ಶುಕ್ರವಾರ, ಅಕ್ಟೋಬರ್ 30, 2020
27 °C
ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ: ಬಾಲಕೃಷ್ಣ ಶೆಟ್ಟಿ

ಉಡುಪಿ: 28ರ ಬಂದ್‌ಗೆ 14 ಸಂಘಟನೆಗಳ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಯಗಳಿಗೆ ತಿದ್ದುಪಡಿ ವಿರೋಧಿಸಿ ಸೆ.28ರಂದು ಕರೆನೀಡಲಾಗಿರುವ ಬಂದ್‌ಗೆ ಜಿಲ್ಲೆಯ 14 ಸಂಘಟನೆಗಳು ಬೆಂಬಲ ನೀಡುತ್ತವೆ ಎಂದು ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‌ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಕಾಂಗ್ರೆಸ್‌, ಜೆಡಿಎಸ್‌,  ದಲಿತ ಸಂಘರ್ಷ ಸಮಿತಿ, ಸಿಪಿಐಎಂ, ಸಹಭಾಳ್ವೆ, ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ, ಮುಸ್ಲಿಂ ಒಕ್ಕೂಟ, ಕರ್ನಾಟಕ ರಾಷ್ಟ್ರ ಸಮಿತಿ, ಸಿಐಟಿಯು, ಭಾರತೀಯ ಕ್ರಿಶ್ಚಿಯನ್ ಒಕ್ಕೂಟ, ಅಂಬೇಡ್ಕರ್ ಯುವ ಸೇನೆ ಬೆಂಬಲ ನೀಡಿವೆ. ಬಂದ್‌ಗೆ ಉಡುಪಿ ಜಿಲ್ಲೆಯ ರೈತರು, ಕಾರ್ಮಿಕರು, ವ್ಯಾಪಾರಿಗಳು, ಬಸ್‌ ಮಾಲೀಕರು, ನೌಕರರು ಬೆಂಬಲ ನೀಡಬೇಕು ಎಂದರು.

ಸೆ.28ರಂದು ನಗರದಲ್ಲಿ ಮೆರವಣಿಗೆ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಿಗಳಿಗೆ ಮನವಿ ಮಾಡಲಾಗುವುದು. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದರು.

ರೈತರ ಉದ್ಧಾರ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿದೆ. ರೈತ ಆಧಾರಿತ ಕೃಷಿ ಹಾಗೂ ಚಿಲ್ಲರೆ ಮಾರುಕಟ್ಟೆಯನ್ನು ಕಾರ್ಪೊರೆಟ್‌ ಕಂಪೆನಿಗಳಿಗೆ ವಹಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ರೈತರ ಭೂಮಿಯನ್ನು ಕಾರ್ಪೊರೆಟ್‌ ಕಂಪೆನಿಗಳಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಮುಂದೆ ಕೃಷಿಯಲ್ಲಿ ಬಂಡವಾಳ ಹೂಡುವ ಕಾರ್ಪೊರೆಟ್‌ ಕಂಪೆನಿಗಳು ಕೃಷಿ ಮಾರುಕಟ್ಟೆ ಕ್ಷೇತ್ರವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳಲಿವೆ. ಪರಿಣಾಮ ಶೇ 85ಕ್ಕಿಂತ ಹೆಚ್ಚಿರುವ ಸಣ್ಣ ಹಾಗೂ ಅತಿಸಣ್ಣ ರೈತರು ಭೂಮಿ ಕಳೆದುಕೊಂಡು ಕೂಲಿಕಾರರಾಗಲಿದ್ದಾರೆ. ಇದರಿಂದ ರೈತರು ಬೀದಿಗೆ ಬರಲಿದ್ದಾರೆ, ಆಹಾರ ಭದ್ರತೆ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್‌ ವಿ.ಶೆಟ್ಟಿ, ಮುಖಂಡರಾದ ಶಶಿಧರ್ ಶೆಟ್ಟಿ ಎರ್ಮಾಳ್‌, ಕುಶಲ್ ಶೆಟ್ಟಿ, ಯೋಗೀಶ್ ಮಾಸ್ತರ್, ಶಶಿಧರ್‌ ಗೊಲ್ಲ, ಅಬ್ದುಲ್ ಅಜೀಜ್‌, ಯಾಸಿನ್ ಮಲ್ಪೆ, ವಿನುತಾ ಕಿರಣ್‌, ಕವಿರಾಜ್, ಪ್ರಶಾಂತ್ ಜತ್ತನ್ನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು