ಮಂಗಳವಾರ, ಸೆಪ್ಟೆಂಬರ್ 28, 2021
21 °C
ಖಾಸಗೀಕರಣ ವಿರೋಧಿ ವೇದಿಕೆಯಿಂದ ಪ್ರತಿಭಟನೆ

ಸಾರ್ವಜನಿಕ ರಂಗದ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿದ್ಯುತ್, ರೈಲ್ವೆ, ಸಾರಿಗೆ, ದೂರಸಂಪರ್ಕ ಕ್ಷೇತ್ರ ಸೇರಿದಂತೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಶುಕ್ರವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಖಾಸಗೀಕರಣ ವಿರೋಧಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಸಾರ್ವಜನಿಕ ರಂಗದ ಉದ್ಧಿಮೆಗಳ ಹಾಗೂ ಉದ್ಯೋಗಿಗಳನ್ನು ಕೇಂದ್ರ ಸಂಕಷ್ಟಕ್ಕೆ ದೂಡುತ್ತಿದೆ. ವಿನಾಶಕಾರಿ ಆರ್ಥಿಕ ನೀತಿಯಾದ ನವ ಉದಾರೀಕರಣ ಪ್ರಕ್ರ್ರಿಯೆಯ ಭಾಗವಾಗಿ ಸರ್ಕಾರದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವ, ಸೇವೆ ನೀಡುವ, ಮಿಲಿಟರಿಗೆ ಸಂಬಂಧಿಸಿದ ಕೈಗಾರಿಕೆಗಳ ನಿರ್ವಹಣೆ, ದುರಸ್ತಿಯಲ್ಲಿ ತೊಡಗಿರುವ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಮುಷ್ಕರದ ಹಾಗೂ ಪ್ರತಿಭಟನೆ ಮಾಡುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸರ್ಕಾರದ ನಿರ್ಧಾರ ಖಂಡನೀಯ ಎಂದರು.

ಟೆಲಿಕಾಂ ಇಲಾಖೆಯನ್ನು ಬಿಎಸ್‌ಎನ್‌ಎಲ್‌ ಕಾರ್ಪೊರೇಷನ್‌ ಮಾಡಿದಾಗ ನೌಕರರು ಕಹಿ ಅನುಭವಗಳನ್ನು ಅನುಭವಿಸಬೇಕಾಯಿತು. ಇದೀಗ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್‌ ಅಡಿಯಲ್ಲಿರುವ ಕಾರ್ಖಾನೆಗಳ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಕಾಡುತ್ತಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಚಿವಾಲಯಗಳು ಹಾಗೂ ಒಎಫ್‌ಬಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಜುಲೈ 26ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದರು.

ಸರ್ಕಾರದ ಸುಗ್ರೀವಾಜ್ಞೆಯು ಕೇವಲ ರಕ್ಷಣಾ ಇಲಾಖೆಯ ನೌಕರರಿಗೆ ಮಾತ್ರವಲ್ಲದೆ ರಕ್ಷಣಾ ಒಲಾಖೆಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಕೆ ಮಾಡುವ ಉತ್ಪಾದನಾ ಘಟಕಗಳಾದ ಎಚ್‌ಎಎಲ್‌, ಬಿಇಎಂಎಲ್‌ ಹಾಗೂ ಬಿಎಚ್‌ಎಲ್‌ ನೌಕರರಿಗೂ ಅನ್ವಯವಾಗುತ್ತದೆ. ಇದರ ವಿರುದ್ಧ ಸಂಘಟಿತವಾಗಿ ಧನಿ ಎತ್ತಬೇಕಿದೆ ಎಂದು ಪ್ರತಿಭಟನಾಕಾರರು ಕರೆ ನೀಡಿದರು.

ಸರ್ಕಾರ ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸಿ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸುವ ಬದಲು ಅಧಿಕಾರ ಬಳಸಿಕೊಂಡು ಕಾರ್ಮಿಕರ ಧನಿ ಅಡಗಿಸುತ್ತಿದೆ. ರಕ್ಷಣಾ ಉತ್ಪಾದನಾ ಕಂಪೆನಿಗಳ ಖಾಸಗೀಕರಣ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್‌ಐಸಿ ತಿದ್ದುಪಡಿ ಕಾಯ್ದೆಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಹಣಕಾಸು ಮಸೂದೆಯ ಮೂಲಕ ತಿದ್ದುಪಡಿ ಮಾಡಲಾಗಿದೆ. ಎಲ್‌ಐಸಿ ಐಪಿಒ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಸರ್ಕಾರ ಮುಂದೆ ಎಲ್‌ಐಸಿಯಲ್ಲಿ ಸರ್ಕಾರದ ಪಾಲನ್ನು ಶೇ 51ಕ್ಕೆ ಇಳಿಸಬಹುದು ಎಂಬುದು ತಿದ್ದುಪಡಿಗಳಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ವಿಮಾ ಕಾನೂನು ತಿದ್ದುಪಡಿ ಮಸೂದೆ 2015 ಮಂಡಿಸುವ ಸಂದರ್ಭದಲ್ಲಿ ಜಿಐಎನ್‌ಬಿಎ ಕಾಯ್ದೆಗೆ ತಿದ್ದುಪಡಿ ಮಾಡುವಾಗ ಕೇಂದ್ರ ಸರ್ಕಾರ ಸಾಮಾನ್ಯ ವಿಮಾ ಕಂಪೆನಿಗಳ ಶೇ 51ರಷ್ಟು ಷೇರುಪಾಲನ್ನು ಉಳಿಸಿಕೊಳ್ಳುವ ವಾಗ್ಧಾನ ನೀಡಿತ್ತು. ಜಿಐಎನ್‌ಬಿಎ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಮಾತು ತಪ್ಪಿದೆ. ಯುನೈಟೆಡ್ ಇಂಡಿಯಾ ವಿಮಾ ಸಂಸ್ಥೆಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಟೀಕಿಸಿದರು.

ಸರ್ಕಾರ ಐಡಿಬಿಐ ಬ್ಯಾಂಕನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಬ್ಯಾಂಕ್‍ನಲ್ಲಿರುವ ಷೇರುಗಳನ್ನು ಕಡಿಮೆ ಮಾಡಲು ಒತ್ತಡ ಹೇರುತ್ತಿದೆ. ಸಾರ್ವಜನಿಕ ವಲಯದ ಹೆಚ್ಚಿನ ಬ್ಯಾಂಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಖಾಸಗೀಕರಣ ವಿರೋಧಿ ವೇದಿಕೆ ಸಂಚಾಲಕರಾದ ಪ್ರಭಾಕರ ಬಿ.ಕುಂದರ್, ಸಿಐಟಿಯುನ ಕೆ.ಶಂಕರ್, ಶಶಿಧರ ಗೊಲ್ಲ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.