ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎರಡನೇ ಅಲೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಮಾರ್ಗಸೂಚಿ ಉಲ್ಲಂಘಿಸಿದರೆ ವಿರುದ್ಧ ದಂಡ, ಪ್ರಕರಣ
Last Updated 17 ಮಾರ್ಚ್ 2021, 16:15 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತಡೆಗೆ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ನಿಯಂತ್ರಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರ ವಿರುದ್ಧ ದಂಡ ವಸೂಲಿ ಮಾಡಿ. ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ದಂಡ ವಿಧಿಸುವ ಅಧಿಕಾರವನ್ನು ಈಗಾಗಲೇ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದ್ದು, ದಂಡ ವಿಧಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಡಿಸಿ, ಅಧಿಕಾರಿಗಳ ಕಾರ್ಯ ನಿರ್ವಹಣೆ ಪರಿಶೀಲನೆಗೆ ನೋಡೆಲ್ ಅಧಿಕಾರಿ ನೇಮಕ ಮಾಡಲಾಗುವುದು ಎಂದರು.

ಸಭೆ ಸಮಾರಂಭಗಳಲ್ಲಿ ನಿಗಧಿಗಿಂತ ಹೆಚ್ಚಿನ ಜನ ಸೇರಿದ್ದರೆ ದಂಡ ವಿಧಿಸಿ, ಅಂಗಡಿ, ಮಾಲ್‌ಗಳಲ್ಲಿ ಸಿಬ್ಬಂದಿ ಕಡ್ಡಾಯ ಮಾಸ್ಕ್ ಧರಿಸಿರಬೇಕು, ಗ್ರಾಹಕರಿಗೂ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಉದ್ದಿಮೆ ಪರವಾನಗಿ ರದ್ದು ಸೇರಿದಂತೆ ಎಪಿಡಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.

ಹಿರಿಯ ನಾಗರಿಕರು ಕೋವಿಡ್ ಲಸಿಕೆ ಪಡೆಯುವಂತೆ ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು. ಹಿಂದೆ ಕೋವಿಡ್ ಸಂದರ್ಭ ರಚಿಸಲಾಗಿದ್ದ ತಂಡಗಳು ಈಗಲೂ ಕರ್ತವ್ಯ ನಿರ್ವಹಿಸಬೇಕು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಂಚುವಿಕೆ, ಹೋಂ ಕ್ವಾರಂಟೈನ್ ಭೇಟಿ, ಕ್ವಾರಂಟೈನ್ ಆ್ಯಪ್‌ ನಿರ್ವಹಣೆ, ಗ್ರಾಮೀಣ ಕಾರ್ಯಪಡೆಗಳು ತಕ್ಷಣ ಸಭೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಸಾರ್ವಜನಿಕರಿಗೆ ಕೋವಿಡ್ ಸುರಕ್ಷತಾ ನಿಯಮಗಳ ಅರಿವು ಮೂಡಿಸಲು ಕರಪತ್ರಗಳ ಹಂಚಿಕೆ, ಜಿಂಗಲ್ಸ್ ಬಳಕೆ ಮಾಡಿ. ಮಣಿಪಾಲ ಸೇರಿದಂತೆ ಹಲವಡೆ ಅವಧಿ ಮೀರಿ ಪಬ್ ಮತ್ತು ಬಾರ್‌ಗಳು ತೆರೆಯುವಂತಿಲ್ಲ. ತೆರೆದರೆ ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿ.ಜಗದೀಶ್ ಸೂಚನೆ ನೀಡಿದರು.

ಜಿಲ್ಲೆಗೆ ಮಹಾರಾಷ್ಟ್ರ, ಮುಂಬೈ ಮತ್ತು ಕೇರಳದಿಂದ ಬರುವವರು 72 ಗಂಟೆಗಳ ಕೋವಿಡ್ ನೆಗೆಟಿವ್ ವರದಿ ಹಾಜರುಪಡಿಸುವುದು ಕಡ್ಡಾಯ. ಕೋವಿಡ್ ನಿಯಂತ್ರಿಸುವ ಕುರಿತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯ ನಾಗರಿಕರಿಗೆ, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿವಾರು ನಿಗಧಿತ ದಿನ ಲಸಿಕೆ ಹಾಕಲು ಪಿಡಿಒ ಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿಇಒ ಡಾ.ನವೀನ್ ಭಟ್ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜು, ಡಿಎಚ್‌ಒ ಡಾ. ಸುದೀರ್ ಚಂದ್ರ ಸೂಡಾ , ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT