ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಗೆ ಪೆಟ್ಟುಕೊಟ್ಟ ಕೊರೊನಾ ವೈರಸ್ ಸೋಂಕು

ಅಸ್ವಸ್ಥಗೊಂಡು ಬಿದ್ದವರನ್ನು ಅನುಮಾನದಿಂದ ನೋಡುತ್ತಿರುವ ಸಾರ್ವಜನಿಕರು
Last Updated 18 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕಿನ ಭೀತಿ ಮಾನವೀಯತೆಯ ಮೇಲೂ ಬಲವಾದ ಪೆಟ್ಟುಕೊಟ್ಟಿದೆ. ವೃದ್ಧರು, ಅಸಹಾಯಕರು ಅನಾರೋಗ್ಯದಿಂದ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದರೂ, ಕೊರೊನಾ ಭಯದಿಂದ ಯಾರೂ ಅವರನ್ನು ಮುಟ್ಟುವ ಗೋಜಿಗೆ ಹೋಗುತ್ತಿಲ್ಲ. ಈಚೆಗೆ ಅಸ್ವಸ್ಥಗೊಂಡು ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ.

ಮಾರ್ಚ್‌ 16ರಂದು ಕೃಷ್ಣಮಠ ಸಮೀಪದ ಕನಕದಾಸ ರಸ್ತೆಯ ಆಭರಣ ಮಳಿಗೆಯ ಎದುರು 45 ವರ್ಷದ ವ್ಯಕ್ತಿ ತೀವ್ರ ಅಸ್ವಸ್ಥರಾಗಿ ಬಿದ್ದಿದ್ದರು. ಬಾಯಲ್ಲಿ ರಕ್ತ ಒಸರುತ್ತಿತ್ತು. ಸದಾ ಜನಜಂಗಳಿಯ ರಸ್ತೆಯಲ್ಲಿ ಜನರು ಅಡ್ಡಾಡುತ್ತಿದ್ದರೂ ವ್ಯಕ್ತಿಯ ರಕ್ಷಣೆಗೆ ಧಾವಿಸಲಿಲ್ಲ. ಪರಿಣಾಮ ಆತ ಸಾವನ್ನಪ್ಪಬೇಕಾಯಿತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು.

ಕೊರೊನಾ ಸೋಂಕು ಮಾನವೀಯತೆಯನ್ನು ಮರೆಸಿದೆ. ತೀವ್ರ ಅನಾರೋಗ್ಯ, ಬಳಲಿಕೆಯಿಂದ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದರೂ ಅವರನ್ನು ಕೊರೊನಾ ಸೋಂಕಿತರ ದೃಷ್ಟಿಯಲ್ಲಿಯೇ ಜನರು ನೋಡುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸುವುದಿರಲಿ, ಮುಟ್ಟಲೂ ಜನ ಭಯಪಡುತ್ತಿದ್ದಾರೆ ಎಂದು ಕೊರೊನಾ ಸೃಷ್ಟಿಸಿರುವ ಭೀತಿಯನ್ನು ವಿವರಿಸಿದರು ಒಳಕಾಡು.

ಮಾರಣಾಂತಿಕ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಅವಶ್ಯ. ಆದರೆ, ಮಾನವೀಯತೆ ಮರೆತು ರಸ್ತೆಯಲ್ಲಿ ಅಸ್ವಸ್ಥವಾಗಿ ಬಿದ್ದವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕಡೆ ಪಕ್ಷ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ಜಿಲ್ಲಾ ನಾಗರಿಕ ಸಮಿತಿಗಾದರೂ ತಿಳಿಸಿದರೆ ಅವರನ್ನು ಬದುಕಿಸುವ ಪ್ರಯತ್ನ ಮಾಡಬಹುದು ಎನ್ನುತ್ತಾರೆ ಅವರು.

ಉಡುಪಿಯಲ್ಲಿ ಹೊರ ಜಿಲ್ಲೆಗಳಿಂದ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚಾಗಿದೆ. ಕಡು ಬಡತನ, ವ್ಯಸನಗಳಿಗೆ ಬಲಿಯಾಗಿ ಸೂರು ಕಳೆದುಕೊಂಡು ಬೀದಿಗೆ ಬಿದ್ದು ಪ್ರಾಣ ಬಿಡುವವರ ಸಂಖ್ಯೆಯೂ ಹೆಚ್ಚಿದೆ. ಹಿಂದೆಲ್ಲ, ರಸ್ತೆಬದಿ ಬಿದ್ದವರನ್ನು ಕಂಡರೆ ಸಾರ್ವಜನಿಕರು ಸ್ಪಂದಿಸಿ, ನೆರವಿಗೆ ದಾವಿಸುತ್ತಿದ್ದರು. ಈಗ ಕೊರೊನಾ ಭಯದಿಂದ ಅವರ ಹತ್ತಿರವೂ ಸುಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವವರ ಪೈಕಿ ಏಕಾಂಗಿಯಾಗಿ ಬರುವ ವೃದ್ಧರು ಹೆಚ್ಚಾಗಿದ್ದಾರೆ. ಹೀಗೆ ಬಂದವರಲ್ಲಿ ರಕ್ತದೊತ್ತಡ ಹೆಚ್ಚಾಗಿ, ಬಿಸಿಲಿನ ತಾಪಕ್ಕೆ ಆಯಾಸಗೊಂಡು ಅಸ್ವಸ್ಥರಾಗಿ ಬಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡವರೂ ಇದ್ದಾರೆ.

ಹಾಗಾಗಿ, ವೃದ್ಧರು, ಮಹಿಳೆಯರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿ. ಕನಿಷ್ಠ ನೀರನ್ನು ಕೊಟ್ಟು ಉಪಚರಿಸಿ. ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿದ್ದರೆ, ಜಿಲ್ಲಾ ನಾಗರಿಕ ಸಮಿತಿಯ ಮೊಬೈಲ್‌:91649 01111 ಸಂಪರ್ಕಿಸಿ ಎಂದು ನಿತ್ಯಾನಂದ ಒಳಕಾಡು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT