ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸೋಂಕಿತರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್

ಕೋವಿಡ್‌ ಹರಡುವಿಕೆ ತಡೆಗೆ ನಿರ್ಧಾರ: ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 5 ಆಗಸ್ಟ್ 2021, 13:13 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌–19 ಪ್ರಮಾಣವನ್ನು ತಗ್ಗಿಸಲು ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್‌ ನಿರ್ಧಾರ ತೆಗೆದುಕೊಂಡಿದೆ. ಸೋಂಕಿತರ ಕುಟುಂಬದ ಸದಸ್ಯರನ್ನು ರಕ್ಷಣೆ ಮಾಡುವುದು ಹಾಗೂ ಸಮುದಾಯಕ್ಕೆ ಸೋಂಕು ಹರಡದಂತೆ ತಡೆಯುವುದು ಇದರ ಹಿಂದಿರುವ ಉದ್ದೇಶ.

ಸಾಂಸ್ಥಿಕ ಕ್ವಾರಂಟೈನ್ ಪ್ರಯೋಜನ ಏನು?

ಸಾಂಸ್ಥಿಕ ಕ್ವಾರಂಟೈನ್‌ ಅಂದರೆ ಸೋಂಕಿತರನ್ನು ಕೋವಿಡ್‌ ಕೇರ್ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು. ಇದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ಹಿಂದೆ, ರೋಗದ ಗುಣಲಕ್ಷಣಗಳು ಇಲ್ಲದ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರದ ಸೋಂಕಿತರಿಗೆ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅನುಮತಿ ನೀಡಲಾಗಿತ್ತು. ಇದರಿಂದ ಸೋಂಕಿತ ಅಥವಾ ಸೋಂಕಿತೆಯ ಕುಟುಂಬದ ಬಹುತೇಕ ಸದಸ್ಯರಿಗೆ ಸೋಂಕು ತಗುಲುವುದು ಹೆಚ್ಚಾಗಿ ಕಂಡುಬರುತ್ತಿತ್ತು.

ಜತೆಗೆ, ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದರಿಂದ ಸಮುದಾಯಕ್ಕೆ ವೇಗವಾಗಿ ಸೋಂಕು ಹರಡುತ್ತಿತ್ತು. ಈ ಅಪಾಯವನ್ನು ತಡೆಯಲು ಈ ಬಾರಿ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸಾಂಸ್ಥಿಕ ಕ್ವಾರಂಟೈನ್‌ನಿಂದ ಸೋಂಕಿತನ ಕುಟುಂಬದ ಸದಸ್ಯರನ್ನು ಕೋವಿಡ್‌ನಿಂದ ರಕ್ಷಣೆ ಮಾಡಬಹುದು. ಬಹುಮುಖ್ಯವಾಗಿ ಮನೆಯಲ್ಲಿರುವ ಹಿರಿಯ ಜೀವಗಳನ್ನು ಉಳಿಸಿಕೊಳ್ಳಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ.

ಕೋವಿಡ್‌ ಕೇಂದ್ರಗಳ ಸ್ಥಾಪನೆಯಿಂದ ಜಿಲ್ಲಾಡಳಿತಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಕೇಂದ್ರಗಳ ನಿರ್ವಹಣೆ, ಸೋಂಕಿತರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳ ಪೂರೈಕೆ, ಸಿಬ್ಬಂದಿ ನೇಮಕ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸ. ಆದರೂ, ಸೋಂಕು ನಿಯಂತ್ರಣಕ್ಕೆ ಬರಲು ಸಾಂಸ್ಥಿಕ ಕ್ವಾರಂಟೈನ್‌ ಅನಿವಾರ್ಯ.

ಯಾರಿಗೆಲ್ಲ ವಿನಾಯಿತಿ:ಗರ್ಭಿಣಿಯರು, ಅಶಕ್ತರು, ಕಂದಮ್ಮ, ವೃದ್ಧರು ಹಾಗೂ ವಿಶೇಷ ಪ್ರಕರಣಗಳಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುವುದು. ವಿನಾಯಿತಿ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ತಹಶೀಲ್ದಾರ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಜಂಟಿಯಾಗಿ ಪರಿಶೀಲಿಸಿ ವಿನಾಯಿತಿ ಸಂಬಂಧ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಅಡ್ಡಿಪಡಿಸಿದರೆ ಕ್ರಮ: ಡಿಸಿ ಎಚ್ಚರಿಕೆ

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ಸರಪಳಿ ತುಂಡರಿಸಿ, ಕೋವಿಡ್ ಪ್ರಮಾಣ ತಗ್ಗಿಸಲು ಕಡ್ಡಾಯ ಸಾಂಸ್ಥಿಕ ಕ್ವಾಂರೈಟೈನ್‌ ಮಾಡಲಾಗುತ್ತಿದೆ. ಗುರುವಾರದಿಂದಲೇ ಜಿಲ್ಲೆಯಾದ್ಯಂತ ಆದೇಶ ಜಾರಿಗೆ ಬರಲಿದ್ದು, ಕೋವಿಡ್ ಬಾಧಿತರು ಹೋಂ ಐಸೊಲೇಷನ್‌ನಲ್ಲಿ ಇರದೆ ಸಾಂಸ್ಥಿಕ ಕ್ಯಾರಂಟೈನ್‌ ಕೇಂದ್ರಗಳಿಗೆ ಬರಬೇಕು. ಸೋಂಕಿತರನ್ನು ಸ್ಥಳಾಂತರಿಸುವಾಗ ತಡೆದರೆ, ವಿರೋಧ ವ್ಯಕ್ತಪಡಿಸಿದರೆ ಅಂಥವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

2,500 ಬೆಡ್‌ಗಳ ವ್ಯವಸ್ಥೆ

ಜಿಲ್ಲೆಯಲ್ಲಿ 2,500 ಬೆಡ್‌ಗಳನ್ನು ಒಳಗೊಂಡ ಕೋವಿಡ್‌ ಕೇರ್ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಕಾರ್ಕಳ, ಹೆಬ್ರಿ, ನಿಟ್ಟೆ, ಬೈಂದೂರು, ಕೊಲ್ಲೂರು, ಕುಂದಾಪುರ, ಮಣಿಪಾಲ ಹಾಗೂ ಉಡುಪಿಯಲ್ಲಿ ಕೋವಿಡ್‌ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು ಜಿಲ್ಲಾಧಿಕಾರಿ ಜಿ.ಜಗದೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT