ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ - 2023| ತಾಯಿ, ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕು: ಡಿಸಿ

ತಾಯಿ, ಶಿಶು ಮರಣ ಪ್ರಕರಣ ಶೂನ್ಯಕ್ಕಿಳಿಸಿಛ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ
Published 16 ಜನವರಿ 2024, 15:30 IST
Last Updated 16 ಜನವರಿ 2024, 15:30 IST
ಅಕ್ಷರ ಗಾತ್ರ

ಉಡುಪಿ: ಪ್ರಸವ ಪೂರ್ವ ಹಾಗೂ ಪ್ರಸವ ನಂತರದಲ್ಲಿ ತಾಯಿ ಮಗುವಿನ ಆರೈಕೆಗೆ ಅರಿವು ಮೂಡಿಸುವುದು, ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವ ಮೂಲಕ ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಾಮಾಜಿಕ ಸವಲತ್ತುಗಳ ಸಮನ್ವಯ ಸಮಿತಿ ಸಭೆ, ಟಿ.ಬಿ ಫೋರಂ ಸಮಿತಿ ಸಭೆ, ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಲಹಾ ಸಮಿತಿ ಸಭೆ, ಜಿಲ್ಲಾ ಕಣ್ಗಾವಲು ಸಮಿತಿ ಸಭೆ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರದ ಆಸ್ಪತ್ರೆಗಳ ನೋಂದಣಿ, ಕುಂದುಕೊರತೆ ನಿವಾರಣಾ ಸಭೆ ಹಾಗೂ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರಿಗೆ ಆರಂಭದಲ್ಲಿ ತಾಯಿಕಾರ್ಡ್‌ ವಿತರಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ತಪಾಸಣೆ ವೇಳೆ ಸಮಸ್ಯೆ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಬೇಕು. ಹೆರಿಗೆ ಸಮಯದಲ್ಲಿ ತೊಂದರೆ ಉಂಟಾದರೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಿಬ್ಬಂದಿ ನೆರವಿಗೆ ಧಾವಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 2023ರ ಜುಲೈನಿಂದ ಡಿಸೆಂಬರ್ ಅಂತ್ಯದವರೆಗೆ ಇಬ್ಬರು ತಾಯಿ ಹಾಗೂ 51 ಶಿಶುಗಳ ಮರಣ ಸಂಭವಿಸಿದೆ. ಮುಂದೆ ತಾಯಿ ಹಾಗೂ ಶಿಶು ಮರಣ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕು. 2023ರ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ 9,169 ಹೆರಿಗೆಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ 6,422, ಸರ್ಕಾರಿ ಆಸ್ಪತ್ರೆಗಳಲ್ಲಿ 2,747 ಹೆರಿಗೆಗಳು ಆಗಿವೆ.

ಒಟ್ಟು ಹೆರಿಗೆಗಳ ಪೈಕಿ 3,902 ಸಾಮಾನ್ಯ ಹೆರಿಗೆ, 5,267 ಶಸ್ತ್ರ ಚಿಕಿತ್ಸೆ ಹೆರಿಗೆ ನಡೆದಿದೆ. ವೈದ್ಯರು ಸಿಸೇರಿಯನ್‌ಗಿಂತ ಸಹಜ ಹೆರಿಗೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಜಿಲ್ಲೆಯಲ್ಲಿ 1,954 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಜಿಲ್ಲೆಯ ಗಡಿ ಭಾಗದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಬೆಡ್‌, ಐಸಿಯು ಸೇರಿದಂತೆ ಆಮ್ಲಜನಕದ ವ್ಯವಸ್ಥೆ, ಅಗತ್ಯ ಔಷಧಿ ದಾಸ್ತಾನುಗಳನ್ನು ಇರಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

2025ಕ್ಕೆ ಕ್ಷಯ ನಿರ್ಮೂಲನಾ ಭಾರತ ನಿರ್ಮಾಣಕ್ಕೆ ಪಣ ತೊಡಲಾಗಿದ್ದು ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 32,576 ಮಂದಿಯಲ್ಲಿ ಕ್ಷಯರೋಗ ತಪಾಸಣೆ ನಡೆಸಿದ್ದು, 1,578 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಜಿಲ್ಲೆಯ 153 ಗ್ರಾಮ ಪಂಚಾಯತಿಗಳಲ್ಲಿ 30 ಗ್ರಾಮ ಪಂಚಾಯತಿಗಳನ್ನು ಕ್ಷಯಮುಕ್ತ ಗ್ರಾಮಗಳಾಗಿ ಶೀಘ್ರ ಘೋಷಿಸಲಾಗುವುದು. ಕ್ಷಯರೋಗದ ಹರಡುವಿಕೆ, ಪತ್ತೆ, ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹೆಚ್ಚಿನ ತಪಾಸಣೆ ನಡೆಸಬೇಕು. ಕ್ಷಯ ಪತ್ತೆಯಾದರೆ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕೆಪಿಎಂಇ ಕಾಯ್ದೆಯ ಪ್ರಕಾರ ವೈದ್ಯಕೀಯ ವೆಚ್ಚಗಳ ವಿವರಗಳನ್ನು ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸಬೇಕು. ಅದರನ್ವಯವೇ ಶುಲ್ಕ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ. ಎರಡು ತಿಂಗಳಿಗೊಮ್ಮೆ ಪಿ.ಸಿ.ಪಿ.ಎನ್.ಡಿ.ಟಿ ಸಮಿತಿ ಸಭೆ ನಡೆಸುವಂತಹ, ಲಿಂಗಾನುಪಾತ ಕಡಿಮೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನು ಅರ್ಹರಿಗೆ ವಿತರಿಸಬೇಕು. ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿಯಮಾನುಸಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ ಹೊಂದಿರುವ ಫಲಾನುಭವಿಗಳಿಗೆ ಬೆಡ್‌ಗಳನ್ನು ಮೀಸಲಿರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸರ್ಕಾರ ಎಚ್‌ಐವಿ ಪೀಡಿತರಿಗೆ ಜಾರಿಗೆ ತಂದಿರುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು. ವಿಶೇಷ ವರ್ಗ ಯೋಜನೆಯಡಿ ಎಚ್‌ಐವಿ ಸೋಂಕಿತ ಕುಟುಂಬದವರಿಗೆ ವಸತಿ ನಿಗಮದ ಸಹಯೋಗದಲ್ಲಿ ವಸತಿ ಮಂಜೂರು ಮಾಡುವುದರ ಜತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪಿಂಚಣಿ ಮಂಜೂರು ಮಾಡಬೇಕು. ಜನಸಾಮಾನ್ಯರಲ್ಲಿ ಎಚ್‌ಐವಿ ಹರಡುವಿಕೆಯ ಬಗ್ಗೆ ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಲೇರಿಯಾ, ಇಲಿಜ್ವರ, ಎಚ್1ಎನ್1 ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿರುವ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ನೀರು ಶುದ್ಧವಾಗಿರದಿದ್ದಲ್ಲಿ ಫ್ಲೋರಿನೇಷನ್ ಮಾಡಿಸಿ ನಂತರ ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಬಳಸಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಡಿಎಚ್‌ಒ ಡಾ.ಐ.ಪಿ.ಗಡಾದ್‌, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ರಾಮರಾವ್, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ಡಾ. ಜೋಶ್ನಾ ಇದ್ದರು.

‘ಹಾವು ಕಡಿತ ಚಿಕಿತ್ಸೆಗೆ ಔಷಧಿ ದಾಸ್ತಾನು ಇರಿಸಿಕೊಳ್ಳಿ’ ‘ರಕ್ತದ ಕೊರತೆಯಾಗದಂತೆ ಎಚ್ಚರ ವಹಿಸಿ’ ‘ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ’

ಅಂಕಿ–ಅಂಶಯ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 2023ರಲ್ಲಿ ರಕ್ತ ಸಂಗ್ರಹ ಗುರಿ;11250 ಯೂನಿಟ್‌ ಸಂಗ್ರಹವಾದ ರಕ್ತ;22186 ಯೂನಿಟ್ 2022ರಲ್ಲಿ ದಾಖಲಾದ ನಾಯಿ ಕಡಿತ ಪ್ರಕರಣ;13806 2023ರಲ್ಲಿ ದಾಖಲಾದ ನಾಯಿ ಕಡಿತ ಪ್ರಕರಣ;17733 2023ರಲ್ಲಿ ಹಾವು ಕಡಿತ ಪ್ರಕರಣ;314

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT