ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ದಲಿತರ ಐಕ್ಯತಾ ಸಮಾವೇಶ ಡಿ.6ರಂದು

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಒಟ್ಟಾದ ದಲಿತ ಸಂಘಟನೆಗಳು
Last Updated 26 ನವೆಂಬರ್ 2022, 13:45 IST
ಅಕ್ಷರ ಗಾತ್ರ

ಉಡುಪಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಡಿ.6ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಏರ್ಪಡಿಸಲಾಗಿದೆ ಎಂದು ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಸಂಚಾಲಕ ಜಯನ್ ಮಲ್ಪೆ ತಿಳಿಸಿದರು.

ಶನಿವಾರ ನಗರದ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಮಾತನಾಡಿದ ಅವರು, ದಲಿತ ಸಂಘಟನೆಗಳ ವಿಘಟನೆಯಿಂದ ಚಳವಳಿಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಒಟ್ಟಾಗಿ ಹೋರಾಟ ಮಾಡಲು ಸಮಾನ ಮನಸ್ಕ 12 ಸಂಘಟನೆಗಳು ಐಕ್ಯ ಹೋರಾಟಕ್ಕೆ ತೀರ್ಮಾನಿಸಿವೆ. ಉಡುಪಿ ಜಿಲ್ಲೆಯಲ್ಲೂ ಎಲ್ಲ ದಲಿತ ಸಂಘಟನೆಗಳು ಒಂದಾಗಿದ್ದು ಸಮಾವೇಶದಲ್ಲಿ ಭಾಗವಹಿಸಲಿವೆ ಎಂದರು.

ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿದ್ದು ಕೋಮು ವಿಷದ ಗೋಡ್ಸೆ, ಸಾವರ್ಕರ್ ಮುನ್ನಲೆಗೆ ಬಂದಿದ್ದಾರೆ. ಚದುರಿ ಹೋಗಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಅಂಬೇಡ್ಕರ್ ಪರಿನಿಬ್ಬಾಣ ದಿನವಾದ ಡಿ.6ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.

ದೇಶದಲ್ಲಿ ಬಡತನ ದ್ವಿಗುಣವಾಗುತ್ತಿದ್ದು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಅರ್ಥ ವ್ಯವಸ್ಥೆ ಕುಸಿಯುತ್ತಿದ್ದು ಬೆಲೆ ಏರಿಕೆ, ನಿರುದ್ಯೋಗ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಲಿತರ ಸಾವು ನೋವುಗಳು, ಜನ ವಿರೋಧಿ ಕಾಯ್ದೆಗಳ ಜಾರಿ ನಡೆಯತ್ತಿದೆ.

ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ, ಮೀಸಲಾತಿ ಆಶಯಗಳಿಗೆ ಆರ್.ಎಸ್.ಎಸ್, ಬಿಜೆಪಿ ಅಡ್ಡಿಯುಂಟುಮಾಡುತ್ತಿದ್ದು ತಳ ಸಮುದಾಯಗಳನ್ನು ಧರ್ಮದ ಹೆಸರಿನಲ್ಲಿ ಒಡೆಯಲಾಗುತ್ತಿದೆ ಜಯನ್ ಮಲ್ಪೆ ಆರೋಪಿಸಿದರು.

ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಪ್ರಧಾನ ಸಂಚಾಲಕ ಮಂಜುನಾಥ್‌ ಗಿಳಿಯಾರು ಮಾತನಾಡಿ, ಸಣ್ಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ದಲಿತ ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುವ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗೆ ಭಂಗ ಬಂದಾಗ ಸರ್ಕಾರಗಳ ವಿರುದ್ದ ಚಳವಳಿ ರೂಪಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದವು.

ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ದೇಶದ ಇತಿಹಾಸವನ್ನು ತಿರುಚಿ ಅನುಕೂಲಕ್ಕೆ ತಕ್ಕಂತೆ ಬರೆಯುತ್ತಿರುವ ಕಾಲಘಟ್ಟದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಕಾರಣಕ್ಕೆ ಉಡುಪಿ ಜಿಲ್ಲೆಯ 6 ದಲಿತ ಸಂಘಟನೆಗಳು ಒಟ್ಟಾಗಿ ಐಕ್ಯತಾ ಒಕ್ಕೂಟ ರಚಿಸಿಕೊಳ್ಳಲಾಗಿದೆ ಎಂದರು.

ಡಿಸಿ ಮನ್ನಾ ಭೂಮಿಯು ದಲಿತರ ಹಕ್ಕಾಗಿದ್ದು ಅರ್ಹರಿಗೆ ಭೂಮಿ ಹಂಚಿಕೆ ಮಾಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ದಲಿತ ಸಮುದಾಯಕ್ಕೆ ಭೂಮಿ ಕೊಡಿಸಲು ದಲಿತ ಐಕ್ಯತಾ ಸಮಿತಿ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದರು.

ಸುಂದರ್ ಮಾಸ್ತರ್ ಮಾತನಾಡಿ, ಐಕ್ಯತಾ ಸಮಿತಿಯಲ್ಲಿ ಬಣಗಳಿಲ್ಲ. ದಲಿತರ ಪರವಾದ ಹೋರಾಟ ಮಾತ್ರ ಪ್ರಧಾನವಾಗಿರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT