ಶನಿವಾರ, ಅಕ್ಟೋಬರ್ 16, 2021
29 °C
ರೈತರ ಬೆಳೆಗಳಿಗೆ ಸಿಗದ ಸ್ಪರ್ಧಾತ್ಮಕ ದರ l ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ–ಆರೋಪ

ತುಮಕೂರು: ರಸ್ತೆಯ ಬದಿಯಲ್ಲೇ ತರಕಾರಿ ಮಾರುಕಟ್ಟೆ

ಎಚ್.ಸಿ.ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಶಿರಾ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ತರಕಾರಿ ಮತ್ತು ಹಣ್ಣು ಮಾರು
ಕಟ್ಟೆ ನಡೆಸಲು ಸೂಕ್ತ ಜಾಗವಿಲ್ಲದೆ ರಸ್ತೆ ಬದಿಯಲ್ಲಿ ನಡೆಯುತ್ತಿದೆ.

ಶಿರಾ ನಗರಸಭೆಯಾಗಿ 2006ರಲ್ಲಿ ಮೇಲ್ದರ್ಜೆಗೆ ಏರಿದ್ದರೂ ತರಕಾರಿ ಮಾರುಕಟ್ಟೆ ಇಲ್ಲದಿರುವುದು ಸೋಜಿಗ ಮೂಡಿಸುತ್ತದೆ. ಜನರು ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಂದಲೇ ಖರೀದಿ ಮಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ 234ರ ಬುಕ್ಕಾಪಟ್ಟಣ ರಸ್ತೆ ಹಾಗೂ ಹಳೆಯ ರಾಷ್ಟ್ರೀಯ ಹೆದ್ದಾರಿ-4ರ ಬುಕ್ಕಾಪಟ್ಟಣ ವೃತ್ತದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ಬೆಳಗಿನ ಸಮಯದಲ್ಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದು ಸಂಚಾರಕ್ಕೆ ಕಷ್ಟವಾಗುತ್ತಿದೆ. ಬೆಳಗಿನ ಸಮಯದಲ್ಲಿ ಮಳೆ ಬಂದರೆ ರಸ್ತೆ ಮಧ್ಯೆ
ವ್ಯಾಪಾರ ನಡೆಸುವುದು ಅನಿವಾರ್ಯವಾಗಿದೆ.

ಮಳೆ ಬಂದರೆ ರೈತರ ಗೋಳು ಕೇಳುವಂತಿಲ್ಲ, ಗ್ರಾಮೀಣ ಪ್ರದೇಶದಿಂದ ತರಕಾರಿ ಮತ್ತು ಸೊಪ್ಪು ತಂದ ರೈತರು ಮಾರಾಟವಾಗದೆ ಅದನ್ನು ವಾಪಸ್‌ ತೆಗೆದುಕೊಂಡು ಹೋಗಲು ಸಾಧ್ಯವಾಗದೆ, ಜನರು ಕೇಳಿದಷ್ಟಕ್ಕೆ ಒಲ್ಲದ ಮನಸ್ಸಿನಿಂದ ಕೊಟ್ಟು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ.

ರಸ್ತೆಯಲ್ಲಿ ವ್ಯಾಪಾರ ಮಾಡುವವರಿಂದ ಸುಂಕ ವಸೂಲಿ ಮಾಡುವ ನಗರಸಭೆ ಅವರಿಗೆ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಆರೋಪ ಬಲವಾಗಿದೆ. ಸೌಲಭ್ಯ ನೀಡುವ ಬದಲು ಸುಲಭವಾಗಿ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿದೆ. ಕೆಲವು ಮಧ್ಯವರ್ತಿಗಳು ಸಹ ಇದರ ಲಾಭ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ರೈತರ ಶೋಷಣೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನುವುದು ರೈತರ ದೂರು.

ವ್ಯರ್ಥವಾದ ಮಾರುಕಟ್ಟೆ: ಲಕ್ಷ್ಮೀ ನಗರದಲ್ಲಿ 2005ರಲ್ಲಿ ಪುರಸಭೆ ವತಿಯಿಂದ ₹42 ಲಕ್ಷ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ ಅಲ್ಲಿ ಒಂದು ದಿನ‌ ಸಹ ತರಕಾರಿ ಮಾರಾಟ ನಡೆಯಲಿಲ್ಲ. ನಗರಸಭೆಯ ನಿರ್ಲಕ್ಷ್ಯದಿಂದಾಗಿ ಜನರ ತೆರಿಗೆ ಹಣ ಪೋಲಾಗಿದ್ದು, ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೋವಿಡ್ ಸಮಯದಲ್ಲಿ ವಿವೇಕಾನಂದ ಕ್ರೀಡಾಂಗಣಕ್ಕೆ‌ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿತ್ತು. ಮತ್ತೆ ಈಗ ಬುಕ್ಕಾಪಟ್ಟಣ ವೃತ್ತಕ್ಕೆ ಸ್ಥಳಾಂತರಿಸಲಾಗಿದೆ. ಪದೇ ಪದೇ ಸ್ಥಳ ಬದಲಾಯಿಸಿದರೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ. ಆದ್ದರಿಂದ ಶಾಶ್ವತವಾಗಿ ಒಂದು ಕಡೆ ವ್ಯಾಪಾರ ನಡೆಸಲು ಮಾರುಕಟ್ಟೆ ನಿರ್ಮಾಣ ಮಾಡಿದರೆ ಅನುಕೂಲ ಎನ್ನುವುದು ಜನರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.