ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬೇಸಗೆ ಆರಂಭದಲ್ಲೇ ನೀರಿಗೆ ಬವಣೆ

ಬಜೆ ಜಲಾಯಶದ ನೀರು ಮೇ ಅಂತ್ಯದವರೆಗೂ ಸಾಲಲಿದೆ: ನಗರಸಭೆ
Last Updated 13 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಬೇಸಗೆ ಆರಂಭದಲ್ಲಿಯೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಗರದ ಕೆಲವು ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಎತ್ತರದ ಪ್ರದೇಶಗಳಲ್ಲಿರುವ ಮನೆಗಳ ನಲ್ಲಿಗಳಿಗೆ ನೀರು ಹತ್ತುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಎಲ್ಲೆಲ್ಲಿ ಸಮಸ್ಯೆ:ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅನಂತ ನಗರ, ಚಿಟ್ಪಾಡಿ, ಇಂದ್ರಾಳಿ, ಕೊಳಂಬೆ, ಸರಳೆಬೆಟ್ಟು, ಅಜ್ಜರಕಾಡು ಹೀಗೆ, ಎತ್ತರದ ಪ್ರದೇಶದಲ್ಲಿರುವ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ.

ಆದರೆ, ನಗರಸಭೆ ಮಾತ್ರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿಲ್ಲ. ಬೇಸಗೆಯಲ್ಲಿ ಸಹಜವಾಗಿ ನೀರಿನ ಬಳಕೆ ಹೆಚ್ಚಾಗಿದ್ದು, ನೀರು ಪೂರೈಕೆ ಪೈಪ್‌ಲೈನ್‌ನಲ್ಲಿ ಒತ್ತಡ ಕುಸಿತದಿರುವುದರಿಂದ ಎತ್ತರದ ಪ್ರದೇಶದಲ್ಲಿರುವ ಕೆಲವು ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿರುವ ಪರಿಣಾಮ ಜಲಾಶಯದಿಂದ ನೀರೆತ್ತುವ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಒಂದು ದಿನ ವಿದ್ಯುತ್ ಸಮಸ್ಯೆಯಾದರೆ ನಗರಕ್ಕೆ ನೀರು ಪೂರೈಕೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಲು ನಾಲ್ಕೈದು ದಿನ ಬೇಕಾಗುತ್ತದೆ. ಇಂತಹ ಸವಾಲುಗಳ ನಡುವೆಯೂ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸದಂತೆ ಎಚ್ಚರ ವಹಿಸಲಾಗಿದೆ ‌ಎನ್ನುತ್ತಾರೆ ನಗರಸಭೆ ಪೌರಾಯುಕ್ತರಾದ ಉದಯ್‌ ಶೆಟ್ಟಿ.

ಮೇ ಅಂತ್ಯದವರೆಗೂ ನೀರಿದೆ:ಉಡುಪಿ ನಗರದ 35 ವಾರ್ಡ್‌ಗಳಿಗೆ ಹಿರಿಯಡ್ಕ ಸಮೀಪದ ಬಜೆ ಜಲಾಶಯದಿಂದ ನಿತ್ಯ ನೀರು ಸರಬರಾಜಾಗುತ್ತದೆ. ಸ್ವರ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಜೆ ಜಲಾಶಯವು ಉಡುಪಿ ಜನರ ದಾಹ ತಣಿಸಲು ಇರುವ ಏಕೈಕ ನೀರಿನ ಮೂಲ. ಬಜೆ ಬರಿದಾದರೆ ನೀರಿಗೆ ತತ್ವಾರ ಶುರುವಾಗುತ್ತದೆ.

ಕೇವಲ 6 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಬಜೆ ಜಲಾಶಯದಲ್ಲಿ ಸದ್ಯ 5.7 ಮೀಟರ್‌ ನೀರು ಸಂಗ್ರಹವಿದ್ದು, ಪ್ರತಿದಿನ ನಗರಕ್ಕೆ ಗರಿಷ್ಠ 32 ಎಂಎಲ್‌ಡಿ ನೀರು ಪೂರೈಕೆ ಮಾಡಿದರೂ ಈಗಿರುವ ನೀರು ಮೇ 25ರವರೆಗೆ ಸಾಲುತ್ತದೆ.

ಅಷ್ಟರಲ್ಲಿ ಮಳೆಗಾಲ ಆರಂಭವಾಗುವ ಮುನ್ಸೂಚನೆ ಇರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳು ಬಹಳ ಕಡಿಮೆ. ಹಾಗೇನಾದರೂ ಕಾಣಿಸಿಕೊಂಡರೆ ನಗರಸಭೆ ಸಮಸ್ಯೆ ಪರಿಹರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎನ್ನುತ್ತಾರೆ ಉದಯ್‌ ಶೆಟ್ಟಿ.

ನಗರಸಭೆ ಸಿದ್ಧತೆಗಳು ಏನು ?

ಬಜೆ ಜಲಾಶಯದಿಂದ ಪ್ರತಿದಿನ 32 ಎಂಎಲ್‌ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತಿದ್ದು, 24 ಎಂಎಲ್‌ಡಿ ಉಡುಪಿ ನಗರಕ್ಕೆ, 8 ಎಂಎಲ್‌ಡಿ ಮಣಿಪಾಲದ ಕೆಎಂಸಿಗೆ ಪೂರೈಕೆಯಗುತ್ತಿದೆ. ನಲ್ಲಿ ಸಂಪರ್ಕಗಳ ಹೆಚ್ಚಳ ಹಾಗೂ ನೀರಿನ ಬಳಕೆ ಪ್ರಮಾಣ ಏರಿಕೆ ಪರಿಣಾಮ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ, ಮಣಿಪಾಲ ಸಂಸ್ಥೆಗೆ ಪೂರೈಕೆಯಾಗುತ್ತಿರುವ 8 ಎಂಎಲ್‌ಡಿ ನೀರಿನ ಪ್ರಮಾಣವನ್ನು ತಗ್ಗಿಸಲು ನಿರ್ಧರಿಸಲಾಗಿದೆ.

ಬಜೆ ಜಲಾಶಯಕ್ಕೆ ಒಳ ಹರಿವು ಸಂಪೂರ್ಣವಾಗಿ ನಿಂತುಹೋದರೆ ಸ್ವರ್ಣಾ ನದಿಯ ಪಾತ್ರದಲ್ಲಿರುವ ಶೀರೂರು, ಮಾಣೈ, ಭಂಡಾರಿ ಬೆಟ್ಟುವಿನ ಬಳಿ ಇರುವ ಬೃಹತ್ ಹೊಂಡಗಳಲ್ಲಿ ಸಂಗ್ರಹವಾಗುವ ನೀರನ್ನು ಡ್ರೆಜಿಂಗ್ ಮೂಲಕ (ಪಂಪ್‌ ಮಾಡುವ) ಜಲಾಶಯಕ್ಕೆ ಹರಿಸಿ, ಅಲ್ಲಿಂದ ನಗರಕ್ಕೆ ಪೂರೈಸಲಾಗುವುದು. ಈಗಾಗಲೇ ಡ್ರೆಜಿಂಗ್‌ ಕಾರ್ಯಕ್ಕೆ ಟೆಂಡರ್ ಸಿದ್ಧವಾಗಿದೆ ಎಂದು ಪೌರಾಯುಕ್ತ ಉದಯ್‌ ಶೆಟ್ಟಿ ಮಾಹಿತಿ ನೀಡಿದರು.

ನೀರಿನ ಸಮಸ್ಯೆಗೆ ಕಾರಣ:

ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಬಜೆ ಜಲಾಯಶ ಹೊರತುಪಡಿಸಿ ಪರ್ಯಾಯ ನೀರಿನ ಮೂಲಗಳು ಇಲ್ಲದಿರುವುದು ಸಮಸ್ಯೆಗೆ ಪ್ರಮುಖ ಕಾರಣ. ನಗರ ಶರವೇಗದಲ್ಲಿ ಬೆಳೆಯುತ್ತಿದ್ದು ನೀರಿನ ಬಳಕೆಯ ಪ್ರಮಾಣ ಹೆಚ್ಚುತ್ತಿದ್ದರೂ, ಜಲಾಶಯದಿಂದ ನೀರು ಪೂರೈಕೆ ಪ್ರಮಾಣ ಮಾತ್ರ ಹೆಚ್ಚಾಗದಿರುವುದು ಸಮಸ್ಯೆಗೆ ಕಾರಣ.

ಜಲಾಶಯದಿಂದ ನೀರೆತ್ತುವ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿದರೆ ನೀರು ಪೂರೈಕೆ ಪ್ರಮಾಣವನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಜಲಾಶಯದಿಂದ ನೀರೆತ್ತುವ ಪಂಪಿಂಗ್ ಮೋಟಾರ್‌ ಸಾಮರ್ಥ್ಯವನ್ನು ಹೆಚ್ಚಿಸಲು ನಗರಸಭೆ ನಿರ್ಧರಿಸಿದೆ ಎಂದು ಉದಯ್‌ ಶೆಟ್ಟಿ ತಿಳಿಸಿದರು.

2019ರ ಕಹಿ ನೆನಪು...

2019ರಲ್ಲಿ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿತ್ತು. ಜೂನ್‌ ಆರಂಭವಾದರೂ ಮಳೆ ಬಾರದೆ ಬಜೆ ಜಲಾಶಯ ಸಂಪೂರ್ಣ ಬರಿದಾಗಿತ್ತು. ಬೇಸಗೆಯಲ್ಲಿ ಮಾತ್ರ ಕೆಲವು ವಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಅಂದು 35 ವಾರ್ಡ್‌ಗಳಲ್ಲೂ ಕಾಣಿಸಿಕೊಂಡಿತ್ತು. ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ವರ್ಣಾ ನದಿ ಪಾತ್ರದಲ್ಲಿ ಸಂಗ್ರಹವಾಗಿದ್ದ ನೀರನ್ನು ನಿರಂತರವಾಗಿ ಪಂಪಿಂಗ್ ಮೂಡುವ ಮೂಲಕ ಜಲಾಶಯಕ್ಕೆ ಹರಿಸಿ ಪಾಳಿಯಲ್ಲಿ ವಾರ್ಡ್‌ಗಳಿಗೆ ನೀರು ಹಂಚಿಕೆ ಮಾಡಲಾಗಿತ್ತು. ನಗರದ ಹೊರವಲಯದಲ್ಲಿರುವ ಕಲ್ಲು ಕ್ವಾರಿಗಳ ಗುಂಡಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗಿತ್ತು. ಜತೆಗೆ, ನಗರಸಭೆ ಅಧೀನದಲ್ಲಿರುವ ಬಾವಿಗಳಿಂದಲೂ ನೀರು ಎತ್ತಲಾಗಿತ್ತು.

‘ನೀರು ಹಂಚಿಕೆಯಲ್ಲಿ ವಿಫಲ’

ಬಜೆ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಹಂಚಿಕೆ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಬೇಸಗೆಯ ಮಾರ್ಚ್‌ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಹಜವಾಗಿ ನೀರಿನ ಬಳಕೆ ಹೆಚ್ಚಾಗುವುದರಿಂದ ಕುಡಿಯುವ ನೀರು ಪೂರೈಕೆಗೆ ಹೆಚ್ಚು ಒತ್ತು ಕೊಡಬೇಕು. ವಾರ್ಡ್‌ಗಳಲ್ಲಿ ಸಮಸ್ಯೆ ಎದುರಾದಾರೆ ಜನರು ತಕ್ಷಣಕ್ಕೆ ನಗರಸಭಾ ಸದಸ್ಯರನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ಅಧಿಕಾರಿಗಳಿಂದ ಸಮಸ್ಯೆ ಪರಿಹಾಕ್ಕೆ ತುರ್ತು ಸ್ಪಂದನ ಸಿಗುತ್ತಿಲ್ಲ.ಬೈಲೂರು ವಾರ್ಡ್‌ನ ಕೊಳಂಬೆ, ಸಾಯಿರಾಧಾ ಎಂಪೈರ್ ಎದುರು, ಶ್ರೀನಿವಾಸ ದೇವಸ್ಥಾನ ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ಇದೆ. ಬೇಸಗೆಯಲ್ಲಿ ವಾರಾಹಿ ಪೈಪ್‌ಲೈನ್ ಕಾಮಗಾರಿಗೆ ಪರೀಕ್ಷಾರ್ಥ ನೀರು ಹರಿಸುವುದು ಬೇಡ. ಇದರಿಂದ ನೀರು ಪೂರೈಕೆ ಪ್ರಕ್ರಿಯೆಗೆ ತೊಂದರೆಯಾಗಲಿದೆ ಎಂದು ನಗರಸಭೆ ಸದಸ್ಯ ರಮೇಶ್ ಕಾಂಚನ್ ಹೇಳಿದರು.

‘ಮಣಿಪಾಲ ಸಂಸ್ಥೆಗೆ ನೀರು ಕಡಿತ’

ಉಡುಪಿ ನಗರಕ್ಕೆ ಪ್ರತಿದಿನ 24 ಎಂಎಲ್‌ಡಿ ನೀರು ಸಾಲುತ್ತಿಲ್ಲ. ಹಾಗಾಗಿ, ಮಣಿಪಾಲದ ಕೆಎಂಸಿಗೆ ಹಂಚಿಕೆಯಾಗುತ್ತಿದ್ದ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಿ ಉಡುಪಿ ನಗರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಪೈಪ್‌ಲೈಲ್‌ ಕಾಮಗಾರಿ ಮುಗಿದಿದ್ದು, 2 ದಿನಗಳಲ್ಲಿ ನಗರಕ್ಕೆ ಅಗತ್ಯ ಪ್ರಮಾಣದ ನೀರು ಪೂರೈಕೆಯಾಗಲಿದೆ. ಜಲಾಶಯದಿಂದ ನೀರೆತ್ತುವ ಪಂಪಿಂಗ್ ಸಾಮರ್ಥ್ಯವನ್ನೂ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಟೆಂಡರ್ ಸಿದ್ಧವಾಗಿದೆ. ಬೇಸಗೆಯಲ್ಲಿ ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು, ಅನ್ಯ ಉದ್ದೇಶಗಳಿಗೆ ನೀರು ಪೋಲು ಮಾಡಬಾರದು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT