ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪ್ರವಾಸೋದ್ಯಮ ದಿನ: ಮಲ್ಪೆಯಲ್ಲಿ ಬೀಚ್‌ ಫೆಸ್ಟಿವಲ್‌; ವೈನ್‌ ಮೇಳ

ಸೆ.27ರಿಂದ30ರವರೆಗೆ ವಿಭಿನ್ನ ಕಾರ್ಯಕ್ರಮಗಳು
Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಉಡುಪಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಿಂದ 30ರವರೆಗೆ ಜಿಲ್ಲೆಯ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ‘ಪರ್ಯಟನ್‌ ಪರ್ವ್‌’ ಯೋಜನೆಯಡಿ ಪ್ರವಾಸಿಗರನ್ನು ಸೆಳೆಯಲು ‘ಉತ್ಸವ’ಗಳನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಏನಿದು ಪರ್ಯಟನ್‌ ಪರ್ವ್‌?

ದೇಶದ ಅನನ್ಯ ಹಾಗೂ ವಿಶಿಷ್ಟ ಪ್ರವಾಸಿತಾಣಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ‘ಪರ್ಯಟನ್‌ ಪರ್ವ್‌’ ಹೆಸರಿನಲ್ಲಿ ಉತ್ಸವಗಳನ್ನು ಆಯೋಜಿಸಲು ನಿರ್ಧರಿಸಿದೆ. ಅದರಂತೆ ಕೇಂದ್ರ ಗುರುತಿಸಿರುವ ಪಟ್ಟಿಯಲ್ಲಿ ಮಲ್ಪೆ, ಪಡುಬಿದ್ರಿ, ತ್ರಾಸಿ, ಮರವಂತೆ ಬೀಚ್‌ಗಳು, ಕಾರ್ಕಳದ ಸ್ಮಾರಕಗಳು ಸ್ಥಾನ ಪಡೆದಿವೆ. ಹಾಗಾಗಿ, ಈ ತಾಣಗಳಲ್ಲಿ ಉತ್ಸವಗಳನ್ನು ಆಯೋಜಿಸುವಂತೆ ಸೂಚನೆ ನೀಡಿದೆ ಎನ್ನುತ್ತಾರೆ ಅವರು.

ಕೇಂದ್ರದ ನಿರ್ದೇಶನದಂತೆ ಮಲ್ಪೆ ಬೀಚ್‌ನಲ್ಲಿ ಸೆ.27ರಿಂದ ನಾಲ್ಕುದಿನಗಳ ಕಾಲ ‘ಬೀಚ್‌ ಫೆಸ್ಟಿವಲ್’ ನಡೆಸಲಾಗುವುದು.ಹಂಪಿಯಲ್ಲಿ ‘ಹಂಪಿ ಉತ್ಸವ’ವನ್ನು ಅದ್ಧೂರಿಯಾಗಿ ನಡೆಸುವಂತೆ ಮಲ್ಪೆಯಲ್ಲಿ ‘ಬೀಚ್‌ ಉತ್ಸವ’ ಮಾಡಲಾಗುವುದು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ತಿಳಿಸಿದರು.

‘ಟೂರಿಸಂ ಫಾರ್ ಆಲ್‌’ ಎಂಬ ಘೋಷಣೆಯಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಾಲ್ಕು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಮಲ್ಪೆಬೀಚ್‌ನಲ್ಲಿ ವೈನ್‌ ಮೇಳ, ಫುಡ್‌ ಫೆಸ್ಟಿವಲ್‌, ಶಾಪಿಂಗ್, ಪ್ಯಾರಾ ಒಲಿಂಪಿಕ್ಸ್‌ ವಾಲಿಬಾಲ್‌ ಕ್ರೀಡಾಕೂಟಗಳು ನಡೆಯಲಿವೆ ಎಂದರು.

ಬೆಂಗಳೂರಿನ ವೈನ್‌ಬೋರ್ಡ್‌ ‘ವೈನ್‌ಮೇಳ’ದ ಉಸ್ತುವಾರಿ ವಹಿಸಿಕೊಂಡಿದೆ. ಪ್ರವಾಸಿಗರು ಸ್ವತಃ ಕಾಲಿನಿಂದ ದ್ರಾಕ್ಷಿಯನ್ನು ತುಳಿದು ವೈನ್‌ ತಯಾರಿಸಬಹುದು. ಜತೆಗೆ, ಬಗೆಬಗೆಯ ವೈನ್‌ ರುಚಿಯನ್ನು ಮೇಳದಲ್ಲಿ ಆಸ್ವಾದಿಸಬಹುದು ಎಂದು ಅನಿತಾ ತಿಳಿಸಿದರು.‌

ಈಚೆಗೆ ಪ್ರವಾಸೋದ್ಯಮದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಪ್ರವಾಸ ಮಾಡಲು ಮೀಸಲಿರಿಸುತ್ತಿದ್ದಾರೆ. ಆದರೆ, ಪ್ರವಾಸಕ್ಕೆ ಎಲ್ಲಿಗೆ ಹೋಗುವುದು ಎಂಬ ಮಾಹಿತಿಯ ಕೊರತೆ ಅವರನ್ನು ಕಾಡುತ್ತಿದೆ. ಬೀಚ್‌ ಫೆಸ್ಟಿವಲ್‌ನಂತಹ ಕಾರ್ಯಕ್ರಮಗಳು ಅವರಿಗೆ ಹೆಚ್ಚು ಉಪಯುಕ್ತ ಎಂದರು.

ಉಡುಪಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ‘ತರಂಗರಂಗ ಕಲಾಯಾನ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಹೆರಿಟೇಜ್‌ ಬೋಟ್‌ ಸೈಲ್‌’ ಹೆಸರಿನಲ್ಲಿ ಬೋಟ್‌ನಲ್ಲಿ ಸುಮಾರು 50 ಪ್ರವಾಸಿಗರನ್ನು ಸಮುದ್ರದೊಳಗೆ ಕರೆದೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.

ಸೆ.30ರಂದು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಯುವಮೆರಿಡಿಯನ್‌ ಹೆಲಿಪ್ಯಾಡ್ ಗ್ರೌಂಡ್‌ನಲ್ಲಿ ವಿದ್ಯಾರ್ಥಿಗಳಿಗೆ ರಿಮೋಟ್ ಕಂಟ್ರೋಲ್ ಏರ್ ಷೋ ಇದೆ. ಸೈಕ್ಲಿಂಗ್ ಸ್ಪರ್ಧೆಯೂ ನಡೆಯಲಿದೆ. ಅಂದೇ ಕಡಲ ತೀರಗಳಲ್ಲಿ ಬೆಳಿಗ್ಗೆ 8ರಿಂದ ಸ್ವಚ್ಛ ಭಾರತ ಅಭಿಯಾನ ನಡೆಯಲಿದೆ.

ಸೆ.27ರಿಂದ 30ವರೆಗೆ ಮಲ್ಪೆ, ಪಡುಬಿದ್ರಿ, ತ್ರಾಸಿ–ಮರವಂತೆ, ಕೋಡಿ ಕಡಲತೀರದಲ್ಲಿ ಸರ್ಫಿಂಗ್ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT