ಆಗಲಿದೆ. ಅದರಿಂದ ನಮ್ಮ ಪಾವಗಡ, ಮಧುಗಿರಿ ಆಳಿದ ಪಾಳೆಗಾರರ ಕುರಿತು ಸಹ ಅಧ್ಯಯನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಸಂಸದ ಜಿ.ಎಸ್‌.ಬಸವರಾಜು, ‘ರಾಮಾಯಣ ನಿಜವಾಗಿಯೂ ನಡೆದಿದ್ದೊ, ಬಿಟ್ಟಿದ್ದೊ ಗೊತ್ತಿಲ್ಲ. ಆ ಶ್ರೇಷ್ಠ ಕಥಾನಕದಲ್ಲಿ ಬರುವ ಮಂಥರೆ, ರಾವಣ ಮನಸ್ಥಿತಿಯ ಕೆಟ್ಟ ಜನರು ಇಂದಿಗೂ ಸಮಾಜದಲ್ಲಿ ಇದ್ದಾರೆ. ಕೇಡನ್ನು ಬಯಸಿದರೆ, ಮೊದಲು ನಮಗೆಯೇ ಕೆಟ್ಟದ್ದು ಆಗುತ್ತದೆ ಎಂಬ ಪಾಠವನ್ನು ರಾಮಾಯಣ ಹೇಳುತ್ತದೆ. ಅಂತಹ ಮಹಾಕಾವ್ಯ ಕೊಟ್ಟ ಆದಿಕವಿ ವಾಲ್ಮೀಕಿಯನ್ನು ಸ್ಮರಿಸಿಕೊಳ್ಳಬೇಕು’ ಎಂದರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಆದರ್ಶ ಪುರುಷನಿಗೆ ರಾಮ, ಆದರ್ಶ ದಂಪತಿಗೆ ರಾಮ-ಸೀತೆ, ಆದರ್ಶ ಸೋದರತ್ವಕ್ಕೆ ರಾಮ-ಲಕ್ಷ್ಮಣ, ಉತ್ತಮ ಸೇವಾ ಮನೋಭಾವ ಹಾಗೂ ಭಕ್ತಿಗೆ ಆಂಜನೇಯ, ಸುಭಿಕ್ಷ ರಾಜ್ಯಕ್ಕೆ ರಾಮರಾಜ್ಯ ಎಂದು ಇಂದಿಗೂ ಜನರು ಆಡುಮಾತಿನಲ್ಲಿ ಉದಾಹರಿಸುತ್ತಾರೆ. ಕಷ್ಟನಷ್ಟ ಅನುಭವಿಸಿದ ಜನರ ಕಥನ–ಕಾವ್ಯಗಳು ದೀರ್ಘಕಾಲ ಬಾಳುತ್ತವೆ’ ಎಂದರು.

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತರ್ಜಾತಿ ವಿವಾಹ ಮಾಡಿಕೊಂಡ ಎರಡು ದಂಪತಿಗೆ ₹ 75,000 ಮೊತ್ತದ ಬಾಂಡ್‌ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಸೋಮಶೇಖರಯ್ಯ, ಎಸ್‌.ರಾಮಚಂದ್ರಯ್ಯ, ದೊಡ್ಡ ಓಬಳಯ್ಯ, ಪರಮೇಶ್ವರಯ್ಯ, ಗಂಗರಾಮಯ್ಯ, ಎಸ್‌.ಮಹದೇವಯ್ಯ, ಮಂಜುಳಾ ಮಹಿಮರಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಮುಖಂಡರಾದ ಟಿ.ಬಿ.ಮಲ್ಲೇಶ್‌, ಅಂಜನ್‌ಕುಮಾರ್‌, ಪ್ರತಾಪ್‌, ದಯಾನಂದ್ ಇದ್ದರು.

*

‘ಕಾಡಿನ ಉತ್ಪನ್ನ ತಿಂದು, ನಾಡು ಕಟ್ಟಿದರು’

ನಾಯಕ ಸಮುದಾಯದವರು ಕಾಡಿನ ಉತ್ಪನ್ನಗಳನ್ನು ಸೇವಿಸಿಕೊಂಡು, ನಾಡನ್ನು ಕಟ್ಟಿದವರು ಎಂದು ತುಮಕೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಎಂ.ಕೊಟ್ರೇಶ್‌ ಹೇಳಿದರು.

ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ವಾಲ್ಮೀಕಿಯು ಕೌಟುಂಬಿಕ ಬದುಕನ್ನು ಸಾಮಾಜಿಕ ಬದ್ಧತೆಯಿಂದ ಕಾವ್ಯದಲ್ಲಿ ಅನಾವರಣಗೊಳಿಸಿದರು. ಆ ಕಾವ್ಯವನ್ನು ಎಲ್ಲ ಸಮುದಾಯದವರು ಕಣ್ಣಿಗೆ ಒತ್ತಿಕೊಂಡು ಓದುತ್ತಾರೆ. ಅದಕ್ಕೆ ಪರ್ಯಾಯವಾದ ಕೃತಿ ಈವರೆಗೂ ರಚನೆಯಾಗಿಲ್ಲ ಎಂದರು.

ತುಮಕೂರು ವಿ.ವಿ.ಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ, ಚರಿತ್ರೆಯನ್ನು ಹೊರತರಬೇಕು. ಅದರಿಂದ ಚಾರಿತ್ರಿಕ ಹಿನ್ನೆಲೆ ಪರಿಚಯಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT