ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ | ಹಳ್ಳಿಯ ಮಕ್ಕಳ ಉನ್ನತ ಶಿಕ್ಷಣದ ಆಶಾಕಿರಣ

ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸುಕುಮಾರ್‌ ಮುನಿಯಾಲ್
Published 6 ಜುಲೈ 2024, 7:30 IST
Last Updated 6 ಜುಲೈ 2024, 7:30 IST
ಅಕ್ಷರ ಗಾತ್ರ

ಹೆಬ್ರಿ: ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆಯಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶಗಳಿವೆ.

2014ರಲ್ಲಿ ಪ್ರಾರಂಭವಾದ ಕಾಲೇಜು, 2019–20ರ ಶೈಕ್ಷಣಿಕ ವರ್ಷದಲ್ಲಿ ಹೆಬ್ರಿ–ಕಾರ್ಕಳ ರಾಜ್ಯ ಹೆದ್ದಾರಿಯ ಮುನಿಯಾಲು ಚಟ್ಕಲ್‌ಪಾದೆಯಲ್ಲಿ 4.6 ಎಕರೆ ವಿಸ್ತೀರ್ಣದ ಸುಂದರ ಪರಿಸರದ ನಡುವಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ವಿಶಾಲವಾದ ಕ್ರೀಡಾಂಗಣದ ಸೌಲಭ್ಯವೂ ಇದೆ.

ಬಿ.ಎ.ಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶವಿದೆ. ಬಿ.ಕಾಂ. ಪದವಿಗೆ ಮಂಗಳೂರು ವಿಶ್ವವಿದ್ಯಾನಿಲಯ ನಿಗದಿ ಪಡಿಸಿದ ಪಠ್ಯಕ್ರಮದಲ್ಲಿ ಬೋಧನೆ ನಡೆಯುತ್ತದೆ.

ಸರ್ಕಾರ ಮತ್ತು ಇತರ ಸೇವಾ ಸಂಸ್ಥೆಗಳು, ಕಾರ್ಪೋರೆಟ್‌ ಕಂಪನಿಗಳು ನೀಡುವ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. 10 ವರ್ಷಗಳಲ್ಲಿ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.

ಪದವಿ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ ಕ್ರಾಸ್‌, ರೋವರ್ಸ್‌ ರೇಂಜರ್ಸ್‌ ಘಟಕಗಳೂ ಕಾಲೇಜಿನಲ್ಲಿವೆ. ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನವನ್ನೂ ನೀಡಲಾಗುತ್ತಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕೌಶಲಾಧಾರಿತ ಮಾರ್ಗದರ್ಶನ ನೀಡಲಾಗುತ್ತದೆ.

ನುರಿತ ಬೋಧಕ ಮತ್ತು ಬೋಧಕೇತರ ವೃಂದವನ್ನು ಸಂಸ್ಥೆಯು ಹೊಂದಿದೆ. ಸುಸಜ್ಜಿತ ‘ಇ’ ಗ್ರಂಥಾಲಯ ಇರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕಂಪ್ಯೂಟರ್‌ ಬೇಸಿಕ್‌, ಸ್ಪೋಕನ್‌ ಇಂಗ್ಲಿಷ್‌ ಉಚಿತ ತರಬೇತಿ ಪಡೆಯುವ ಅವಕಾಶವೂ ವಿದ್ಯಾರ್ಥಿಗಳಿಗಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಎಫ್‌ಡಿಎ, ಎಸ್‌ಡಿಎ, ಬ್ಯಾಂಕಿಂಗ್‌, ಪೊಲೀಸ್‌, ಕೆಎಎಸ್, ಐಎಎಸ್‌, ಐಎಫ್‌ಎಸ್, ಐಪಿಎಸ್‌ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.

ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಸ್ಥೆಯು ಉತ್ತಮ ಫಲಿತಾಂಶವನ್ನು ನಿರಂತರವಾಗಿ ದಾಖಲಿಸುತ್ತಿದೆ ಎನ್ನುತ್ತಾರೆ ಪ್ರಾಂಶುಪಾಲ ಮಂಜುನಾಥ ಆಚಾರ್‌.

ವಿದ್ಯಾರ್ಥಿ ನಿಲಯದ ಅಗತ್ಯವಿದೆ: ಅತ್ಯಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಸಂಸ್ಥೆಗೆ ಬರುತ್ತಾರೆ. ಕಾಲೇಜು ಸಮೀಪದಲ್ಲೇ ಹಾಸ್ಟೆಲ್‌ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

2022-23ನೇ ಸಾಲಿನಲ್ಲಿ ಯುಜಿಸಿಯ ನ್ಯಾಕ್‌ ಮೌಲ್ಯಮಾಪನದಲ್ಲಿ ‘ಬಿ’ ಶ್ರೇಯಾಂಕ  ಕ್ರೀಡಾ ಚಟುವಟಿಕೆಗಳಿಗೆ ವಿಶಾಲವಾದ ಕ್ರೀಡಾಂಗಣ ಸೌಲಭ್ಯ ಹಳ್ಳಿಯ ಪರಿಸರ, ಕಲಿಕೆಗೆ ಪೂರಕ ವಾತಾವರಣ

ನಮ್ಮ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಇದೆ. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮೂರಲ್ಲೇ ಪದವಿ ಪಡೆಯುವ ಸುವರ್ಣಾವಕಾಶವಿದೆ.

- ಪಾಲಕರು ಕೂಡ ಶಿಕ್ಷಣದ ಮಹತ್ವ ಅರಿತು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಮಂಜುನಾಥ ಆಚಾರ್‌ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT