ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 20 ದಿನಗಳಲ್ಲಿ 11 ಸಾವಿರ ಮಂದಿಗೆ ಕೋವಿಡ್‌

ಕೋವಿಡ್ ಎರಡನೇ ಅಲೆಗೆ ಹೆಚ್ಚುತ್ತಿದೆ ಸಾವಿನ ಪ್ರಮಾಣ; ಐಸಿಯು ಬೆಡ್‌ಗಳು ಭರ್ತಿ
Last Updated 7 ಮೇ 2021, 16:12 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆ ಆತಂಕ ಸೃಷ್ಟಿಸಿದೆ. ಸೋಂಕಿನ ಪ್ರಮಾಣ ನಿರಂತರವಾಗಿ ಏರುಗತಿಯಲ್ಲಿ ಸಾಗಿದ್ದು, ಕೇವಲ 20 ದಿನಗಳಲ್ಲಿ 11,626 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದುವರೆಗಿನ ಗರಿಷ್ಠ ಸೋಂಕಿನ ಮಟ್ಟ ಇದಾಗಿದೆ.

‌‌ಪಾಸಿಟಿವಿಟಿ ದರ ಹೆಚ್ಚಳ

ಸೋಂಕಿನ ಪಾಸಿಟಿವಿಟಿ ದ‍ರವೂ ಹೆಚ್ಚುತ್ತಿದ್ದು, ತಿಂಗಳ ಹಿಂದೆ ಶೇ 20ರಷ್ಟಿದ್ದ ದರ ಕಳೆದ ಮೂರು ದಿನಗಳಿಂದ‍ ಶೇ 50ರ ಆಸುಪಾಸಿಗೆ ತ‍ಲು‍ಪಿದೆ. ಅಂದರೆ, ‍100 ಜನರಿಗೆ ಕೋವಿಡ್ ಪರೀ‍ಕ್ಷೆ ನಡೆಸಿದರೆ ‍50 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ‍ಇದುವರೆಗಿನ ಗರಿಷ್ಠ ಪಾಸಿಟಿವಿಟಿ ದರ ಇದಾಗಿದೆ.

ಗರಿಷ್ಠ ಸೋಂಕು

ಕಳೆದ ವರ್ಷ ಆಗಸ್ಟ್‌ ಹಾಗೂ ಸೆಪ್ಟೆ‍ಂಬರ್‌ನಲ್ಲಿ ಕೋವಿಡ್ ಮೊದಲ ಅಲೆ ಉತ್ತುಂಗದಲ್ಲಿತ್ತು. ಆಗಸ್ಟ್‌ನಲ್ಲಿ 7,228 ಮಂದಿಗೆ, ಸೆಪ್ಟೆಂಬರ್‌ನಲ್ಲಿ 5,540 ಮಂದಿಗೆ ಸೋಂಕು ದೃಢಪಟ್ಟಿತ್ತು. ಪ್ರಸ್ತುತ 2ನೇ ಅಲೆಯ ತೀವ್ರತೆ ಮೊದಲ ಅಲೆಗಿಂತಲೂ ದುಪ್ಪಟ್ಟು ಪ್ರಬಲವಾಗಿದೆ. ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಕಾಣಿಸಿಕೊಂಡ ಎರಡನೇ ಅಲೆ ವೇ‍ಗವಾಗಿ ಹೆಚ್ಚುತ್ತಿದೆ. ‌‌ಏ.17 ರಿಂದ ಮೇ 7ರವರೆಗೆ ಹನ್ನೊಂದುವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 750ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.

‌ಐಸಿಯು ಬೆಡ್‌ಗಳು ಖಾಲಿ

ತಿಂಗಳ ಹಿಂದಷ್ಟೆ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಬೆಡ್‌ಗಳಿವೆ ಎಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿತ್ತು. ಏ.23ರಂದು ಜಿಲ್ಲಾಡಳಿತ ನೀಡಿದ್ದ ಮಾಹಿತಿಯ ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ 46 ವೆಂಟಿಲೇಟರ್‌, 12 ಎಚ್‌ಎಫ್‌ಎನ್‌ಸಿ ಬೆಡ್‌ಗಳು, ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ 480 ಬೆಡ್‌ಗಳಿದ್ದವು.

‌ಖಾಸಗಿ ಆಸ್ಪತ್ರೆಗಳಲ್ಲಿ 580 ಆಮ್ಲಜನಕ ವ್ಯವಸ್ಥೆ ಇರುವ ಬೆಡ್‌, 270 ಸಾಮಾನ್ಯ ಬೆಡ್‌ಳು, 74 ಎಚ್‌ಡಿಯು ಬೆಡ್‌, 66 ಐಸಿಯು ಬೆಡ್‌ಗಳು‍, 5 ಎಚ್‌ಎಫ್‌ಎನ್‌ಸಿ ಬೆಡ್‌ ಹಾಗೂ 55 ವೆಂಟಿಲೇಟರ್‌ಗಳು ಖಾಲಿ ಇದ್ದವು.

‌ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಮೀಸಲಿರಿಸಿದ್ದ ‍ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಐಸೊಲೇಷನ್ ವಾರ್ಡ್ ಕೂಡ ಸೋಂಕಿತರಿಂದ ತುಂಬಿ ಹೋಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಐಸಿಯು ಹಾಗೂ ವೆಂಟಿಲೇಟರ್‌ ಬೆಡ್‌ಗಳ ಕೊರತೆ ಎದುರಾಗಿದೆ. ಈಚೆಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕೂಡ ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳಿಲ್ಲ ಎಂದು ಪರಿಸ್ಥಿತಿಯ ‍ಗಂಭೀರತೆಯನ್ನು ತಿಳಿಸಿದ್ದಾರೆ.

‌‌ಕೇವಲಒಂದು ತಿಂಗಳಲ್ಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಚಿತ್ರಣವೇ ಸಂಪೂರ್ಣ ಬದಲಾಗಿದ್ದು, ಬೆಡ್‌ಗ‍ಳ ಕೊರತೆ ಎದುರಾಗಿದೆ.

ಸಾವಿನ ಪ್ರಮಾಣ ಹೆಚ್ಚಳ

ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಕನಿಷ್ಠ ಮಟ್ಟದಲ್ಲಿತ್ತು. ‍‍ಏ.15ರವರೆಗೆ ಜಿಲ್ಲೆಯಲ್ಲಿ 192 ಮಂದಿ ಕೋವಿಡ್‌ಗೆ ಬಲಿಯಾಗಿದ್ದರು. ಕೇವಲ 23 ‍‍ದಿನಗಳಲ್ಲಿ 26 ಮಂದಿ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಾವಿನ ಸಂಖ್ಯೆ 218ಕ್ಕೆ ಏರಿಕೆಯಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.

ಗ್ರಾಮೀಣ ಭಾಗಗಳಲ್ಲಿ ಸೋಂಕು ಹೆಚ್ಚಳ

ಲಾಕ್‌ಡೌನ್ ಜಾರಿಗೂ ಮುನ್ನ ಬೆಂಗಳೂರು, ಮುಂಬೈನಲ್ಲಿ ನೆಲೆಸಿದ್ದ ಸಾವಿರಾರು ಮಂದಿ ಉಡುಪಿಗೆ ಬಂದಿದ್ದಾರೆ. ಹೀಗೆ ಬಂದವರಲ್ಲಿ ಗ್ರಾಮೀಣ ಭಾಗಗಳಿಗೆ ಸೇರಿದವರು ಹೆಚ್ಚು. ಇವರಲ್ಲಿ ಬಹುತೇಕರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂದವರಲ್ಲ. ಜತೆಗೆ ಬಂದವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆಯೂ ಇಲ್ಲದ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.

‘ಸೋಂಕಿನ ಲಕ್ಷಣಗಳಿದ್ದರೆ ಚಿಕಿತ್ಸೆ ಪಡೆಯಿರಿ’

ಮನೆಯಿಂದ ನೇರವಾಗಿ ಐಸಿಯು ಬೆಡ್‌ಗಳಿಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಎದುರಾಗಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾದರೆ ಅಗತ್ಯ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆಮ್ಲಜನಕದ ಅವಶ್ಯಕತೆ ಅಥವಾ ಐಸಿಯು ಬೆಡ್‌ ಬೇಕಾದರೂ ವ್ಯವಸ್ಥೆ ಮಾಡಬಹುದು. ಆದರೆ, ಪರಿಸ್ಥಿತಿ ಗಂಭೀರವಾದ ಬಳಿಕ ಮನೆಯಿಂದ ನೇರವಾಗಿ ಐಸಿಯು ಬೆಡ್‌ ಬೇಕು ಎಂದರೆ ಪೂರೈಸುವುದು ಸಾಧ್ಯವಿಲ್ಲ.

-ಜಿ.ಜಗದೀಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT