ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ರಕ್ಷಣೆಗೆ ಕೈ ಜೋಡಿಸಿ ಕೆಲಸ ಮಾಡಿ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಅಧಿಕಾರಿಗಳಿಗೆ ಆದೇಶ
Last Updated 20 ಜುಲೈ 2019, 14:52 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲೆಯಲ್ಲಿ ಬರಗಾಲವಿದೆ. ಮಳೆ ಸಾಧ್ಯತೆಯೂ ಕಡಿಮೆಯಾಗುತ್ತಿದೆ. ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೃಷಿ ಸಂಬಂಧಿತ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಫಸಲ್ ಬಿಮಾ ಯೋಜನೆ ಮಾಡಿಸಲು ಹೆಚ್ಚು ಮನವರಿಕೆ ಮಾಡಿಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಹೇಳಿದರು.

ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ‘ಕಳೆದ ವರ್ಷ ವಿಮೆ ಮಾಡಿಸಿದ ರೈತರಲ್ಲಿ ಜಿಲ್ಲೆಯ 9000 ರೈತರಿಗೆ ಪರಿಹಾರ ಮೊತ್ತ ಬಂದಿರಲಿಲ್ಲ. ಜಿಲ್ಲಾಧಿಕಾರಿ, ಬ್ಯಾಂಕ್ ಅಧಿಕಾರಿ ಹಾಗೂ ಇಲಾಖೆ ಉನ್ನತ ಅಧಿಕಾರಿಗಳು ಸಭೆ ನಡೆಸಿ ಪರಿಶೀಲನೆ ನಡೆಸಿ ಲೋಪ ಪತ್ತೆ ಮಾಡಲಾಗಿತ್ತು. 6900 ರೈತರಿಗೆ ₹ 6.7 ಕೋಟಿ ಪರಿಹಾರ ಮೊತ್ತ ಸಿಗುತ್ತಿದೆ. ಸಂಬಂಧಪಟ್ಟ ರೈತರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ವಿಳಂಬ ಮಾಡಿದರೆ ರೈತರು ಗ್ರಾಹಕ ವೇದಿಕೆಗೆ ಹೋಗುವ ಸಾಧ್ಯತೆಯ ಬಗ್ಗೆಯೂ ಇಲಾಖೆಯು ವಿಮೆ ಕಂಪನಿಗೆ ಎಚ್ಚರಿಕೆ ನೀಡಿದೆ’ ಎಂದು ವಿವರಿಸಿದರು.

‘ಕಳೆದ ವರ್ಷ ವಿಮೆ ಪರಿಹಾರ ಬಂದಿಲ್ಲ ಎಂಬ ಕಾರಣಕ್ಕೆ ಅನೇಕ ರೈತರು ಈ ವರ್ಷ ಫಸಲ್ ಬಿಮಾ ಯೋಜನೆ ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕರ ಪತ್ರ ಹಂಚುವುದು, ವಿಮೆ ಕಂಪನಿ ಪ್ರತಿನಿಧಿಗಳ ಮೂಲಕ ಪ್ರಚಾರ ಮಾಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ರೈತ ಸಿರಿ ಯೋಜನೆ: ಸಿರಿ ಧಾನ್ಯ ಬೆಳೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಈ ಬಾರಿ ಪ್ರತಿ ಹೆಕ್ಟೇರ್‌ಗೆ ₹ 10,000 ಸಹಾಯಧನ ನೀಡುತ್ತಿದೆ. ಒಬ್ಬ ರೈತರು ಎರಡು ಹೆಕ್ಟೇರ್‌ವರೆಗೂ ಸಹಾಯಧನ ಪಡೆಯಬಹುದಾಗಿದೆ. ಈ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ‘ಹವಾಮಾನ ಆಧಾರಿತ ಬೆಳೆ ವಿಮೆ’ ಮಾಡಿಸಿದ 932 ರೈತರಲ್ಲಿ 702 ರೈತರಿಗೆ ಪರಿಹಾರ ದೊರಕಿದೆ. 232 ರೈತರಿಗೆ ಬ್ಯಾಂಕ್ ಪಾಸ್ ಬುಕ್, ಆಧಾರ್ ಗುರುತಿನ ಚೀಟಿ ಸಂಖ್ಯೆ ನೋಂದಣಿ ಸೇರಿದಂತೆ ನಾನಾ ಕಾರಣಗಳಿಂದ ಬಂದಿಲ್ಲ. ಅದನ್ನು ಸರಿಪಡಿಸಿ ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಮೂರ್ತಿ ಮಾತನಾಡಿ, ‘ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್‌ ನಿರ್ಮಾಣಕ್ಕೆ ಸಹಾಯಧನ ಪಡೆದಿದ್ದಾರೆ. ಸಮರ್ಪಕವಾಗಿ ಬಳಸಿಕೊಂಡಂತೆ ಕಾಣಿಸುವುದಿಲ್ಲ. ಅನೇಕ ಕಡೆ ಹಾಗೆ ಉಳಿದಿವೆ. ಪರಿಶೀಲನೆ ಮಾಡಿದ್ದೀರಾ? ಸಹಾಯಧನ ಪಡೆಯುವುದಕ್ಕಾಗಿಯೇ ಯೋಜನೆ ಉದ್ದೇಶಕ್ಕೆ ಪೆಟ್ಟು ಬೀಳಬಾರದು’ ಎಂದು ಹೇಳಿದರು.

ಪರಿಶೀಲನೆ ನಡೆಸಲಾಗಿದ್ದು, ಅಂತಹ ಫಲಾನುಭವಿಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗೆ ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ತುಮಕೂರು ತಾಲ್ಲೂಕಲ್ಲಿ ಮೇವು ಬ್ಯಾಂಕ್ ತೆರೆದಿಲ್ಲ

ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ,‘ ಜಿಲ್ಲೆಯ ಬೇರೆ ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ತುಮಕೂರು ತಾಲ್ಲೂಕಿನಲ್ಲಿ ಯಾಕೆ ತೆರೆದಿಲ್ಲ ಎಂದು ಪ್ರಶ್ನಿಸಿದರು.

ಪಶುಪಾಲನಾ ಇಲಾಖೆ ಅಧಿಕಾರಿ ಡಾ. ಪ್ರಕಾಶ್ ಮಾತನಾಡಿ,‘ ತುಮಕೂರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಮೇವಿನ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ನಿರ್ವಹಣೆ ನೋಡಲ್ ಅಧಿಕಾರಿ ನಾನೇ ಆಗಿರುವುದರಿಂದ ಕೋರಾ ಹೋಬಳಿ ವ್ಯಾಪ್ತಿಯಲ್ಲಿ ಈಗ ಸ್ವಲ್ಪ ಮೇವಿನ ಸಮಸ್ಯೆ ಆಗಿದ್ದು, ಅಲ್ಲಿ ಮೇವು ಬ್ಯಾಂಕ್ ತೆರೆಯುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 29 ಮೇವು ಬ್ಯಾಂಕ್‌ಗಳಿಗೆ 1718 ಮೆ.ಟನ್ ಮೇವು ಖರೀದಿಸಿದ್ದು, 2.075 ಜಾನುವಾರುಗಳಿಗೆ ಮೇವು ದೊರಕಿದೆ. ₹ 16.86 ಕೋಟಿ ಖರ್ಚು ಮಾಡಲಾಗಿದೆ. 120 ಟನ್ ಮೇವನ್ನು ಗುಣಮಟ್ಟ ಇಲ್ಲದ್ದಕ್ಕೆ ವಾಪಸ್ ಕಳಿಸಲಾಗಿದೆ’ ಎಂದು ವಿವರಿಸಿದರು.

‘ಪಶು ಭಾಗ್ಯ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳ ಸಹಕಾರ ಇಲಾಖೆಗೆ ಲಭಿಸುತ್ತಿಲ್ಲ. ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೂ ಇದು ಗಮನಕ್ಕೆ ಇದೆ. ಶಿರಾ ತಾಲ್ಲೂಕಿನಲ್ಲಿ 2016–17ರಲ್ಲಿ ಪಶು ಭಾಗ್ಯ ಯೋಜನೆಗೆ ಗುರುತಿಸಿದ ಫಲಾನುಭವಿಗಳಿಗೆ ಇಲಾಖೆಯ ನೆರವು ಬ್ಯಾಂಕುಗಳ ಅಸಹಕಾರದಿಂದ ಲಭಿಸಿಲ್ಲ. ಸಭೆ ಕರೆದು ಪರಿಹರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ವೇದಿಕೆಯಲ್ಲಿದ್ದರು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆ ಪ್ರಗತಿ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT