ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ರೈತರ ಕೆಲಸ ಮಾಡಿಕೊಡಿ: ಮಸಾಲೆ ಜಯರಾಮ್

ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಸಲಹೆ
Last Updated 12 ಜನವರಿ 2021, 4:02 IST
ಅಕ್ಷರ ಗಾತ್ರ

ಗುಬ್ಬಿ: ತಹಶೀಲ್ದಾರ್ ಕೆಡಿಪಿ ಸಭೆ ನಡೆಯುವ ವಿಚಾರ ತಿಳಿದು ಉದ್ದೇಶಪೂರ್ವಕವಾಗಿ ರಜೆ ಮೇಲೆ ತೆರಳಿದ್ದಾರೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ರವರು ಗಂಭೀರ ಆರೋಪ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ತಹಶೀಲ್ದಾರ್‌ ಗೈರುಹಾಜರಿಯಲ್ಲಿ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕ ಜಯರಾಮ್ ಗುಡುಗಿದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ‘ತಾಲ್ಲೂಕಿನಲ್ಲಿ ಬಗರ್ ಹುಕುಂ ಅಡಿಯಲ್ಲಿ ಭೂಮಿ ಮಂಜೂರಾಗಿ ಸಾಗುವಳಿ ಚೀಟಿ ಪಡೆದಿಲ್ಲದ ರೈತರಿಗೆ ಹಣ ಕಟ್ಟಿಸಿಕೊಂಡು ಸಾಗುವಳಿ ಚೀಟಿಯನ್ನು ಕೊಡಬೇಕು. ಈಗಾಗಲೇ ಸಾಗುವಳಿ ಚೀಟಿ ಪಡೆದು ಹಣ ಕಟ್ಟಿರುವ ರೈತರಿಗೆ ಖಾತೆ ಮಾಡಿಕೊಡಬೇಕು. ಯಾವ ರೈತರಿಂದಲೂ ಲಂಚ ಪಡೆಯಬಾರದು. ಕಂದಾಯ ಇಲಾಖೆ ಅಧಿಕಾರಿ ಈಗಾಗಲೇ ಹಣ ಪೀಕಿರುವುದು ಸಾಕು. ರೈತರಿಂದ ಲಂಚ ಪಡೆಯದೆ ಅವರ ಕೆಲಸ ಮಾಡಿಕೊಡಬೇಕು’ ಎಂದು ಸಭೆಯಲ್ಲಿ ಹಾಜರಿದ್ದ ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಗನ್ನಾಥ್ ಮಾತನಾಡಿ, ‘ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರ ಮೇಲೆ ಅಬಕಾರಿ ಅಧಿಕಾರಿಗಳು ಕೇಸು ದಾಖಲಿಸುತ್ತಾರೆ. ಆದರೆ ಅವರಿಗೆ ಸರಬರಾಜು ಮಾಡುವ ಸನ್ನದುದಾರ ಮದ್ಯದಂಗಡಿಯವರ ಮೇಲೆ ಕ್ರಮವನ್ನು ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಸಾಮಾಜಿಕ ಅರಣ್ಯ ಅಧಿಕಾರಿ ಮಾತನಾಡಿ, ತಾಲ್ಲೂಕಿನ ಗಳಗ ಕೆರೆ ಅಂಗಳದಲ್ಲಿ 4 ಸಾವಿರ ಗಿಡ ನೆಟ್ಟಿದ್ದೇವೆ ಎಂದರು. ಇದರಿಂದ ಸಿಟ್ಟೆಗೆದ್ದ ಶಾಸಕ ಎಸ್ಆರ್ ಶ್ರೀನಿವಾಸ್, ಕೆರೆಗೆ ನೀರು ಬಿಟ್ಟಿರುವುದರಿಂದ ಎಲ್ಲ ಗಿಡಗಳು ಕೊಳೆತು ಹೋಗುತ್ತವೆ. ಕೆರೆಯಂಗಳದಲ್ಲಿ ಗಿಡನೆಡಲು ಹೇಳಿದ್ದು ಯಾರು? ಅನುದಾನವನ್ನು ಬೇಕಾಬಿಟ್ಟಿ ವ್ಯರ್ಥ ಮಾಡಬೇಡಿ ಎಂದು
ಎಚ್ಚರಿಸಿದರು.

ಬೆಸ್ಕಾಂನ ಎಇಇ ಗೈರು ಹಾಜರಾಗಿರುವ ಬಗ್ಗೆ ಗರಂ ಆದ ಶಾಸಕರು ತಕ್ಷಣವೇ ಅವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜನಪ್ಪ, ಡಾ. ನವ್ಯ ಬಾಬು, ಯಶೋದಮ್ಮ ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ, ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT