ಭಾನುವಾರ, ಜುಲೈ 25, 2021
25 °C
ಆನ್‌ಲೈನ್ ಶಿಕ್ಷಣದಿಂದ ಒತ್ತಡ: ಸಚಿವ ಸುರೇಶ್ ಕುಮಾರ್‌ ಬೇಸರ

‘ಶಾಲೆ ಆರಂಭ: ಪೋಷಕರ ಅಭಿಪ್ರಾಯ ಸಂಗ್ರಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ ಆರಂಭಿಸಬೇಕು, ಹೇಗೆ ನಡೆಸಬೇಕು, ಶಾಲೆ ಆರಂಭದ ಬಗ್ಗೆ ಪೋಷಕರ ಮನಸ್ಸಿನಲ್ಲಿರುವ ಗೊಂದಗಗಳು ಏನು ಎಂಬುದನ್ನು ಅರಿಯಲು ಜೂನ್‌ 10ರಿಂದ 20ರವರೆಗೆ ಪೋಷಕರ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದರು.

ಉಡುಪಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಡಿಡಿಪಿಪಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಿಂದೆ, ಶಾಲಾ ಆರಂಭದ ದಿನಾಂಕ ಪ್ರಕಟಿಸುವವರೆಗೂ ಶುಲ್ಕ ಪಡೆಯದಂತೆ ಹಾಗೂ ದಾಖಲಾತಿ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿತ್ತು.

ಇದಕ್ಕೆ ಖಾಸಗಿ ಶಾಲೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಶಾಲಾ ಶುಲ್ಕ ಭರಿಸಲು ಶಕ್ತರಿರುವ ಪೋಷಕರು ಶುಲ್ಕ ಕಟ್ಟಬಹುದು. ಆದರೆ, ಶಾಲಾ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಲಾಗಿತ್ತು. 

ಯೂನಿಫಾರಂ, ಪಠ್ಯ ಪುಸ್ತಕ ಹಾಗೂ ಮಾಸ್ಕ್‌ಗಳನ್ನು ಮಕ್ಕಳು ಓದುವ ಶಾಲೆಯಿಂದಲೇ ಖರೀದಿಸಬೇಕು ಎಂದು ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂಬ ಆದೇಶ ಕೂಡ ಹೊರಡಿಸಲಾಗಿತ್ತು. ಈ ಎಲ್ಲ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಬೇಡ: ಎಲ್‌ಕೆಜಿ, ಯುಕೆಜಿ ಹಾಗೂ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡಲು ಕೆಲವು ಶಾಲೆಗಳು ಮುಂದಾಗಿರುವುದು ಬೇಸರದ ಸಂಗತಿ. ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳ ಮೇಲೆ ಬೀರುವ ಪರಿಣಾಮಗಳ ಕುರಿತು ನಿಮಾನ್ಸ್‌ ಸಂಸ್ಥೆ ಈಚೆಗೆ ವರದಿ ನೀಡಿದ್ದು, ಎಲ್‌ಕೆಜಿ, ಯುಕೆಜಿ ಹಾಗೂ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ನೀಡಿದೆ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಹಾಗೂ ಪೋಷಕರ ಮೇಲೆ ಒತ್ತಡ ಸೃಷ್ಟಿಯಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದರು.

ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೆ ಆನ್‌ಲೈನ್ ಶಿಕ್ಷಣ ನೀಡುವ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಆನ್‌ಲೈನ್‌ ಶಿಕ್ಷಣ ಪೋಷಕರಿಂದ ಶುಲ್ಕ ವಸೂಲಿ ಮಾಡುವ ದಂಧೆಯಾಗಬಾರದು ಎಂದರು. 

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಸಿರು ನಿಶಾನೆ: ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ ಎಂದು ಕೆಲವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ನ್ಯಾಯಾಲಯ ಪರೀಕ್ಷೆ ನಡೆಸಲು ಅನುಮತಿ ನೀಡಿ, ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ, ಮಕ್ಕಳ ಸುರಕ್ಷತೆ ಹಾಗೂ ಆತ್ಮವಿಶ್ವಾಸದ ದೃಷ್ಟಿಯಿಂದ ಜೂನ್‌ 25ರಿಂದ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಾರಿಗೆ ವ್ಯವಸ್ಥೆ: ಪರೀಕ್ಷಾ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ ಬರುವ, ಪೋಷಕರ ಜತೆ ಬರುವ, ಖಾಸಗಿ ಹಾಗೂ ಶಾಲಾ ಬಸ್‌ಗಳಲ್ಲಿ ಬರುವವರ ವಿವರ ಕಲೆಹಾಕಲಾಗುತ್ತಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಯುತ್ತಿದೆ. ಜೂನ್ 8ರಿಂದ 20ರವರೆಗೆ ಮತ್ತೊಮ್ಮೆ ಪುನರ್‌ಮನನ ತರಗತಿಗಳು ನಡೆಯಲಿವೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌‌ ಇದ್ದರು.

‘ಶಿಕ್ಷಣ ಇಲಾಖೆಯ ಋಣ ನನ್ನ ಮೇಲಿದೆ’
ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ನನ್ನ ಮೇಲೆ ಶಿಕ್ಷಣ ಇಲಾಖೆಯ ಋಣವಿದ್ದು, ಯಾರ ಒತ್ತಡ, ಲಾಬಿಗೂ ಮಣಿಯುವುದಿಲ್ಲ. ಸರ್ಕಾರಿ ಶಾಲೆಗಳ ಸಬಲೀಕರಣವೇ ಮುಖ್ಯ ಗುರಿ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರು ಆದಾಯದ ಶೇ 40ರಷ್ಟನ್ನು ಶಿಕ್ಷಣಕ್ಕೆ ವ್ಯಯಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ, ಶಿಕ್ಷಣಕ್ಕೆ ವ್ಯಯವಾಗುತ್ತಿರುವ ಹಣ ಕುಟುಂಬದ ಒಳಿತಿಗೆ ಬಳಕೆಯಾಗಲಿದೆ. ಇದಕ್ಕಾಗಿ ಸರ್ಕಾರಿ ಶಾಲೆಗಳ ಸಬಲೀಕರಣ ಬಹಳ ಮುಖ್ಯ ಎಂದು ಸುರೇಶ್ ಕುಮಾರ್ ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು