ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಗೆಟ್ಟ ನಗರಕ್ಕೆ ಬೇಕಿದೆ ಕಲಾಸಿಂಚನ

ಪೋಸ್ಟರ್‌ ಹಾವಳಿಯಿಂದ ಹಾಳಾದ ಸೌಂದರ್ಯ
Last Updated 4 ಏಪ್ರಿಲ್ 2016, 6:27 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರು, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಗೋಡೆಗಳ ಮೇಲೆ ರಾಜ್ಯ ಹಾಗೂ ದೇಶದ ಇತಿಹಾಸದ ಘಟನಾವಳಿ, ಪ್ರಾಣಿ ಪಕ್ಷಿ ಹಾಗೂ ಪರಿಸರದ ಚಿತ್ರಗಳನ್ನು ಬಿಡಿಸುವ ಮೂಲಕ ಅಲ್ಲಿನ ಪಾಲಿಕೆ ನಗರದ ಸೌಂದರ್ಯ ಇಮ್ಮಡಿಗೊಳಿಸಿವೆ. ಆದರೆ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಹೆಸರಿನ ನಗರದಲ್ಲಿ ಮಾತ್ರ ನಗರದ ಸೌಂದರ್ಯ ಹಾಳಾಗಿದೆ.

ಅಶ್ಲೀಲ ಜಾಹೀರಾತು, ಬೇಕಾಬಿಟ್ಟಿ ಭಿತ್ತಿ ಪತ್ರಗಳು, ಸಿನಿಮಾ ಪೋಸ್ಟರ್‌ಗಳಿಂದ ನಗರ ಅಂದಗೆಟ್ಟಿದೆ. ಅಶ್ಲೀಲ ಜಾಹೀರಾತಿಗೆ ಕಡಿವಾಣ ಹಾಕಬಹುದಾದ ಕಾನೂನುಗಳಿದ್ದರೂ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ. ಇಂಥ ಅನಾರೋಗ್ಯಕರ ವಾತಾವರಣಕ್ಕೆ ಇತಿಹಾಸ, ಸಾಂಸ್ಕೃತಿಕ ಹಿರಿಮೆ ಸಾರುವ ಗೋಡೆ ಬರಹಗಳು ಮದ್ದಾಗಲಿವೆ  ಎಂದು ಹೇಳುತ್ತಾರೆ ನಗರದ ಜನರು.

ನಗರದ ಬಹುತೇಕ ಸರ್ಕಾರಿ ಕಟ್ಟಡಗಳ ಗೋಡೆ, ಅಂಡರ್‌ಪಾಸ್, ಮೇಲ್ಸೇತುವೆ ಗೋಡೆ ಮೇಲೆ ಅಕ್ರಮ ಜಾಹೀರಾತು, ಭಿತ್ತಿ ಪತ್ರಗಳು, ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇದಕ್ಕೆ ತಡೆ ಹಾಕಲು ಗೋಡೆ ಮೇಲೆ ಕಲಾಕೃತಿ ಮೂಡಿಸುವ ಯೋಜನೆಗೆ ಏಕೆ ಪಾಲಿಕೆ ಕೈ ಹಾಕಿಲ್ಲ ಎಂದು  ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅಂದಕ್ಕಷ್ಟೆ ಸೀಮಿತವಲ್ಲ: ಬೆಂಗಳೂರು ಮತ್ತು ತುಮಕೂರಿನ ನಡುವೆ ಅಂತಹ ವ್ಯತ್ಯಾಸವೇನಿಲ್ಲ. ಒಂದು ಹಂತದಲ್ಲಿ ಬೆಂಗಳೂರಿನ ಹೊರವಲಯದಂತೆ ಗೋಚರವಾಗುತ್ತದೆ. ಬೆಂಗಳೂರು ನಗರದಂತೆ ಸುಂದರವಾಗಲು ಇಲ್ಲಿಯೂ ಅಂತಹ  ಪ್ರಯೋಗ ಮಾಡಿದರೆ ನಗರದ ಸೌಂದರ್ಯ ಹೆಚ್ಚಿಸಬಹುದು.

ಗೋಡೆಗಳ ಮೇಲೆ ಚಿತ್ತಾರ ಬಿಡಿಸುವ ಮೂಲಕ  ಐತಿಹಾಸಿಕ ಸ್ಮಾರಕಗಳು, ಸಂಸ್ಕೃತಿ, ಪ್ರಾಣಿ, ಪಕ್ಷಿಗಳು, ಸಾಧಕರನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲದೇ, ಸ್ಥಳೀಯ ಕಲಾವಿದರಿಗೆ ಉದ್ಯೋಗ ನೀಡುವ ಜತೆಗೆ ಮನ್ನಣೆ ನೀಡಿದಂತಾಗುತ್ತದೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಸರ್ಕಾರಿ ಗೋಡೆಗಳ ಮೇಲೆ ಬಿಟ್ಟಿಯಾಗಿ ಹಚ್ಚಲಾಗುವ ಅಕ್ರಮ ಜಾಹೀರಾತು, ಭಿತ್ತಿಪತ್ರ ಹಾಗೂ ಸಿನಿಮಾ ಪೋಸ್ಟರ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ನಗರವು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ, ಸ್ವಚ್ಛತೆಗೆ ಗಮನ ನೀಡುವವರೇ ಇಲ್ಲದಾಗಿದೆ. ಎಲ್ಲೆಂದರಲ್ಲಿ ಗೋಡೆ ಪಕ್ಕದಲ್ಲಿ ಕಸ ಹಾಗೂ ತ್ಯಾಜ್ಯ ಚೆಲ್ಲುವುದು, ಮೂತ್ರ ವಿಸರ್ಜನೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಯಲು  ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಲು ಗಮನ ಹರಿಸಬೇಕು ಎಂದು  ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿಗೆ ತೆರಳಿದಾಗೊಮ್ಮೆ ಅಲ್ಲಿನ ಗೋಡೆಗಳ ಮೇಲೆ ಬರೆದ ಚಿತ್ರವನ್ನು ನೋಡಿ, ರಾಜ್ಯದ ಇತರ ಭಾಗಗಳಲ್ಲಿರುವ ಎಷ್ಟೋ ಐತಿಹಾಸಿಕ ಕ್ಷೇತ್ರಗಳ ಪರಿಚಯವಾಗಿದೆ. ಇದೇ ರೀತಿ ನಮ್ಮೂರಲ್ಲಿಯೂ ಆದರೆ, ನನ್ನಂತೆ ಇಲ್ಲಿರುವ ಜನತೆಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆ ಚಿಂತಿಸಬೇಕು ಎಂದು  ಹನುಮಂತಪುರದ ಗೃಹಿಣಿ ಪಾರ್ವತಿ ಹೇಳುತ್ತಾರೆ.

ನಮ್ಗೂ ಕೆಲಸ ಸಿಗಲಿದೆ
ಜಿಲ್ಲೆಯ ಐತಿಹಾಸಿಕ ಸ್ಥಳ, ಪರಂಪರೆ ಬಿಂಬಿಸುವ ಚಿತ್ರಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಬಿಡಿಸುವುದರಿಂದ ಹೊರಗಿನವರಿಗೆ ಜಿಲ್ಲೆಯ ಮಹತ್ವ ತಿಳಿಯಲಿದೆ. ಅರಣ್ಯ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರಿಗೆ ಪ್ರೋತ್ಸಾಹ ನೀಡಲು ಇಂಥ ಮಹತ್ವದ ಕಾರ್ಯಕ್ಕೆ ಮುಂದಾಗಬೇಕು.

ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರು ಹಾಗೂ ಕಲಾವಿದರು ಸೇರಿ 200 ಮಂದಿ ಇದ್ದೇವೆ. ನಮಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೂತಯ್ಯ ಹೇಳಿದರು.

ಎಲ್ಲೆಲ್ಲಿ ಚಿತ್ರ ಬಿಡಿಸಬಹುದು

* ಎಸ್‌ಪಿ ಕಚೇರಿ
* ತುಮಕೂರು ವಿಶ್ವವಿದ್ಯಾನಿಲಯ
* ಜಿಲ್ಲಾಧಿಕಾರಿ ಕಚೇರಿ
* ಸರ್ಕಾರಿ ಕಾಲೇಜು
* ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌
* ಉಪ್ಪಾರಹಳ್ಳಿ ಫ್ಲೈ ಓವರ್‌
* ಜಿಲ್ಲಾ ಕ್ರೀಡಾಂಗಣ
* ಶೆಟ್ಟಿಹಳ್ಳಿ ಅಂಡರ್‌ಪಾಸ್‌
* ಕುಣಿಗಲ್‌ ರಸ್ತೆ ರೈಲ್ವೆ ಕೆಳಸೇತುವೆ
* ಲೋಕೋಪಯೋಗಿ ಇಲಾಖೆ ಕಾಂಪೌಂಡ್‌
* ಜಿಲ್ಲಾಸ್ಪತ್ರೆ ಕಾಂಪೌಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT