ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ, ಜಾಗೃತಿ ಜಾಥಾ
Published 13 ಜೂನ್ 2024, 3:10 IST
Last Updated 13 ಜೂನ್ 2024, 3:10 IST
ಅಕ್ಷರ ಗಾತ್ರ

ತುಮಕೂರು: ಮಕ್ಕಳು ಆಟ, ಪಾಠಗಳಿಂದ ತಮ್ಮ ಬಾಲ್ಯ ಕಳೆಯಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ದುಡಿಮೆಗೆ ದೂಡುವುದು ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹೇಳಿದರು.

ನಗರದಲ್ಲಿ ಬುಧವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಿಲ್ಲಾ ಆಡಳಿತ, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕೆಲಸಕ್ಕೆ ಹಚ್ಚಿದರೆ ಮಾನಸಿಕ, ದೈಹಿಕವಾಗಿ ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ. ಗ್ಯಾರೇಜ್, ಕಾರ್ಖಾನೆ, ಅಂಗಡಿಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿರುವುದು ಕಂಡು ಬಂದರೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ‘ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಬೇಕು. ಯಾವುದೇ ಕಾರಣಕ್ಕೂ ಕೆಲಸಕ್ಕೆ ಕಳುಹಿಸಬಾರದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ‘ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಶಿಕ್ಷಣದ ಹಕ್ಕನ್ನು‌ ಮೊಟಕುಗೊಳಿಸಲಿದೆ. ಪ್ರತಿಯೊಂದು ಅಂಗಡಿ, ವರ್ಕ್‌ ಶಾಪ್‌ಗಳಿಗೆ ಭೇಟಿ ನೀಡಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಶುರುವಾದ ಜಾಥಾವು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಖಾಂತರ ಸಾಗಿ ಸ್ವತಂತ್ರ್ಯ ಚೌಕ, ಅಶೋಕ ರಸ್ತೆಯಿಂದ ಗುಬ್ಬಿ ವೀರಣ್ಣ ರಂಗಮಂದಿರ ತಲುಪಿತು. ಕಾರ್ಮಿಕ ಅಧಿಕಾರಿ ಕೆ.ತೇಜಾವತಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಶ್ರೀಧರ್, ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT