ಮಂಗಳವಾರ, ಮಾರ್ಚ್ 21, 2023
29 °C
ಮಾತು ತಪ್ಪಿದರೆ ಅ.1ರಿಂದ ಧರಣಿ ಸತ್ಯಾಗ್ರಹ: ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ

ಅ.1ರೊಳಗೆ 2 ‘ಎ’ ಮೀಸಲಾತಿ ಘೋಷಿಸಿ; ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅ.1ರೊಳಗೆ ರಾಜ್ಯ ಸರ್ಕಾರ ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಲಿಂಗಾಯತರನ್ನು 2 ‘ಎ’ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಎಲ್ಲ ಲಿಂಗಾಯತ ಸಮಾಜಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ, ಮೀಸಲಾತಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಅಂಗವಾಗಿ ಬುಧವಾರ ಉಡುಪಿಗೆ ಭೇಟಿನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸಮಾಜಕ್ಕೆ ಸಿಗಬೇಕಾದ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತಾಯಿಸಿ ಜ.14ರಿಂದ 39 ದಿನಗಳ 712 ಕಿ.ಮೀ ಬೃಹತ್ ಪಾದಯಾತ್ರೆ ನಡೆಸಲಾಗಿತ್ತು.

ಫೆ.21ರಂದು ಅರಮನೆ ಮೈದಾನದಲ್ಲಿ ಸಮಾಜದ 10 ಲಕ್ಷ ಜನರು ಒಟ್ಟಾಗಿ ಮೀಸಲಾತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗಿತ್ತು. ಸ್ವಾತಂತ್ರ್ಯ ಉದ್ಯಾನದಲ್ಲಿ 23 ದಿನ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಈ ಮೂರು ಹೋರಾಟಗಳಿಗೆ ಮಣಿದ ರಾಜ್ಯ ಸರ್ಕಾರ ಮಾರ್ಚ್‌ 15ರಂದು ಅಧಿವೇಶನದಲ್ಲಿ ಮೀಸಲಾತಿ ನೀಡುವು ಭರವಸೆ ನೀಡಿ, 6 ತಿಂಗಳ ಕಾಲಾವಕಾಶ ಕೋರಿತ್ತು.

ಸರ್ಕಾರ ತೆಗೆದುಕೊಂಡ ಕಾಲಾವಕಾಶ ಸೆ.15ಕ್ಕೆ ಮುಕ್ತಾಯವಾಗುತ್ತಿದ್ದು, ಇದುವರೆಗೂ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಲು, ಸಮುದಾಯವನ್ನು ಒಗ್ಗೂಡಿಸಲು ಮತ್ತೆ ಹೋರಾಟದ ಹಾದಿ ತುಳಿಯಬೇಕಾಗಿದೆ. ಅದರ ಭಾಗವಾಗಿ ಆ.26ರಿಂದ ರಾಜ್ಯದಾದ್ಯಂತ ಪ್ರತಿಜ್ಞಾ ಪಂಚಾಯತ್ ಅಭಿಯಾನ ಆರಂಭಿಸಲಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಿಂಗಾಯತ ಪಂಚಮಸಾಲಿ ಸಮಾಜದ ಮೇಲೆ ಅಭಿಮಾನವಿದೆ. ಅ.1ರೊಳಗೆ ಸಮಾಜಕ್ಕೆ 2 ‘ಎ’ ಮೀಸಲಾತಿ ನೀಡುವ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ವಿಳಂಬ ಮಾಡಿದರೆ, ಅ.1ರಂದು ಬೆಂಗಳೂರಿನ ಫ್ರೀಂಡ ಪಾರ್ಕ್‌ನಲ್ಲಿ ಜೆ.ಎಚ್‌.ಪಟೇಲ್ ಜಯಂತಿ ನಡೆಸಿ, ಮತ್ತೆ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಪಂಚಮಸಾಲಿ ಪೀಠಗಳು ಸರ್ಕಾರದ ವಿರುದ್ಧವಾಗಲಿ, ಪರವಾಗಲಿ ಇಲ್ಲ. ಸಮಾಜಕ್ಕೆ ನ್ಯಾಯ ಕೊಡಿಸುವುದು ಹಾಗೂ ಹಕ್ಕುಗಳನ್ನು ಪಡೆಯುವುದು ಮಾತ್ರ ಪೀಠಗಳ ಉದ್ದೇಶ. ಹರಿಹರದ ಪೀಠ ಹಿಂದೆ ಅರ್ಧದಲ್ಲಿ ಬಂದು ಹೋರಾಟದಲ್ಲಿ ಭಾಗವಹಿಸಿತ್ತು. ಈ ಬಾರಿಯೂ ಹೋರಾಟಕ್ಕೆ ಕೈಜೋಡಿಸಿದರೆ ಸ್ವಾಗತ ಎಂದರು.

ಪಾದಯಾತ್ರೆ ಶುರುವಾದಾಗಿನಿಂದಲೂ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದು, ಅಸೂಹೆ, ದ್ವೇಷ ಸಾಧಿಸುವವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಯಾವುದೇ ಬೇಸರವಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸಿದ್ದರಾಮಣ್ಣ, ಯು.ಸಿ.ನಿರಂಜನ, ಗಂಗಾಧರ್‌, ಶಂಭು ಪಾಟೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು