ಉಡುಪಿ: ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದು, ವೈಜ್ಞಾನಿಕ ಕೃಷಿ ಅನುಸರಿಸುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಕಿವಿಮಾತು ಹೇಳಿದರು.
ಜಿಲ್ಲಾ ಕೃಷಿಕ ಸಂಘದಿಂದ ಉಡುಪಿ ಹೋಟೆಲ್ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿಕರ ಮಕ್ಕಳು ಕೃಷಿಯತ್ತ ಮುಖ ಮಾಡುತ್ತಿಲ್ಲ. ಇರುವ ಜಮೀನು ಮಾರಾಟ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ವೃದ್ಧಾಶ್ರಮದ ಹಾದಿ ತುಳಿಯಬೇಕಾದ ಪರಿಸ್ಥಿತಿ ಬರಲಿದೆ ಎಂದು ತಿಳಿ ನೀಡಿದರು.
ವೈಜ್ಞಾನಿಕ ಕೃಷಿ ಮಾಡುವುದರಿಂದ ಕೃಷಿಯಲ್ಲಿ ಅನಗತ್ಯ ಖರ್ಚು ತಪ್ಪಿಸಬಹುದು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾದ ಕ್ರಮ ಅನುಸರಿಸಿಕೊಂಡು ಕೃಷಿ ಮಾಡಬಹುದು. ಇದರಿಂದ ಕೃಷಿಯಲ್ಲಿ ಶೇ 25 ಖರ್ಚು ಕಡಿಮೆಯಾಗುವುದರ ಜತೆಗೆ, ಶೇ 75 ಲಾಭ ಪಡೆಯಲು ಸಾದ್ಯವಿದೆ ಎಂದರು.
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಕುರಿತು ಫ್ಯೂಚರ್ ಜೆನೆರಲಿ ಇನ್ಶೂರೆನ್ಸ್‌ನ ಜಿಲ್ಲಾ ವಿಮಾ ಸಂಯೋಜಕ ರವೀಂದ್ರ ಮಾಹಿತಿ ನೀಡಿದರು.
ದಿನೇಶ್ ಶೆಟ್ಟಿ ಹೆರ್ಗ, ಪಾಂಡುರಂಗ ನಾಯಕ್ ಹಿರಿಯಡ್ಕ, ಸುರೇಶ್ ನಾಯಕ್ ಅಲೆವೂರು, ಉದಯ ಭಟ್ ಮುಂಡುಜೆ, ಲಕ್ಷ್ಮೀ ನಾರಾಯಣ ಉಪಾಧ್ಯಾಯ, ರಮೇಶ್ ಪೂಜಾರಿ ಹುಣ್ಸೆಮಕ್ಕಿ, ಭಾರತಿ ಶೆಟ್ಟಿ ಅಂಜಾರು, ಕೂಡ್ಲಿ ಶ್ರೀನಿವಾಸ ಉಡುಪ , ರಘುನಾಥ ನಾಯಕ್ ಪುನಾರು, ರೊನಾಲ್ಡ್ ಡಿಸೋಜಾ ಆನಗಳ್ಳಿ, ಚಂದ್ರ ಪೂಜಾರಿ ಬಾಳೆಬೈಲು, ರವೀಂದ್ರ ಪೂಜಾರಿ ಶೀಂಬ್ರ, ಲಾರೆನ್ಸ್ ಡಿಸೋಜಾ ಮೂಡುಬೆಳ್ಳೆ, ಜೋಸೆಫ್ ಕುಂದರ್, ಕಾಮೆಲ್ ಸಿಕ್ವೇರಾ ಮಣಿಪುರ ಇದ್ದರು.
ಶರಾವತಿ ಎಲ್ಲೂರು ಪ್ರಾರ್ಥನೆ ಮಾಡಿದರೆ, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.