ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾರಿ ಮುತ್ತನ ಹಾಡಿಗೆ ತಲೆಗೂಗಿದ ಚಿಣ್ಣರು

ಪ್ರಜಾವಾಣಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ವಿಜಯ್ ರಾಘವೇಂಧ್ರ
Last Updated 17 ಜನವರಿ 2020, 9:53 IST
ಅಕ್ಷರ ಗಾತ್ರ

ಉಡುಪಿ: ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ ಗುರುವಾರ ‘ಪ್ರಜಾವಾಣಿ’ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಲ್ಗುಡಿ ಡೇಸ್‌ ಚಿತ್ರತಂಡದ ನಾಯಕ ವಿಜಯ್‌ ರಾಘವೇಂದ್ರ ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದರು. ಚಿಣ್ಣರ ಆಸೆಗೆ ಕಟ್ಟುಬಿದ್ದು ಚಿನ್ನಾರಿ ಮುತ್ತ ಸಿನಿಮಾದ ಹಾಡು ಹಾಡಿ ರಂಜಿಸಿದರು.

ಶಾಲೆಯ ಒಳಾಂಗಣ ಸಭಾಂಗಣದಲ್ಲಿ ಮಕ್ಕಳ ಜತೆ ಕೆಲಹೊತ್ತು ಆತ್ಮೀಯವಾಗಿ ಒಡನಾಡಿದ ವಿಜಯ್‌ ರಾಘವೇಂದ್ರ, ‘ಮಾಲ್ಗುಡಿ ಡೇಸ್‌ ಸಿನಿಮಾ ನೋಡುವಂತೆ ಹೇಳಿದರು. ಖಂಡಿತ ನೋಡುವುದಾಗಿ ಹೇಳಿದ ಮಕ್ಕಳು ಹಾಡು ಹಾಡುವಂತೆ ಬೇಡಿಕೆ ಇಟ್ಟರು.

ಚಿನ್ನಾರಿ ಮುತ್ತ ಸಿನಿಮಾದ ಗೀತೆಯನ್ನೇ ಹಾಡುವಂತೆ ಬೇಡಿಕೆಯನ್ನೂ ಇಟ್ಟರು. ಮಕ್ಕಳ ಆಸೆಯಂತೆ ‘ರೆಕ್ಕೆ ಇದ್ದರೆ ಸಾಕೇ... ಹಾಡಿನ ಸಾಲುಗಳನ್ನು ಹಾಡಿದ ಚಿನ್ನಾರಿ ಮುತ್ತ ಎಲ್ಲರನ್ನೂ ರಂಜಿಸಿದರು. ಹಾಡಿಗೆ ತಕ್ಕಂತೆ ಮಕ್ಕಳು ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು. ನಾಯಕಿ ಗ್ರೀಷ್ಮಾ ಶ್ರೀಧರ್‌ ಕೂಡ ಇದ್ದರು.

ಬಳಿಕ ಮಕ್ಕಳ ಜತೆ ನೆಲದಮೇಲೆ ಕುಳಿತು ಫೋಟೊಗೆ ಫೋಸ್‌ ನೀಡಿದ ವಿಜಯ್ ರಾಘವೇಂದ್ರ ಸೆಲ್ಫಿಗೂ ಫೋಸ್‌ ಕೊಟ್ಟರು. ಬಳಿಕ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ಪ್ರಜಾವಾಣಿ’ ಪತ್ರಿಕೆ ಕ್ವಿಜ್‌ ಕಾರ್ಯಕ್ರಮದ ಮೂಲಕ ಜ್ಞಾನ ಹಂಚುವ ಕಾರ್ಯ ಮಾಡುತ್ತಿದ್ದು, ನಿರಂತರವಾಗಿ ನಡೆಯಲಿದೆ ಎಂದು ಹಾರೈಸಿದರು.

ಕ್ವಿಜ್‌ನಲ್ಲಿ ಭಾಗವಹಿಸುವ ಅವಕಾಶ ಮಾಲ್ಗುಡಿ ಡೇಸ್‌ ಚಿತ್ರತಂಡಕ್ಕೆ ಸಿಕ್ಕಿದ್ದು ಖುಷಿ ತಂದಿದೆ. ಫೆ.7ರಂದು ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲರೂ ಚಿತ್ರ ವೀಕ್ಷಿಸಬೇಕು ಎಂದು ಮನವಿ ಮಾಡಿದರು.

ಮಾಲ್ಗುಡಿ ಡೇಸ್‌ ದಶಕಗಳ ಹಿಂದಿನ ಬಹಳ ಚಿರಪರಿಚಿತ ಹೆಸರು. ಶಂಕರ್ ನಾಗ್, ಗಿರೀಶ್ ಕಾರ್ನಾಡ್, ಅನಂತ್ ನಾಗ್ ಅವರಂತಹ ದಿಗ್ಗಜರು ನಟಿಸಿದ ಸರಣಿ. ಹಿಂದಿನ ಮಾಲ್ಗುಡಿ ಡೇಸ್‌ಗೂ, ತೆರೆಮೇಲೆ ಬರುತ್ತಿರುವ ಈಗಿನ ಮಾಲ್ಗುಡಿ ಡೇಸ್‌ ಚಿತ್ರ ಸಂಪೂರ್ಣ ಭಿನ್ನವಾಗಿದೆ. ಕಥೆಯೇ ಬೇರೆ ಇದ್ದು, ಮುಖ್ಯಪಾತ್ರ ನಿರ್ವಹಿಸುತ್ತಿದ್ದೇನೆ.

ಸಿನಿಮಾದಲ್ಲಿ ವೃದ್ಧನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದುವರೆಗೂ ಯಾರೂ ನೋಡದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಪ್ರತಿಯೊಬ್ಬರ ಬಾಲ್ಯದ ನೆನಪುಗಳು, ಭಾವನೆಗಳು ಚಿತ್ರದಲ್ಲಿ ಅಭಿವ್ಯಕ್ತಗೊಂಡಿವೆ. ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಬಹುದು ಎಂದರು.

ಮಾಲ್ಗುಡಿ ಡೇಸ್‌ ಚಿತ್ರತಂಡದ ಸಂದೀಪ್, ಕರುಣಕಾರ್‌, ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT