ಶಿರ್ವ: ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಕ್ತಿ, ಮಾನವೀಯತೆ, ಪ್ರಾಮಾಣಿಕತೆ, ಹೊಂದಾಣಿಕೆ, ಸ್ಥಿತಿಸ್ಥಾಪಕತ್ವ, ಪಾಂಡಿತ್ಯ ಮುಂತಾದ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಗ್ಲೋಬಲ್ ಮಾರ್ಕೆಟಿಂಗ್ ಆ್ಯಂಡ್ ಕಮ್ಯುನಿಕೇಷನ್ಸ್, ರೋಬೊಸಾಫ್ಟ್ ಟೆಕ್ನಾಲಜೀಸ್ ಹಿರಿಯ ಉಪಾಧ್ಯಕ್ಷ ಲಕ್ಷ್ಮಿಪತಿ ಭಟ್ ಹೇಳಿದರು.
ಬಂಟಕಲ್‌ನ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಉತ್ತಮ ಯೋಜನೆ ಇದ್ದರೆ ಸಾಲದು ಅದನ್ನು ಕಾರ್ಯಗತಗೊಳಿಸಲು ಬೇಕಾದ ಕಾರ್ಯಕ್ಷಮತೆ ಹೊಂದಿರಬೇಕು. ವಿದ್ಯಾರ್ಥಿಗಳು ಅನುದಿನ ಕಾರ್ಯಕ್ಷಮತೆ ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದರು.
ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಲ್.ಎನ್. ಶೇಷಗಿರಿ ಮಾತನಾಡಿ, ಹುಟ್ಟಿನಿಂದ ಪದವಿವರೆಗಿನ ಕಲಿಕೆಯು ಜೀವನದ ಉದ್ದೇಶವನ್ನು ತಿಳಿದುಕೊಳ್ಳಲು, ಉದ್ದೇಶವನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಶುಭ ಹಾರೈಸಿದರು. ಉಡುಪಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ರಕ್ಷಾ, ವಿಶ್ವವಿದ್ಯಾಲಯದ ಬಿ.ಇ ಹಾನರ್ಸ್ ಪಡೆದ ಶೇಖ್ ಮೊಹಮ್ಮದ್ ಶುಹೂದ್ ಅವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಪ್ರಾಯೋಜಿತ ಚಿನ್ನದ ಪದಕಗಳನ್ನು ಶೈಕ್ಷಣಿಕ ಸಾಧನೆಗಾಗಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಜಿ. ಅಕ್ಷತಾ, ಗಣಕಯಂತ್ರ ವಿಭಾಗದ ಶೇಖ್ ಮೊಹಮ್ಮದ್ ಶುಹೂದ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಿಖಿತಾ ಶೆಟ್ಟಿ, ಮೆಕ್ಯಾನಿಕಲ್ ವಿಭಾಗದ ಅಂಕಿತ್ ಸುವರ್ಣ ಅವರಿಗೆ ನೀಡಿ ಗೌರವಿಸಲಾಯಿತು. ಕಾಲೇಜಿನ ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದವರನ್ನು ಸನ್ಮಾನಿಸಲಾಯಿತು. ಅಂತಿಮ ವರ್ಷದಲ್ಲಿ ಪ್ರತಿ ವಿಭಾಗದಲ್ಲಿ ಅಧಿಕ ಅಂಕ ಪಡೆದ 4 ವಿದ್ಯಾರ್ಥಿಗಳಿಗೆ ನಂದನ್ ಕುಮಾರ್ ಇನ್ನಂಜೆ ಅವರಿಂದ ಕೊಡಲ್ಪಟ್ಟ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪ್ರಾಂಶುಪಾಲ ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಉಪ ಪ್ರಾಂಶುಪಾಲ ಗಣೇಶ್ ಐತಾಳ್, ಡೀನ್‌ಗಳಾದ ಸುದರ್ಶನ್ ರಾವ್, ನಾಗರಾಜ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.