ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಡಯಾಲಿಸಿಸ್‌ ಘಟಕ ಬಂದ್‌: ರೋಗಿಗಳ ಪರದಾಟ

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಜಿಲ್ಲೆಯ ಬಡ ರೋಗಿಗಳು
Published 9 ಅಕ್ಟೋಬರ್ 2023, 8:26 IST
Last Updated 9 ಅಕ್ಟೋಬರ್ 2023, 8:26 IST
ಅಕ್ಷರ ಗಾತ್ರ

ವರದಿ – ಬಾಲಚಂದ್ರ ಎಚ್‌.

ಉಡುಪಿ: ಸರ್ಕಾರ ಹಾಗೂ ಖಾಸಗಿ ಸಂಸ್ಥೆಯ ನಡುವಿನ ವ್ಯವಹಾರದ ತಿಕ್ಕಾಟಕ್ಕೆ ಜಿಲ್ಲೆಯ ಡಯಾಲಿಸಿಸ್ ಘಟಕ ಸ್ಥಗಿತವಾಗಿದೆ. ಪರಿಣಾಮ ಡಯಾಲಿಸಿಸ್‌ ಸೇವೆ ಸಿಗದೆ ಬಡ ರೋಗಿಗಳು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಡಯಾಲಿಸಿಸ್‌ ಘಟಕ ನಿರ್ವಹಣೆಯ ಕೊರತೆಯಿಂದಾಗಿ ಸಂಪೂರ್ಣ ಬಂದ್ ಆಗಿದ್ದು, ಉಚಿತವಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ತೆತ್ತು ಡಯಾಲಿಸಿಸ್‌ ಮಾಡಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ವಾರಕ್ಕೆ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದ ರೋಗಿಗಳು ಈಗ ಪ್ರತಿ ತಿಂಗಳು ಡಯಾಲಿಸಿಸ್‌ಗೆ ಕನಿಷ್ಟ 15 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಘಟಕ ಬಂದ್ ಆಗಿ 10 ದಿನಗಳು ಕಳೆದರೂ ಸ್ಪಂದಿಸದ ಸರ್ಕಾರ ಬಡ ರೋಗಿಗಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

11 ಯಂತ್ರಗಳೂ ಬಂದ್‌: ನಾಲ್ಕು ವರ್ಷಗಳ ಹಿಂದೆ ದಾನಿಗಳ ನೆರವಿನಿಂದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾದ ಡಯಾಲಿಸಿಸ್‌ ಘಟಕಕ್ಕೆ 11 ಡಯಾಲಿಸಿಸ್‌ ಯಂತ್ರಗಳನ್ನು ಹಾಕಲಾಗಿತ್ತು. ಸಾಮಾನ್ಯ ರೋಗಿಗಳಿಗೆ 10 ಯಂತ್ರಗಳು ಬಳಕೆಯಾದರೆ, ಎಚ್‌ಐವಿ ರೋಗಿಗಳಿಗೆ 1 ಯಂತ್ರ ಬಳಕೆಯಾಗುತ್ತಿತ್ತು.

ಆರಂಭದಲ್ಲಿ ಉದ್ಯಮಿ ಬಿ.ಆರ್‌.ಶೆಟ್ಟಿ ಮಾಲೀಕತ್ವದ ಸಂಸ್ಥೆ ಘಟಕದ ನಿರ್ವಹಣೆಯ ಹೊಣೆ ಹೊತ್ತುಕೊಂಡಿತ್ತು. ಬಳಿಕ ಕಾರಣಾಂತರಗಳಿಂದ ಸಂಸ್ಥೆ ನಿರ್ವಹಣೆಯಿಂದ ಹಿಂದೆ ಸರಿದಾಗ 5 ತಿಂಗಳ ಕಾಲ ಜಿಲ್ಲಾ ಆಸ್ಪತ್ರೆಯೇ ಘಟಕವನ್ನು ನಿರ್ವಹಣೆ ಮಾಡಿತು. ಬಳಿಕ ನಿರ್ವಹಣೆ ಹೊಣೆಯನ್ನು ಸಂಜೀವಿನಿ ಸಂಸ್ಥೆಗೆ ವಹಿಸಲಾಯಿತು.

ಜಿಲ್ಲೆಯ ಹೆಬ್ರಿ, ಬ್ರಹ್ಮಾವರ, ಬೈಂದೂರು, ಕುಂದಾಪುರ, ಕಾರ್ಕಳ, ಕಾಪು ತಾಲ್ಲೂಕುಗಳು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಡಯಾಲಿಸಿಸ್‌ ಮಾಡಿಸಿಕೊಳ್ಳಲು ರೋಗಿಗಳು ಉಡುಪಿ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಘಟಕ ಆರಂಭವಾದಾಗ 80ಕ್ಕಿಂತ ಹೆಚ್ಚು ರೋಗಿಗಳು ಡಯಾಲಿಸಿಸ್‌ಗೆ ನೋಂದಣಿ ಮಾಡಿಸಿಕೊಂಡು ನಿಯಮಿತವಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ.

ಪ್ರತಿದಿನ ಸರಾಸರಿ 15ರಿಂದ 18ರಂತೆ ತಿಂಗಳಿಗೆ 600 ಬಾರಿ ಘಟಕದಲ್ಲಿ ಡಯಾಲಿಸಿಸ್‌ ನಡೆಯುತ್ತಿತ್ತು. ನಿರ್ವಹಣೆ ಕೊರತೆಯಿಂದ ಡಯಾಲಿಸಿಸ್‌ ಯಂತ್ರಗಳು ಒಂದೊಂದಾಗಿ ಕೆಟ್ಟುನಿಂತವು. ಘಟಕ ಆರಂಭವಾಗಿ ಎರಡು ವರ್ಷ ಕಳೆಯುವಷ್ಟರಲ್ಲಿ ಅರ್ಧದಷ್ಟು ಯಂತ್ರಗಳು ಹಾಳಾದವು.

ಕೆಟ್ಟುನಿಂತ ಯಂತ್ರಗಳನ್ನು ದುರಸ್ತಿ ಮಾಡಿಸದೆ ಚಾಲ್ತಿಯಲ್ಲಿರುವ ಯಂತ್ರಗಳ ಮೇಲೆ ಅವಲಂಬನೆ ಹೆಚ್ಚಾದ ಪರಿಣಾಮ ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲ 11 ಯಂತ್ರಗಳೂ ಕೆಟ್ಟುನಿಂತವು ಎಂದು ಸಮಸ್ಯೆಯನ್ನು ತೆರೆದಿಡುತ್ತಾರೆ ಹೆಸರು ಹೇಳಲಿಚ್ಚಿಸದ ಆರೋಗ್ಯ ಇಲಾಖೆಯ ಸಿಬ್ಬಂದಿ.

ಡಯಾಲಿಸಿಸ್‌ಗೆ ನೋಂದಾಯಿಸಿಕೊಂಡವರೆಲ್ಲ ಬಹುತೇಕ ಬಡವರಾಗಿದ್ದು ದೂರದ ಊರುಗಳಿಂದ ಬೆಳಗಿನ ಜಾವವೇ ಬಂದು ಸರತಿ ಸಾಲಿನಲ್ಲಿ ಕಾಯುತ್ತಾರೆ. ಬಂದವರಿಗೆಲ್ಲ ಡಯಾಲಿಸಿಸ್‌ ಯಂತ್ರಗಳು ಕೆಟ್ಟಿವೆ ಎಂದು ಹೇಳಿ ಸಾಕಾಗಿದೆ. ಕೆಲವರು ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಗೋಳಾಡುವ, ಒಮ್ಮೆಯಾದರೂ ಡಯಾಲಿಸಿಸ್‌ ಮಾಡಿ ಎಂದು ಅಂಗಾಲಾಚುವ ದೃಶ್ಯಗಳು ಕಣ್ಣೀರು ತರಿಸುತ್ತವೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಆರಂಭದಲ್ಲಿ 80ಕ್ಕೂ ಹೆಚ್ಚು ರೋಗಿಗಳು ಡಯಾಲಿಸಿಸ್‌ಗೆ ಹೆಸರು ನೋಂದಾಯಿಸಿಕೊಂಡಿದ್ದರು. ಪ್ರತಿ ವಾರ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಬಂದು ಸೌಲಭ್ಯ ಸಿಗದೆ ಬೇಸತ್ತು 43 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಉಳಿದ 40 ಮಂದಿ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಮಾಹಿತಿಯೂ ಇಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಸಿಬ್ಬಂದಿ.

ಡಯಾಲಿಸಿಸ್‌ ಪ್ರಕ್ರಿಯೆಗೆ ಬೇಕಾಗಿರುವ ಡಯಾಲೈಸರ್‌, ಪ್ಯಾರಾಸಿಟಿಕ್‌ ಆಸಿಡ್‌, ಬಯೊಕಾರ್ಬೊ, ಟ್ಯುಬ್, ಇಂಜೆಕ್ಷನ್‌, ಸಿರೆಂಜ್‌, ಬ್ಲೀಚ್ ಸೇರಿದಂತೆ ಹಲವು ವಸ್ತುಗಳ ಪೂರೈಕೆ ಎರಡು ತಿಂಗಳ ಹಿಂದೆಯೇ ನಿಂತುಹೋಗಿದೆ ಎನ್ನುತ್ತಾರೆ ಸಿಬ್ಬಂದಿ.

ಕುಂದಾಪುರದಲ್ಲಿ ಹೇಗಿದೆ ಪರಿಸ್ಥಿತಿ: ಕುಂದಾಪುರದಲ್ಲೂ ಗುತ್ತಿಗೆ ಸಂಸ್ಥೆ ನಿರ್ವಹಣೆ ಮಾಡುತ್ತಿಲ್ಲವಾದರೂ ಜಿಲ್ಲಾ ಆರೋಗ್ಯ ಸೊಸೈಟಿಯ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿರುವ 5 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಮೂರು ಪಾಳಯದಲ್ಲಿ (ಒಬ್ಬರಿಗೆ 4 ಗಂಟೆ ) ತಲಾ ಐವರಂತೆ 15 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ತರಬೇತಿ ಹೊಂದಿರುವ ಹೊರ ಗುತ್ತಿಗೆ ನೌಕರರಿಂದ ಡಯಾಲಿಸಿಸ್ ಪ್ರಕ್ರಿಯೆ ಮಾಡಲಾಗುತ್ತಿದೆ. ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಭಟ್ಕಳ ಭಾಗದಿಂದಲೂ ರೋಗಿಗಳು ಬರುತ್ತಿದ್ದು, 25ಕ್ಕೂ ಹೆಚ್ಚು ರೋಗಿಗಳೂ ವೇಟಿಂಗ್ ಲೀಸ್ಟ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ.

ಪ್ರಸ್ತುತ ಇರುವ 5 ಯಂತ್ರಗಳ ಜೊತೆ ಹೆಚ್ಚುವರಿಯಾಗಿ 5 ಯಂತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಆಯುಷ್ಮಾನ್ ಯೋಜನೆಯಡಿ ಡಯಾಲಿಸಿಸ್ ಮಾಡಿಸಲು ಅವಕಾಶ ಕಲ್ಪಿಸುವುದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

[object Object]
ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ
ವಾರಕ್ಕೆ ಎರಡು ಬಾರಿ ಕಡ್ಡಾಯವಾಗಿ ಡಯಾಲಿಸಿಸ್‌ ಮಾಡಿಸಬೇಕು. ಜಿಲ್ಲಾ ಆಸ್ಪತ್ರೆಯ ಘಟಕ ಮುಚ್ಚಿರುವುದರಿಂದ ಮುಂದೆ ಏನು ಮಾಡಬೇಕು ತೋಚುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಶಕ್ತವಾಗಿಲ್ಲ.
–ರೋಗಿ
ಒಂದು ಬಾರಿ ಡಯಾಲಿಸ್‌ಗೆ ಖರ್ಚು ವೆಚ್ಚ ಸೇರಿ ₹2500 ಬೇಕು ತಿಂಗಳಿಗೆ ಹತ್ತು ಬಾರಿ ಮಾಡಿಸಲು ₹25 ಸಾವಿರ ಬೇಕು. ಬಡವರಾದ ನಾವು ಎಲ್ಲಿಂದ ಹಣ ಹೊಂದಿಸುವುದು.
–ರೋಗಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದವರು ಖಾಸಗಿ ಆಸ್ಪತ್ರೆಗೆ ಹೋದರೆ ಇನ್ಮುಂದೆ ಇಲ್ಲಿಯೇ ಮಾಡಿಸುವುದಾದರೆ ಮಾತ್ರ ಡಯಾಲಿಸಿಸ್‌ಗೆ ಅವಕಾಶ ಕೊಡುತ್ತೇವೆ ಎನ್ನುತ್ತಾರೆ. ಪ್ರಾಣ ಉಳಿಸಿಕೊಳ್ಳಲು ಅನಿವಾರ್ಯವಾಗಿ ಸಾಲ ಮಾಡಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
–ರಮೇಶ್ ಪೂಜಾರಿ
ವಾರದೊಳಗೆ ಕೇಂದ್ರ ಆರಂಭ
ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಯಂತ್ರಗಳ ದುರಸ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾ ಹೆಲ್ತ್‌ ಸೊಸೈಟಿಯಿಂದ ಘಟಕಕ್ಕೆ ಬೇಕಾದ ಟೆಕ್ನಿಷಿಯನ್‌ಗಳು ಸ್ಟಾಫ್‌ ನರ್ಸ್‌ ಗ್ರೂಪ್ ಡಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಹಣದಿಂದ ಯಂತ್ರಗಳನ್ನು ದುರಸ್ಥಿ ಮಾಡಿಸಲಾಗುತ್ತಿದೆ. ಈಗಾಗಲೇ ಖಾಸಗಿ ಸಂಸ್ಥೆ ಯಂತ್ರಗಳ ಪರಿಶೀಲನೆ ಮಾಡಿದ್ದು ವಾರದೊಳಗೆ ಕೇಂದ್ರ ಆರಂಭವಾಗುವ ಸಾಧ್ಯತೆಗಳು ಇವೆ. –ಡಾ.ವೀಣಾ ಕುಮಾರಿ ಜಿಲ್ಲಾ ಸರ್ಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT