ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಚೌಕ ನಿರ್ವಹಣೆಗೆ ಪಾಲಿಕೆ ಉಪೇಕ್ಷೆ

ಮೈಸೂರು ಚಲೋ ಚಳವಳಿ ನೆನಪಿಗೆ ಗಿಡಗಂಟಿಗಳ ಪರದೆ, ಇತಿಹಾಸದ ನೆನಪು ಮಸಕು
Last Updated 20 ಜುಲೈ 2015, 9:01 IST
ಅಕ್ಷರ ಗಾತ್ರ

ತುಮಕೂರು: ಇದು ಸ್ವಾತಂತ್ರ್ಯ ಚೌಕ. ಈ ಹೆಸರು ಕೇಳಿದರೆ ರೋಮಾಂಚನ. ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆ, ತ್ಯಾಗ ಬಲಿದಾನದ ಹಿರಿಮೆ ಸಾರುವ ಸ್ಮಾರಕ ಇರುವ ಸ್ಥಳ. ಪ್ರತಿಯೊಬ್ಬರೂ ಗೌರವಿಸಲೇಬೇಕಾದ ಸ್ಥಳವಿದು.

ಆದರೆ ಇಂಥ ಸ್ಮಾರಕ ಸಾಕಷ್ಟು ಉಪೇಕ್ಷೆಗೊಳಗಾಗಿದೆ. ಸ್ವಾತಂತ್ರ್ಯ ಚೌಕ ಎಂಬ ಹೆಸರು ಕಂಡು ಅದರ ಬಳಿ ಹೋಗಿ ನೋಡಿದಾಗ ಪ್ರತಿಯೊಬ್ಬರಿಗೂ ನೋವುಂಟು ಮಾಡುತ್ತದೆ. ನಗರದ ಜಿಲ್ಲಾಡಳಿತ ಕಚೇರಿ ಸಮೀಪ, ಕೇಂದ್ರ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ‘ಸ್ವಾತಂತ್ರ್ಯ ಚೌಕ’ದ ಸ್ಥಿತಿ ಹೇಳದಾಗಿದೆ.

ಸ್ವಾತಂತ್ರ್ಯ ಹೋರಾಟಗಾರರು, ಅಭಿಮಾನಿಗಳ ಎಷ್ಟೋ ವರ್ಷದ ಹೋರಾಟದ ಬಳಿಕ ತುಮಕೂರು ಮಹಾನಗರ ಪಾಲಿಕೆ ಈ ಸ್ಥಳಕ್ಕೆ ಸ್ವಾತಂತ್ರ್ಯ ಚೌಕ ಎಂದು ನಾಮಕರಣ ಮಾಡಿದೆ. ಸ್ವಾತಂತ್ರ್ಯ ಚೌಕ, ಮಹಾನಗರ ಪಾಲಿಕೆ ಎಂಬ ಹೆಸರನ್ನು ಬರೆಸಿದೆ. ಆದರೆ, ನಿರ್ವಹಣೆ ಮಾತ್ರ ಮರೆತಿದೆ.

1947 ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿದಾಗ ಮೈಸೂರು ಸಂಸ್ಥಾನದ 9 ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಕ್ಕಿರಲಿಲ್ಲ. ಮೈಸೂರು ಮಹಾರಾಜರು ಒಕ್ಕೂಟ ವ್ಯವಸ್ಥೆಗೆ ಸೇರಲು ಹಿಂದೇಟು ಹಾಕಿದ್ದರು. ಇದನ್ನು ವಿರೋಧಿಸಿ ತುಮಕೂರಿನಲ್ಲಿ ನಡೆದ ‘ಮೈಸೂರು ಚಲೋ’ ಹೋರಾಟ ತೀವ್ರಗೊಂಡಾಗ ಹುತಾತ್ಮರಾದ ನಂಜುಂಡಪ್ಪ, ಗಂಗಪ್ಪ, ರಾಮಚಂದ್ರ (ಗೋರೂರು ರಾಮಸ್ವಾಮಿ ಅಯ್ಯಂಗಾರ ಪುತ್ರ) ಹೋರಾಟಗಾರರ ಸ್ಮಾರಕ ಇರುವ ಸ್ಥಳ ಈ ಸ್ವಾತಂತ್ರ್ಯ ಚೌಕ.

ಸ್ವಾತಂತ್ರ್ಯ ಚೌಕ ನೋಡಿದೊಡನೆ ‘ಮೈಸೂರು ಚಲೋ’ ಹೋರಾಟದ ಕಥೆಯನ್ನು ಸ್ಮಾರಕ ಬಿಚ್ಚಿಡುತ್ತದೆ. ಆದರೆ ಈ ಸ್ಮಾರಕವೇ ಸಾರ್ವಜನಿಕರಿಗೆ ಕಾಣದಂತೆ ಗಿಡಗಂಟಿಗಳಲ್ಲಿ ಮುಚ್ಚಿ ಹೋಗಿದೆ. ಸ್ಮಾರಕ ನೋಡಬೇಕಾದರೆ ಪ್ರಯಾಸ ಪಟ್ಟು ನೋಡಬೇಕು. ಆರು ರಸ್ತೆಗಳು ಸಂಧಿಸುವ ವೃತ್ತದಲ್ಲಿ ಈ ಚೌಕ ಇದೆ. ಹೀಗಾಗಿ ಸಾಕಷ್ಟು ವಾಹನ ಸಂಚಾರ ಇರುತ್ತದೆ. ಈ ವಾಹನಗಳ ಆರ್ಭಟದಲ್ಲಿ ತೂರಿಕೊಂಡು ಹೋಗಿ ಸ್ಮಾರಕ ನೋಡಲು ಕಷ್ಟವಾಗಿದೆ.

ಪರಿಣಾಮ ದೂರದಿಂದಲೇ ಸ್ವಾತಂತ್ರ್ಯ ಚೌಕ ಎಂಬ ಹೆಸರಿನ ಬೋರ್ಡ್‌ ನೋಡಿ ಮುಂದೆ ಸಾಗುತ್ತಾರೆ. ಆದರೆ, ಸ್ಮಾರಕದ ಅಂಶಗಳು ಗೊತ್ತಾಗುವುದೇ ಇಲ್ಲ. ಚೌಕದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಕಲಾಗಿದೆ. ಹರಿದ ಫ್ಲೆಕ್ಸ್ ಈ ಆವರಣದಲ್ಲಿಯೇ ಬಿದ್ದಿವೆ. ಇದೇ ಸ್ಥಿತಿ ಮಂದುವರಿದರೆ ಫ್ಲೆಕ್ಸ್ ಸೇರಿದಂತೆ ತ್ಯಾಜ್ಯ ವಸ್ತುಗಳಲ್ಲಿ ಸ್ವಾತಂತ್ರ್ಯ ಚೌಕದ ಸ್ಮಾರಕ ಮುಚ್ಚಿ ಹೋಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಚೌಕದ ಆವರಣದಲ್ಲಿರುವ ಸ್ಮಾರಕಕ್ಕೆ ಕಟ್ಟೆ ಕಟ್ಟಿಸಿ ಎತ್ತರಿಸಬೇಕು. ಸಾರ್ವಜನಿಕರಿಗೆ ಎದ್ದು ಕಾಣಬೇಕು. ಗಿಡಗಂಟೆಗಳನ್ನು ತೆಗೆದು ಹಾಕಬೇಕು. ಸ್ವಚ್ಛಗೊಳಿಸಬೇಕು. ಮಹಾನಗರ ಪಾಲಿಕೆಯೂ ಗಮನಹರಿಸಿ ನಿರ್ವಹಿಸಿದರೆ ಸ್ಮಾರಕಕ್ಕೆ ಗೌರವ ಸಲ್ಲಿಸದಂತಾಗುತ್ತದೆ.
1947ರಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನಾವು ಪ್ರತಿಯಾಗಿ ಕಲ್ಲುತೂರಾಟ ನಡೆಸಿದೆವು. ಚಳವಳಿ ಕಾವು ಪಡೆದುಕೊಂಡಿದ್ದನ್ನು ಗಮನಿಸಿದ ಪೊಲೀಸರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು.

ನನ್ನ ಸ್ನೇಹಿತ ರಾಮಚಂದ್ರ ಎದೆಗೆ ಗುಂಡು ತಾಕಿತು. ಒಟ್ಟು ಮೂವರು ಮೃತಪಟ್ಟು ಇಡೀ ಸ್ಥಳ ರಕ್ತಸಿಕ್ತವಾಯಿತು. ಇಂತ ಹೋರಾಟದ ಪ್ರತೀಕ ಎನಿಸಿರುವ ಸ್ಥಳವನ್ನು ಬೇಕಾಬಿಟ್ಟಿ ನಿರ್ವಹಿಸಿರುವುದು ಸ್ವಾತಂತ್ರ್ಯ ಹೋರಾಟವನ್ನು ಅವಮಾನಿಸಿದಂತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಚಲೋ ಚಳವಳಿಯಲ್ಲಿ ಪಾಲ್ಗೊಂಡಿದ್ದ ಟಿ.ಆರ್‌. ರೇವಣ್ಣ ಘಟನೆ ಕುರಿತು ಮೆಲುಕು ಹಾಕಿದರು.

14ನೇ ಹಣಕಾಸು ಅನುದಾನ ಬಿಡುಗಡೆ ಆಗುತ್ತಿದ್ದಂತೆ ಸ್ವಾತಂತ್ರ್ಯ ಚೌಕವನ್ನು ಅಭಿವೃದ್ಧಿಪಡಿಸಲಾಗುವುದು. ಸ್ಮಾರಕ ರಕ್ಷಿಸಲಾಗುವುದು.  -ಟಿ.ಆರ್‌.ನಾಗರಾಜ್‌, ನಗರ ಹಾಗೂ ಮೂಲಸೌಕರ್ಯ ಸ್ಥಾಯಿ ಸಮಿತಿ ಅಧ್ಯಕ್ಷ

ಸ್ವಾತಂತ್ರ್ಯ ಹೋರಾಟಗಾರಸ್ವಾತಂತ್ರ್ಯ ಚೌಕದ ಸ್ಥಿತಿ ತಲೆತಗ್ಗಿಸುವಂತೆ ಮಾಡಿದೆ. ಜಿಲ್ಲಾಡಳಿತ, ಪಾಲಿಕೆಯು ವೃತ್ತವನ್ನು ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಬೇಕು. ಸರ್ಕಾರಿ ಕಡತಗಳಲ್ಲಿ ಚರ್ಚ್‌ ಚೌಕ ಎಂಬುದನ್ನು ತೆಗೆಸಿ ಸ್ವಾತಂತ್ರ್ಯ ಚೌಕ ಎಂದು ಬದಲಿಸಬೇಕು. - ಟಿ.ಆರ್‌.ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT