ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಹೋರಾಟ ಹತ್ತಿಕ್ಕುವ ಪ್ರಯತ್ನ: ಡಾ.ಕೆ.ಹೇಮಲತಾ ಆರೋಪ

ಕುಂದಾಪುರದಲ್ಲಿ ಸಿಐಟಿಯು ರಾಜ್ಯ ಸಮ್ಮೇಳನ
Last Updated 16 ನವೆಂಬರ್ 2022, 3:59 IST
ಅಕ್ಷರ ಗಾತ್ರ

ಕುಂದಾಪುರ: ‘ಸರ್ಕಾರಗಳು ಕಾರ್ಪೊ ರೇಟ್ ಹಾಗೂ ಬಂಡವಾಳದಾರರ ಪರವಾಗಿ ನಿಂತು, ಕಾರ್ಮಿಕ ವರ್ಗದ ಹೋರಾಟಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿವೆ. ಆರ್ಥಿಕ ಕ್ಷೇತ್ರದ ನವ ಉದಾರೀಕರಣ ನೀತಿಗಳು ದುಡಿಯುವ ವರ್ಗವನ್ನು ಬಿಕ್ಕಟ್ಟಿಗೆ ತಳ್ಳುತ್ತಿದೆ’ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಆರೋಪಿಸಿದರು.

ಇಲ್ಲಿನ ಆರ್.ಎನ್.ಶೆಟ್ಟಿ ಸಭಾಭವನ ದಲ್ಲಿ ‘ಕಾರ್ಮಿಕರ ಐಕ್ಯತೆ- ಜನತೆಯ ಸೌಹಾರ್ದತೆಗಾಗಿ’ಗಾಗಿ ಮಂಗಳವಾರ ನಡೆದ 15ನೇ ಸಿಐಟಿಯು ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್-19 ಕಾಣಿಸಿಕೊಂಡ ನಂತರದ ದಿನಗಳಲ್ಲಿ ದೇಶದ ಕಾರ್ಮಿಕ ವರ್ಗ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ. ಆದರೂ, ಸರ್ಕಾರಗಳು ಮಾನವೀಯತೆ ಮರೆತಿವೆ. ವಿರೋಧ ಪಕ್ಷಗಳ ವಿಶ್ವಾಸ ಪಡೆಯದೆ ಜಾರಿಗೆ ತಂದಿರುವ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳಿಂದ ಕಾರ್ಮಿಕ ಹಾಗೂ ರೈತ ವರ್ಗ ಅಸಹಾಯತೆಯ ಸ್ಥಿತಿ ಅನುಭವಿಸುತ್ತಿದೆ. ವರ್ಷಗಳ ಕಾಲ ನಡೆದ ರೈತರ ಹೋರಾಟದಿಂದ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಂಡಿದ್ದರೂ, ರೈತರು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಕಡೆಗಣಿ ಸಲಾಗುತ್ತಿದೆ ಎಂದು ದೂರಿದರು.

‘ಬೆಲೆ ಏರಿಕೆ, ದೂರಗಾಮಿ ಚಿಂತನೆ ಇಲ್ಲದ ಆರ್ಥಿಕ ನೀತಿಗಳು, ಕೈಗಾರಿಕೆ ಮುಚ್ಚುತ್ತಿರುವುದು, ವೇತನ ತಾರತಮ್ಯ, ಉದ್ಯೋಗ ಕಡಿತ ಮುಂತಾದ ಕಾರಣಗಳಿಂದಾಗಿ ಕಾರ್ಮಿಕರ ಹಾಗೂ ದುಡಿಯುವ ವರ್ಗದ ಬದುಕು ದುಸ್ಥರ ವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವ ರಾಜಕೀಯ ಪಕ್ಷಗಳು ಕಾರ್ಮಿಕರ ಏಕತೆಯ ಹೋರಾಟವನ್ನು ದಮನಿಸಲು ಜಾತಿ, ಧರ್ಮಗಳ ಮೂಲಕ ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಸಿಐಟಿಯು ರೀತಿಯ ಸಂಘಟನೆಗಳು ಸತ್ಯವನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ದುಡಿಯುವ ವರ್ಗದ ಪ್ರತಿರೋಧ ಇನ್ನಷ್ಟು ಪ್ರಬಲವಾಗಲು, ಏಕತೆಯ ಹೋರಾಟಗಳು ನಡೆಯಬೇಕಿದೆ’ ಎಂದರು.

ಕಾರ್ಮಿಕರ ಹಿತಾಸಕ್ತಿಗಾಗಿ 2023ರ ಜನವರಿಯಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ರಾಜ್ಯ ಸಮ್ಮೇಳನಗಳು ನಡೆಯುತ್ತಿದೆ. ಅಖಿಲ ಭಾರತ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿಗೆ ಒತ್ತಾಯ ಮಾಡಲಾಗುವುದು ಎಂದರು.

ಸಿಐಟಿಯು ಸಂಘಟನೆಯ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ತಪನ್‌ಸೇನ್, ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್, ಮುಖಂಡರಾದ ಕೆ.ಎನ್.ಉಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಹಿರಿಯ ಕಾರ್ಮಿಕ ಮುಖಂಡ ವಿ.ಜೆ.ಕೆ. ನಾಯರ್, ರೈತ ಸಂಘಟನೆಯ ಪ್ರಾಂತ ಉಪಾಧ್ಯಕ್ಷ ಬಸವರಾಜ, ಸಿಐಟಿಯು 15ನೇ ಸ್ವಾಗತ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ ಇದ್ದರು.

ಸಿಐಟಿಯು 14ನೇ ರಾಜ್ಯ ಸಮ್ಮೇಳನದಿಂದ 15ನೇ ಸಮ್ಮೇಳನದವರೆಗಿನ ಅವಧಿಯಲ್ಲಿ ಚಳವಳಿಗಾಗಿ ಹುತಾತ್ಮರಾದವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಅವರ ಉದ್ಘಾಟನಾ ಭಾಷಣವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಕನ್ನಡಕ್ಕೆ ಅನುವಾದಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT