ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರೊಳಗೆ ಮರಳುಗಾರಿಕೆ ಆರಂಭ

ಮರಳಿಗೆ ಕನಿಷ್ಠ ದರ ನಿಗದಿ: ಶಾಸಕ ರಘುಪತಿ ಭಟ್‌
Last Updated 5 ಸೆಪ್ಟೆಂಬರ್ 2019, 13:48 IST
ಅಕ್ಷರ ಗಾತ್ರ

ಉಡುಪಿ: ಸೆ.20ರೊಳಗೆ ಜಿಲ್ಲೆಯಲ್ಲಿ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭವಾಗಲಿದ್ದು, ಶೀಘ್ರವೇ ಪರವಾನಗಿದಾರರಿಗೆ ಮರಳು ತೆಗೆಯಲು ಜಿಲ್ಲಾಧಿಕಾರಿ ಪರವಾನಗಿ ನೀಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‌ಐಆರ್ ದಾಖಲಾದ ಪರವಾನಗಿದಾರರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮರಳು ತೆಗೆಯಲು ಅನುಮತಿ ಸಿಗಲಿದೆ. ಸೆ.15ರೊಳಗೆ ಜಿಲ್ಲಾಧಿಕಾರಿ ನೇತೃತ್ವದ 7 ಸದಸ್ಯರ ಸಮಿತಿ ಸಭೆ ಮರಳುಗಾರಿಕೆ ಆರಂಭಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ಸರ್ಕಾರ ಮರಳಿಗೆ ದರ ನಿಗದಿ ಮಾಡುವ ಅಧಿಕಾರವನ್ನು 7 ಸದಸ್ಯರ ಸಮಿತಿಗೆ ನೀಡಿದೆ. ಹಾಗಾಗಿ, ಮರಳು ಕಾರ್ಮಿಕ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ಸಿಗುವಂತೆ ನಿರ್ಧಾರ ತೆಗೆದುಕೊಳ್ಳುವಂತೆ ಸಮಿತಿಗೆ ಸಲಹೆ ನೀಡಲಾಗುವುದು ಎಂದರು.

ಮೂರು ತಿಂಗಳ ಬಳಿಕ ಸ್ಯಾಂಡ್‌ ಬಜಾರ್ ಆ್ಯಪ್‌ ಮೂಲಕ ಮರಳು ವಿತರಣೆ ನಡೆಯಲಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಾದ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿ ಮರಳು ದಿಬ್ಬ ತೆರವಿಗೆ ನಿರ್ಬಂಧವಿದೆ. ಈ ಸಂಬಂಧ ಮರಳು ದಿಬ್ಬ ತೆರವಿಗೆ ಅನುಮತಿ ಕೋರಿ ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿದೆ. ಮತ್ತೊಮ್ಮೆ ಜಿಲ್ಲಾಧಿಕಾರಿಯಿಂದ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.

ನಾನ್‌ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಅ.15ರ ನಂತರ ಮರಳುಗಾರಿಕೆ ಆರಂಭವಾಗಲಿದೆ. ಮರಳು ತೆಗೆಯಲು ಷರತ್ತುಗಳನ್ನು ಸರಳೀಕರಣಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಜಿಲ್ಲೆಯ ಮರಳನ್ನು ಹೊರಜಿಲ್ಲೆಗಳಿಗೆ ಸಾಗಾಟವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜತೆಗೆ ಜಿಲ್ಲೆಯ ಹಕ್ಕುಪತ್ರ ವಿತರಣೆ, ಕ್ರಷರ್‌ಗಳ ಹಾವಳಿ ತಡೆ ಕುರಿತು ಜಿಲ್ಲಾಧಿಕಾರಿ ಜಗದೀಶ್ ಅವರ ಜತೆ ಐವರು ಶಾಸಕರು ಚರ್ಚಿಸಿದ್ದೇವೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಗಿರಿಧರ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT