ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 98 ಮಂದಿಗೆ ಕೋವಿಡ್‌ ದೃಢ, ಒಬ್ಬರು ಸಾವು

ಹೊರ ಜಿಲ್ಲೆಗಳ ಇಬ್ಬರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆ
Last Updated 27 ಜುಲೈ 2021, 15:05 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 98 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೂ ಜಿಲ್ಲೆಯಲ್ಲಿ ಸರಾಸರಿ ಪ್ರತಿದಿನ 100 ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.

ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 47, ಕುಂದಾಪುರ ತಾಲ್ಲೂಕಿನ 28 ಹಾಗೂ ಕಾರ್ಕಳ ತಾಲ್ಲೂಕಿನ 23 ಮಂದಿ ಇದ್ದು, ಚಿಕಿತ್ಸೆ ಅಗತ್ಯವಿದ್ದ 12 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 86 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

73 ಸೋಂಕಿತರಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದು, 25 ಮಂದಿಯಲ್ಲಿ ಯಾವುದೇ ಲಕ್ಷಣಗಳು ಇಲ್ಲ. ಸೋಂಕಿತರಲ್ಲಿ 47 ಮಹಿಳೆಯರು ಹಾಗೂ 51 ಮಹಿಳೆಯರಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 7,67,191 ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, 69,189 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 67,906 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 872 ಸಕ್ರಿಯ ಸೋಂಕಿತರು ಇದ್ದಾರೆ.

ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯು ಪ್ರಬಲವಾಗಿದ್ದು, ಮೊದಲ ಅಲೆಯಲ್ಲಿ 190 ಸೋಂಕಿತರು ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 221 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ.

ಸೋಂಕಿನ ಪ್ರಮಾಣವೂ ಎರಡನೇ ಅಲೆಯಲ್ಲಿ ಹೆಚ್ಚಾಗಿದ್ದು, ಮೊದಲ ಅಲೆಯಲ್ಲಿ 23,611 ಮಂದಿಗೆ ಸೋಂಕು ತಗುಲಿದರೆ, ಎರಡನೇ ಅಲೆಯಲ್ಲಿ 44,485 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಲಸಿಕಾ ವಿವರ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಯ ಅಭಾವವಿದ್ದು, ಮೊದಲ ಡೋಸ್‌ ಹಾಕಿಸಿಕೊಳ್ಳುವವರು ಲಸಿಕೆ ಪಡೆಯಲು ನಿತ್ಯ ಸರ್ಕಾರಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡನೇ ಡೋಸ್‌ ಹಾಕಿಸಿಕೊಳ್ಳುವವರಿಗೆ ಮಾತ್ರ ಸೀಮಿತ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೂ 5,00,745 ಮಂದಿಗೆ ಮೊದಲ ಡೋಸ್‌ ಹಾಗೂ 1,77,562 ಮಂದಿಗೆ ಎರಡನೇ ಡೋಸ್‌ ಲಸಿಕೆ ಹಾಕಲಾಗಿದ್ದು, 18ರಿಂದ 44 ವರ್ಷದೊಳಗಿನ 1,59,745 ಜನರಿಗೆ ಮೊದಲ ಡೋಸ್‌, 3780 ಮಂದಿಗೆ ಎರಡನೇ ಡೋಸ್‌, 45 ವರ್ಷ ಮೇಲ್ಪಟ್ಟ 3,09,373 ಮಂದಿಗೆ ಮೊದಲ ಡೋಸ್‌, 1,50,164 ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ.

46 ಕಪ್ಪು ಶಿಲೀಂಧ್ರ ಪ್ರಕರಣ: ಮಂಗಳವಾರ ಹೊರ ಜಿಲ್ಲೆಗಳಿಂದ ಚಿಕಿತ್ಸೆ ಪಡೆಯುಲು ಬಂದಿರುವ ಇಬ್ಬರು ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಇದುವರೆಗೂ 46 ಕಪ್ಪುಶಿಲೀಂಧ್ರ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ ಉಡುಪಿಯ ಐವರು, ಕಾರ್ಕಳದ 6 ಹಾಗೂ ಹೊರ ಜಿಲ್ಲೆಗಳ 35 ರೋಗಿಗಳು ಇದ್ದಾರೆ.32 ರೋಗಿಗಳು ಗುಣಮುಖರಾಗಿದ್ದು, 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಸ್ಪಂದಿಸದೆ ಒಬ್ಬರು ಮೃತಪಟ್ಟಿದ್ದಾರೆ.

ಎರಡನೇ ಡೋಸ್ ಲಭ್ಯ
ಕೊರೊನಾ ಮುಂಚೂಣಿ ಕಾರ್ಯಕರ್ತರು, ದುರ್ಬಲ ಹಾಗೂ ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಅವರ ಆರೈಕೆ ಮಾಡುವವರಿಗೆ ಬುಧವಾರ ಎರಡನೇ ಡೋಸ್‌ ಲಸಿಕೆ ಲಭ್ಯವಿದೆ. ಅಜ್ಜರಕಾಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ 2ನೇ ಡೋಸ್ 200 ಡೋಸ್‌ ಕೋವಿಶೀಲ್ಡ್, ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ 100 ಡೋಸ್‌ ಕೋವಿಶೀಲ್ಡ್, ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಗಸ್ಟ್ 3ರ ಒಳಗೆ ವಿದೇಶ ಪ್ರಯಾಣ ಮಾಡುವವರಿಗೆ 100 ಡೋಸ್‌ ಕೋವಿಶೀಲ್ಡ್‌ ಲಸಿಕೆ ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪಡೆಯುವವರು ಹತ್ತಿರದ ಸರ್ಕಾರಿ ಆಸ್ಪತ್ರೆ ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಲಸಿಕೆ ಲಭ್ಯತೆ ಖಚಿತಪಡಿಸಿಕೊಂಡು ಪಡೆದುಕೊಳ್ಳಬೇಕು ಎಂದು ಡಿಎಚ್‌ಒ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT