ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | 36 ಗಂಟೆ ಲಾಕ್‌ಡೌನ್‌, ಅನಗತ್ಯ ತಿರುಗಾಡಿದರೆ ಕ್ರಮ

ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ
Last Updated 23 ಮೇ 2020, 13:45 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮೇ 23 (ಶನಿವಾರ) ರಾತ್ರಿ 7 ಗಂಟೆಯಿoದ ಮೇ 25 (ಸೋಮವಾರ) ಬೆಳಿಗ್ಗೆ 7ರವರೆಗೆ 36 ಗಂಟೆಗಳ ಕಾಲ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧ ಅಂಗಡಿಗಳು ಮತ್ತು ವೈದ್ಯಕೀಯ ಸೇವೆ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅನುಮತಿಯಿದ್ದು, ಇತರೆ ಚಟುವಟಿಕೆಗಳಿಗೆ ಅನುಮತಿ ಇಲ್ಲ. ಈಗಾಗಲೇ ತಹಸೀಲ್ದಾರ್ ಅವರಿಂದ ಮದುವೆಗೆ ಅನುಮತಿ ಪಡೆದವವರು ಮಾತ್ರ ಮದುವೆ ಮಾಡಬಹುದು. 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದರು.

ಹೊರರಾಜ್ಯಗಳಿಂದ ಬಂದವರು 8,010:ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8,010ಮಂದಿ ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮಹಾರಾಷ್ಟ್ರದಿಂದ 7,226, ತಮಿಳುನಾಡಿನಿಂದ 74, ತೆಲಂಗಾಣದಿಂದ 425, ಆಂಧ್ರಪ್ರದೇಶದಿಂದ 43, ಗೋವಾದಿಂದ 53, ಗುಜರಾತ್‌ನಿಂದ 42, ಮಧ್ಯಪ್ರದೇಶದಿಂದ 1, ದೆಹಲಿಯಿಂದ 26, ಹರಿಯಾಣದಿಂದ 1, ಚಂಡೀಗಢದಿಂದ 1, ಒಡಿಶಾದಿಂದ 1, ಪಶ್ಚಿಮ ಬಂಗಾಳ 6, ರಾಜಸ್ತಾನ 6, ಪಂಜಾಬ್ 12, ಹಾಗೂ ಕೇರಳದಿಂದ 93 ಮಂದಿ ಬಂದಿದ್ದಾರೆ. ಜಿಲ್ಲೆಯ ಬಹುತೇಕ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ ಎಂದರು.

ಸದ್ಯ ನೆರೆಯ ರಾಜ್ಯಗಳಿಂದ ಜಿಲ್ಲೆಗೆ ಬರುವವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈಗ ಕ್ವಾರಂಟೈನ್‌ನಲ್ಲಿರುವ ಅವಧಿ ಮಗಿದ ಬಳಿಕ ಕೊಠಡಿಗಳನ್ನು ಶುಚಿಗೊಳಿಸಿ ಮುಂದೆ ಹೊರ ರಾಜ್ಯಗಳಿಂದ ಬರುವವರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಮುಂದೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಈಗಾಗಲೇ ಇರುವ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಜತೆಗೆ ಕುಂದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 125 ಹಾಸಿಗೆಗಳ ಕೋವಿಡ್ ಪ್ರತ್ಯೇಕ ಬ್ಲಾಕ್, ಕಾರ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ 75 ಹಾಸಿಗೆಗಳ ಸೌಲಭ್ಯ, ಎಸ್.ಡಿ.ಎಂ ಉದ್ಯಾವರದಲ್ಲಿ 90 ಹಾಸಿಗೆಗಳು, ಕಾರ್ಕಳದ ಭುವನೇಂದ್ರ ಹಾಸ್ಟೆಲ್‌ನಲ್ಲಿ 58 ಹಾಸಿಗೆಗಳ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಎಲ್ಲ ಕೇಂದ್ರಗಳಿಗೆ ಅಗತ್ಯವಿರುವ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪಿಪಿಇ ಕಿಟ್, ಮಾಸ್ಕ್‌ಗಳ ಕೊರತೆ ಇಲ್ಲ ಎಂದರು.

ಪ್ರಸ್ತುತ ಕೆಎಂಸಿಯಲ್ಲಿ ಮಾತ್ರ ಪ್ರಯೋಗಾಲಯವಿದ್ದು, ಮಂಗಳೂರಿನ ವೆನ್ಲಾಕ್ , ಕೆಎಂಸಿ ಮತ್ತು ಯೆನಪೋಯ ಹಾಗೂ ಶಿವಮೊಗ್ಗ ಲ್ಯಾಬ್‌‌ಗಳಿಗೆ ಪರೀಕ್ಷೆಗೆ ಮಾದರಿ ಕಳುಹಿಸಲಾಗುತ್ತಿದೆ ಎಂದು ಡಿಸಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌‍‍ಪಿ ವಿಷ್ಣುವರ್ಧನ್‌ ಇದ್ದರು.

ಭಾನುವಾರ ನಿಗಧಿಯಾದ ಮದುವೆಗಳು (ಗ್ರಾಫಿಕ್ಸ್)

ತಾಲ್ಲೂಕು–ಮದುವೆಗಳ ಸಂಖ್ಯೆ

ಉಡುಪಿ–4

ಕಾಪು–3

ಬ್ರಹ್ಮಾವರ–4

ಕುಂದಾಪುರ–4

ಬೈಂದೂರು–6

ಕಾರ್ಕಳ–6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT