ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀಮಂತನ ತೆಕ್ಕೆಗೆ ಕೃಷಿ ಭೂಮಿ; ಬೀದಿಗೆ ಅನ್ನದಾತ’

ಭೂಸುಧಾರಣೆ ಮಸೂದೆಗೆ ತಿದ್ದುಪಡಿ ರೈತವಿರೋಧಿ ನಿಲುವು: ಸಿಐಟಿಯು ಆಕ್ರೋಶ
Last Updated 15 ಡಿಸೆಂಬರ್ 2020, 12:54 IST
ಅಕ್ಷರ ಗಾತ್ರ

ಉಡುಪಿ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉದ್ಯಮಿಗಳು ಗರಿಷ್ಠ ಪ್ರಮಾಣದ ಭೂಮಿ ಖರೀದಿಸಲು ರಾಜ್ಯ ಸರ್ಕಾರ ಅವಕಾಶ ನೀಡಿರುವುದರಿಂದ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬರಲಿದ್ದಾರೆ ಎಂದು ಸಿಐಟಿಯು ರಾಜ್ಯ ಮುಖಂಡ ಬಾಲಕೃಷ್ಣ ಶೆಟ್ಟಿ ವಾಗ್ದಾಳಿ ನಡೆಸಿದರು.

ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರ ಇಎಸ್‌ಐ ಸಮಸ್ಯೆ, ಕಟ್ಟಡ ಕಾರ್ಮಿಕರ ಸಮಸ್ಯೆ, ಹಲವು ಯೋಜನೆಗಳಡಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಭೂಸುಧಾರಣಾ ಮಸೂದೆ ತಿದ್ದುಪಡಿಯಿಂದ ನೂರಾರು ಎಕರೆ ಭೂಮಿಯನ್ನು ಖರೀದಿಸಲು ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ರೈತರಿಗೆ ಹಣದ ಆಮಿಷವೊಡ್ಡಿ ಭೂಮಿ ಖರೀದಿ ಮಾಡಲಾಗುತ್ತದೆ. ರೈತರ ಭೂಮಿ ಶ್ರೀಮಂತರ ಪಾಲಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಸೋಲುಂಟಾಗಿತ್ತು. ಆದರೂ ಜೆಡಿಎಸ್‌ ಬೆಂಬಲದೊಂದಿಗೆ ಮರು ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ಸದನದಲ್ಲಿ ಮಸೂದೆ ತಿರಸ್ಕಾರವಾದರೆ 6 ತಿಂಗಳು ಮತ್ತೆ ಸಲ್ಲಿಸುವಂತಿಲ್ಲ ಎಂಬ ನ್ಯಾಯಾಲಯದ ಆದೇಶ ಇದ್ದರೂ ಕಡೆಗಣಿಸಲಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಟೀಕಿಸಿದರು.

ಕಟ್ಟಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ, ನವೀಕರಣ, ವೈದ್ಯಕೀಯ ವಿದ್ಯಾರ್ಥಿ ವೇತನ, ಪಿಂಚಣಿ, ಹೆರಿಗೆ ಭತ್ಯೆ, ಅಪಘಾತ ಪರಿಹಾರ, ಮದುವೆ ಸಹಾಯಧನದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತವಾಗಿದೆ. ಕಾರ್ಮಿಕ ನಿರೀಕ್ಷಕರು ಹಾಗೂ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಡುಪಿ ತಾಲ್ಲೂಕು ಕಾರ್ಯದರ್ಶಿ ಎಸ್‌.ಕವಿರಾಜ್‌, ಮಖಂಡರಾದ ಶಶಿಧರ ಗೊಲ್ಲ, ಮಹಾಬಲ ಹೋಡೆಯರ ಹೊಬಳಿ, ಬಲ್ಕೀಸ್, ನಳಿನಿ, ಭಾರತಿ, ಸುನೀತಾ ಶೆಟ್ಟಿ, ಶೀಲಾವತಿ, ದಾಸು ಭಂಡಾರಿ, ಗಣೇಶ ನಾಯಕ್, ಸಂತೋಷ ಹೆಮ್ಮಾಡಿ, ರೊನಾಲ್ಡ್ ರಾಜೇಶ್, ಸುಭಾಷ್ ನಾಯಕ್ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT