ಗುರುವಾರ , ಜೂನ್ 24, 2021
29 °C
11 ವೈದ್ಯರ ಜತೆಗೆ ಮುಖ್ಯಮಂತ್ರಿ ವಿಡಿಯೋ ಸಂವಾದ: 2ನೇ ಅಲೆ ನಿಯಂತ್ರಣಕ್ಕೆ ಸಲಹೆ ನೀಡಿದ ತಜ್ಞರು

ಕೋವಿಡ್‌ ನಿರ್ವಹಣೆ; ಸಿಎಂಗೆ ಡಾ.ಶಶಿಕಿರಣ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಚಿಕಿತ್ಸಾ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ 11 ಪರಿಣತ ವೈದ್ಯರ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ಅಧೀಕ್ಷಕರಾದ ಡಾ.ಶಶಿಕಿರಣ್‌ ಉಮಾಕಾಂತ್ ಭಾಗವಹಿಸಿ ಸಲಹೆಗಳನ್ನು ನೀಡಿದರು.

ಕೋವಿಡ್ ಮೊದಲ ಅಲೆಯ ಸಂದರ್ಭ ದೇಶದ ಪ್ರಥಮ ಖಾಸಗಿ ಕೋವಿಡ್ ಆಸ್ಪತ್ರೆಯಾಗಿ ಡಾ ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಸೋಂಕಿತರಿಗೆ ದೊರೆತ ಚಿಕಿತ್ಸೆ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡರು.

ಜಿಲ್ಲೆಯಲ್ಲಿ ಕೋವಿಡ್ ಪತ್ತೆಯಾದ ಆರಂಭದಲ್ಲಿ ಸೋಂಕಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ ಅಗತ್ಯ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಚಿಕಿತ್ಸೆಯ ಬಗ್ಗೆ ತಜ್ಞರಿಂದ ಮಾಹಿತಿ ಕಲೆ ಹಾಕಲಾಯಿತು. ಕೆಪಿಎಂಇ ಅಡಿ ಬರುವ ಎಲ್ಲ ಆಸ್ಪತ್ರೆಗಳ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಮಾಸ್ಕ್ ಧರಿಸುವುದು, ವೈಯಕ್ತಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆಯ ಬಗ್ಗೆ ಆರಂಭಿಕ ತರಬೇತಿ ನೀಡಲಾಯಿತು.

ಪಿಪಿಇ ಕಿಟ್‌ಗಳ ಬಳಕೆ ಬಗ್ಗೆ ವಿಡಿಯೋ ತಯಾರಿಸಿ ವೈದ್ಯರಿಗೆ ಹಂಚಲಾಯಿತು. ಸೋಂಕು ಹರದಡಂತೆ ತೆಗೆದುಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆಸ್ಪತ್ರೆಯ ಪ್ರತಿ ಸಿಬ್ಬಂದಿಯೂ ಮಾಹಿತಿ ತಿಳಿಸಲಾಯಿತು. ಆನ್‌ಲೈನ್‌ನಲ್ಲಿ ಹಾಗೂ ಆಸ್ಪತ್ರೆಗಳಿಗೆ ತೆರಳಿ ತರಬೇತಿ ನೀಡುವ ಮೂಲಕ ಸೋಂಕಿನ ವಿರುದ್ಧ ಹೋರಾಟಕ್ಕೆ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಯಿತು ಎಂದು ಡಾ.ಶಶಿಕಿರಣ್ ವಿವರಿಸಿದರು.

ಡಾ.ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಎಲ್ಲ ಸಹಾಯಕ ಸಿಬ್ಬಂದಿ ತಂಡವಾಗಿ ಕೆಲಸ ಮಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಿದರು. ಸರ್ಕಾರದ ಮಾರ್ಗಸೂಚಿಗಳ ಪಾಲನೆ, ಸಲಹೆ, ಸೂಚನೆಗಳು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಹಕಾರದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.

ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಇದುವರೆಗೆ 1,800ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಆರಂಭದಲ್ಲಿ ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಯಿತು. ನಂತರ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಯಿತು ಎಂದರು.

ಜಿಲ್ಲೆಗೆ ರೆಮಿಡಿಸಿವರ್ ಮತ್ತು ಆಮ್ಲಜನಕ ಸರಬರಾಜು ಕುರಿತು ಮುಖ್ಯಮಂತ್ರಿ ಕೇಳಿದ ಮಾಹಿತಿಗೆ ಉತ್ತರಿಸಿದ ಡಾ.ಶಶಿಕಿರಣ್, ಏಪ್ರಿಲ್ ಹಾಗೂ ಮೇ ತಿಂಗಳ ಆರಂಭದಲ್ಲಿ ರೆಮಿಡಿಸಿವರ್ ಹಾಗೂ ಆಮ್ಲಜನಕದ ವ್ಯತ್ಯಯ ಇತ್ತು. ಪ್ರಸ್ತುತ ಪರಿಸ್ಥಿತಿ ಸುಧಾರಣೆಯಾಗಿದ್ದು, ಜಿಲ್ಲೆಗೆ ನಿಯಮಿತ ರೆಮಿಡಿಸಿವರ್ ಸರಬರಾಜು ಆಗುತ್ತಿದೆ. ಆಮ್ಲಜನಕವನ್ನು ಕಾಳಜಿಯಿಮದ ಬಳಸಲಾಗುತ್ತಿದ್ದು, ಆಮ್ಲಜನಕ ಆಡಿಟ್ ಮತ್ತು ಆಮ್ಲಜನಕ ರೌಂಡ್ಸ್ ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಗೆ ನಿರಂತರ ಆಮ್ಲಜನಕ ಪೂರೈಸುವಂತೆ ಡಾ.ಶಶಿಕಿರಣ್ ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು