ಗುರುವಾರ , ಅಕ್ಟೋಬರ್ 29, 2020
19 °C
ನಡುರಾತ್ರಿಯಲ್ಲಿ ಜೀವ ರಕ್ಷಣೆಗಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ

ಉಡುಪಿ: ಮಹಾಮಳೆಗೆ ಮೈಯೊಡ್ಡಿದ ರಕ್ಷಕರು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯಲ್ಲಿ ಬೆಚ್ಚಿಬೀಳುವಂತಹ ಮಹಾಮಳೆ ಸುರಿದರೂ ಅದೃಷ್ಟವಶಾತ್ ಸಾವು ನೋವುಗಳು ಸಂಭವಿಸಲಿಲ್ಲ. ಮನೆಗಳು ಮುಳುಗಿದರೂ ಮನೆಯೊಳಗಿದ್ದ ಜೀವಗಳು ಸುರಕ್ಷಿತ ನೆಲೆ ತಲುಪಿದವು. ಇದೆಲ್ಲ ಸಾದ್ಯವಾಗಿದ್ದು ತೆರೆಯ ಹಿಂದಿನ ಹೀರೋಗಳಾದ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ.

ಎರಡು ದಿನ ಎಡೆಬಿಡದೆ ಸುರಿದ ಮಳೆಗೆ ಉಡುಪಿ ನಗರ, ಕಾಪು ಹಾಗೂ ಬ್ರಹ್ಮಾವರ ತಾಲ್ಲೂಕಿನ ಹಲವು ಬಡಾವಣೆಗಳು ಭಾಗಶಃ ಮುಳುಗಿದ್ದವು. ಶನಿವಾರ ಮಧ್ಯರಾತ್ರಿಯ ಹೊತ್ತಿಗೆ ಹಲವು ಮನೆಗಳು ಮುಳುಗುವ ಹಂತ ತಲುಪಿದ್ದವು. ಈ ಸಂದರ್ಭ ಜನರ ಜೀವ ರಕ್ಷಣೆಗೆ ಧಾವಿಸಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ.‌

ಶನಿವಾರ ಹಾಗೂ ಭಾನುವಾರ ನಡೆದ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ವಸಂತ್ ಕುಮಾರ್ ‘ಪ್ರಜಾವಾಣಿ’ ಜತೆ ಮಾತನಾಡಿದರು.

ಶನಿವಾರ 10.30ಕ್ಕೆ ಉಡುಪಿ ಅಗ್ನಿಶಾಮಕ ದಳದ ಕಚೇರಿಗೆ ಬನ್ನಂಜೆ ಹಾಗೂ ಕೃಷ್ಣಮಠದ ಆಸುಪಾಸಿನ ಪ್ರದೇಶಗಳಿಂದ ಸಾರ್ವಜನಿಕರು ರಕ್ಷಣೆ ಕೋರಿ ಕರೆ ಮಾಡಿದರು. ತಕ್ಷಣ ಉಡುಪಿ ಹಾಗೂ ಮಲ್ಪೆಯ ಅಗ್ನಿಶಾಮಕ ಸಿಬ್ಬಂದಿ ಬೋಟ್‌ಗಳೊಂದಿಗೆ ಸ್ಥಳಕ್ಕೆ ಹೋದೆವು.

ಮಳೆಯ ರೌದ್ರನರ್ತನ ಕಂಡು ಅರೆಕ್ಷಣ ಬೆಚ್ಚಿಬಿದ್ದೆವು. 25ಕ್ಕೂ ಹೆಚ್ಚು ಮನೆಗಳಲ್ಲಿ 150 ರಿಂದ 200 ಜನರು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಸ್ಥಳದಲ್ಲಿ ಎದೆಯುದ್ದ ನೀರು ನಿಂತಿತ್ತು. ಎಲ್ಲಿ ಗುಂಡಿಗಳಿವೆ, ಹಳ್ಳಗಳಿವೆ ಎಂಬ ಸಣ್ಣ ಅಂದಾಜು ಇರಲಿಲ್ಲ. ಆದರೂ ಸಿಬ್ಬಂದಿ ದೃತಿಗೆಡದೆ ಮುನ್ನುಗಿದ್ದರು. ಮಧ್ಯರಾತ್ರಿ 2.30ರವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳೀಯ ವಸತಿಗೃಹ ಮುಟ್ಟಿಸಿದೆವು.

ನಂತರ ಕಿದಿಯೂರಿನಲ್ಲಿ ಕಾರ್ಯಾಚರಣೆಗೆ ಕರೆ ಬಂತು. ತಡಮಾಡದೆ ಅಲ್ಲಿಗೆ ತಂಡ ಹೊರಟಿತು. ಅಪಾಯಕ್ಕೆ ಸಿಲುಕಿದ 100ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿತು. ಬಳಿಕ ಬನ್ನಂಜೆಯ ಶನೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 250 ರಿಂದ 300 ನಾಗರಿಕರನ್ನು ರಕ್ಷಿಸಲಾಯಿತು. 

ಭಾನುವಾರ ಬೆಳಿಗ್ಗೆ ಎಸ್‌‌ಡಿಆರ್‌ಎಫ್, ಎನ್‌ಡಿಆರ್‌ಎಫ್‌‌ ತಂಡ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿತು. ಅಷ್ಟರಲ್ಲಿ ಸುಮಾರು 700ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿತ್ತು ಎಂದು ಸಾರ್ಥಕ ಭಾವ ವ್ಯಕ್ತಪಡಿಸಿದರು ವಸಂತ್ ಕುಮಾರ್‌.

ಮನೆಯ ಮಹಡಿ ಎತ್ತರಕ್ಕೆ ಏರಿದ್ದ ನೀರು ಕಂಡು ಮನೆಯೊಳಗೆ ಮುದುಡಿ ಕುಳಿತಿದ್ದ ವೃದ್ಧರು, ಮಕ್ಕಳನ್ನು ಜೋಪಾನವಾಗಿ ಬೋಟ್‌ನಲ್ಲಿ ಕರೆತರಲಾಯಿತು. ಸ್ವಲ್ಪ ಎಚ್ಚರ ತಪ್ಪಿದ್ದರೂ ಜೀವಕ್ಕೆ ಕುತ್ತು ಸಾಧ್ಯತೆಗಳಿದ್ದವು. ಅದೃಷ್ಟವಶಾತ್ ಕಹಿ ಘಟನೆಗಳು ನಡೆಯಲಿಲ್ಲ. ಬೋಟ್‌ ಇಳಿದು ಹೋಗುವಾಗ ಸಂತ್ರಸ್ತರು ನೋವಿನಲ್ಲೂ ಮಂದಹಾಸ ಬೀರಿದ್ದು ಸಂತಸದ ಕ್ಷಣಗಳಲ್ಲೊಂದು ಎಂದರು.

ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದ ತಂಡ ಕಾಪುವಿನಲ್ಲಿ, ಮೂಡುಬಿದರೆಯ ತಂಡ ಮುಂಡ್ಕೂರಿನಲ್ಲಿ, ಭಟ್ಕಳದಿಂದ ಬಂದ ತಂಡ ಬ್ರಹ್ಮಾವರದ ಉಪ್ಪೂರಿನಲ್ಲಿ ಕಾರ್ಯ ನಿರ್ವಹಿಸಿತು. ಉಪವಿಭಾಗಾಧಿಕಾರಿ ರಾಜು ಅವರು ಕಾರ್ಯಾಚರಣೆ ನೇತೃತ್ವವಹಿಸಿದ್ದರು.

ಶನಿವಾರ ರಾತ್ರಿ 1.30ರಿಂದ ಭಾನುವಾರ ರಾತ್ರಿ 10ರವರೆಗೆ ಬಿಡುವಿಲ್ಲದೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದು, 1000 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಕಾರ್ಯಾರಣೆಯ ವಿವರ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು