ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಕ್ಯಾಂಪ್ ಆರಂಭ: ಕ್ಲಿಫ್‌ ಜಂಪಿಂಗ್ ತಾಣವಾಗಲಿದೆ ಸೇಂಟ್ ಮೇರಿಸ್‌

ಯುವಜನತೆಯನ್ನು ಆಕರ್ಷಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ತಂತ್ರ
Last Updated 21 ಡಿಸೆಂಬರ್ 2018, 18:49 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆಯ ಪ್ರಸಿದ್ಧ ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಜನವರಿಯಿಂದ ‘ಕ್ಲಿಫ್‌ ಜಂಪಿಂಗ್’ ವೃತ್ತಿಪರ ಸಾಹಸ ಕ್ರೀಡೆ ಆರಂಭವಾಗಲಿದೆ. ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ‘ಕ್ಲಿಫ್‌ ಜಂಪಿಂಗ್’ ಕ್ರೀಡೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವುದು ವಿಶೇಷ.

ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನೂತನ ಯೋಜನೆ ಇದಾಗಿದ್ದು, ಜನವರಿಯಿಂದ ಕ್ಯಾಂಪ್‌ಗಳು ಆರಂಭವಾಗಲಿವೆ.

ಏನಿದು ಕ್ಲಿಫ್ ಜಂಪ್‌:ನದಿ, ಜಲಪಾತ ಅಥವಾ ಸಮುದ್ರದ ಅಂಚಿನಲ್ಲಿರುವ ಎತ್ತರದ ಬಂಡೆಗಳ ಮೇಲಿನಿಂದ ನೀರಿಗೆ ಹಾರುವುದನ್ನು ಕ್ಲಿಫ್‌ ಜಂಪಿಂಗ್ ಎನ್ನುತ್ತಾರೆ. ಹೀಗೆ ಹಾರುವಾಗ ಜೀವರಕ್ಷಕ ಸಲಕರಣೆಗಳನ್ನು ಬಳಸುವುದಿಲ್ಲ. ರೋಚಕ ಅನುಭವವೇ ಕ್ಲಿಫ್ ಜಂಪಿಂಗ್ ವಿಶೇಷತೆ ಎನ್ನುತ್ತಾರೆ ಮಲ್ಪೆ ಬೀಚ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುದೇಶ್ ಶೆಟ್ಟಿ.

ಈಗಾಗಲೇ ವಾರಣಸಿಯ ಪಾರ್ಥಸಾರಥಿ ನೇತೃತ್ವದ ತಜ್ಞರ ತಂಡ ಸೇಂಟ್ ಮೇರಿಸ್ ಐಲ್ಯಾಂಡ್‌ಗೆ ಭೇಟಿ ನೀಡಿ ಕ್ಲಿಫ್‌ ಜಂಪಿಂಗ್‌ಗೆ ಸೂಕ್ತವಾದ ಸ್ಥಳಗಳನ್ನು ಗುರುತಿಸಿದೆ. ಬಂಡೆಗಳ ಎತ್ತರ, ನೀರಿನ ಆಳ, ಗಾಳಿಯ ವೇಗ, ಹೀಗೆ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದೆ. 10 ಅಡಿಗಳಿಂದ 35 ಅಡಿ ಎತ್ತರದ ಬಂಡೆಗಳನ್ನು ಜಂಪ್‌ ಮಾಡಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುರಕ್ಷತೆ ದೃಷ್ಟಿಯಿಂದ ಕ್ಲಿಫ್‌ ಜಂಪ್ ಮಾಡಲು ಕನಿಷ್ಠ 15 ಅಡಿ ಆಳ ಇರಬೇಕು. ಸಮುದ್ರದಾಳದಲ್ಲಿ ಅಪಾಯಕಾರಿ ಬಂಡೆಗಳು ಇರಬಾರದು. ಈ ದ್ವೀಪದಲ್ಲಿ 15 ರಿಂದ 25 ಅಡಿ ಆಳವಿರುವ ಜಾಗಗಳನ್ನು ಗುರುತಿಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಜನರಲ್‌ ತಿಮ್ಮಯ್ಯ ಸ್ಪೋರ್ಟ್ಸ್‌ ಅಕಾಡೆಮಿಯಿಂದ ಕ್ಲಿಫ್ ಜಂಪಿಂಗ್ ಶಿಬಿರ ಆಯೋಜನೆಗೆ ಅನುಮತಿ ಸಿಕ್ಕಿದೆ. ಜನವರಿಯಲ್ಲಿ ಕ್ಯಾಂಪ್‌ಗಳು ಆರಂಭವಾಗಲಿವೆ ಎಂದರು.

ಕಳೆದ ವಾರ ನಡೆದ ಅಭ್ಯಾಸ ಶಿಬಿರದಲ್ಲಿ ಉಡುಪಿ, ಮಣಿಪಾಲ, ಮಂಗಳೂರಿನ 10 ಸಾಹಸಿ ಯುವಕರ ತಂಡ ಭಾಗವಹಿಸಿ ಜಂಪ್ ಮಾಡಿದೆ. ಸೇಂಟ್ ಮೇರಿಸ್ ಐಲ್ಯಾಂಡ್‌ ರಾಜ್ಯದಲ್ಲೇ ಅತ್ಯುತ್ತಮ ಕ್ಲಿಫ್ ಡೈವಿಂಗ್ ತಾಣವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾ, ಫ್ರಾನ್ಸ್‌ ಸೇರಿದಂತೆ ಹಲವೆಡೆ ವೃತ್ತಿಪರ ಕ್ಲಿಫ್ ಜಂಪಿಂಗ್‌ ಪ್ರಸಿದ್ಧಿ ಪಡೆದಿದೆ. ಜಲಪಾತಗಳ ಕಡಿದಾದ ಬಂಡೆಗಳು, ಬೃಹತ್ ಸೇತುವೆ, ಬೆಟ್ಟಗುಡ್ಡಗಳ ತುದಿಯಿಂದ ಸ್ಪರ್ಧಿಗಳು ಹಾರುತ್ತಾರೆ. ಭಾರತದಲ್ಲಿ ಕೆಲವರ್ಷಗಳಿಂದೀಚೆಗೆ ಈ ಕ್ರೀಡೆಯತ್ತ ಆಸಕ್ತಿ ಬೆಳೆಯುತ್ತಿದೆ. ಪ್ರವಾಸೋದ್ಯಮ ಇಲಾಖೆ ಹೆಚ್ಚು ಗಮನ ಹರಿಸಿದರೆ, ವಿದೇಶಿ ಪ್ರವಾಸಿಗರನ್ನು ಸೆಳೆಯಬಹುದು ಎನ್ನುತ್ತಾರೆ ಸುದೇಶ್ ಶೆಟ್ಟಿ.

**

‘ಸಾಹಸಿ ಮನಸ್ಸು ಹೊಂದಿರಬೇಕು’

ಕ್ಲಿಫ್‌ ಜಂಪಿಂಗ್‌ಗೆ ಸಾಹಸಿ ಮನಸ್ಸು ಇರಬೇಕು. ಉತ್ತಮಈಜುಪಟುವಾಗಿದ್ದು, ಸದೃಢ ಆರೋಗ್ಯ ಹೊಂದಿರಬೇಕು. ಜಂಪ್ ಮಾಡುವ ಮುನ್ನ ಹೃದಯ ಬಡಿತ, ದೈಹಿಕ ಹಾಗೂ ಮಾನಸಿಕಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆರಂಭದಲ್ಲಿ 10 ಅಡಿ ಎತ್ತರದಿಂದ ಹಾರಿಸಲಾಗುತ್ತದೆ. ಹಂತಹಂತವಾಗಿ 15, 20, 25 ಅಡಿಗಳಿಂದ ಹಾರಿಸಲಾಗುವುದು.

ಅವಘಡಗಳು ಸಂಭವಿಸದಂತೆ ಎಚ್ಚರವಹಿಸಲಾಗಿದೆ. ಪ್ರಥಮ ಚಿಕಿತ್ಸೆ, ಮುಳುಗು ತಜ್ಞರು, ಸ್ಕೀಜೆಟ್‌ ವ್ಯವಸ್ಥೆ ಮಾಡಲಾಗಿದೆ. ಕ್ಲಿಫ್ ಜಂಪಿಂಗ್ ಕುರಿತು ಮಾಹಿತಿಗೆ, ಸುದೇಶ್‌ ಶೆಟ್ಟಿ: 97425 07270 ಸಂಪರ್ಕಿಸಬಹುದು.

**

ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಅಗತ್ಯ ನೆರವು ನೀಡುತ್ತಿದೆ. ಕ್ಲಿಫ್‌ ಜಂಪಿಂಗ್‌ಗೂ ಜಿಲ್ಲಾಡಳಿತದ ಸಹಭಾಗಿತ್ವ ಸಿಕ್ಕಿದೆ.

–ಸುದೇಶ್ ಶೆಟ್ಟಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT