ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಕಲ್ಯಾಣ ಮಂಡಳಿ ರಚಿಸಿ: ಮೀನುಗಾರರ ಸಮಾವೇಶದಲ್ಲಿ ಒತ್ತಾಯ

Last Updated 1 ಫೆಬ್ರುವರಿ 2021, 12:20 IST
ಅಕ್ಷರ ಗಾತ್ರ

ಉಡುಪಿ: ಕೇಂದ್ರ ಸರ್ಕಾರದ ಬಜೆಟ್‌ ಬಗ್ಗೆ ಮೀನುಗಾರರು, ಕಾರ್ಮಿಕರು, ಕೃಷಿಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಾರದು. ಅಂಬಾನಿ, ಅದಾನಿ ನೀಡಿದ ಬಜೆಟ್‌ ಕರಪತ್ರವನ್ನು ಸದನದಲ್ಲಿ ನಿರ್ಮಲಾ ಸೀತಾರಾಮನ್ ಓದುತ್ತಾರಷ್ಟೆ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಬನ್ನಂಜೆಯ ಶಿವಗಿರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮೀನುಗಾರರ ಹಾಗೂ ಮೀನು ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮೀನುಗಾರರ ಕಲ್ಯಾಣ ಮಂಡಳಿ ರಚನೆಯಾಗಬೇಕು. 60 ವರ್ಷದ ದಾಟಿದ ಮೀನುಗಾರರಿಗೆ ಪಿಂಚಣಿ ಸಿಗಬೇಕು ಎಂದು ಒತ್ತಾಯಿಸಿದರು.

ಸಂಘಟಿತ ಹೋರಾಟದ ಕೊರತೆಯಿಂದ ರಾಜ್ಯದಲ್ಲಿ ಮೀನುಗಾರರ ಸಮಸ್ಯೆ ನಗಣ್ಯವಾಗಿದೆ. ಹಿಂದೂಗಳಿಗೆ, ಮುಸ್ಲಿಮರಿಗೆ ಅನ್ಯಾಯವಾದರೆ ಆಯಾ ಸಮಾಜ ಬೀದಿಗಿಳಿದು ಹೋರಾಟ ಮಾಡುತ್ತದೆ. ಆದರೆ, ಮೀನುಗಾರರಿಗೆ ಅನ್ಯಾಯವಾದರೆ, ಮೀನುಗಾರರೇ ಹೋರಾಟ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ, ಮೀನುಗಾರಿಕಾ ಉದ್ಯಮದ ಮೇಲೆ ತೆರಿಗೆ, ಅವೈಜ್ಞಾನಿಕ ನಿಯಮಗಳ ಜಾರಿ ವಿರುದ್ಧ ಮೀನುಗಾರರು ಸಂಘಟಿತ ಹೋರಾಟ ಮಾಡಬೇಕು. ಜಾತಿ, ಧರ್ಮದ ಬೇಧ ಬದಿಗಿಟ್ಟು ಮೀನು ಹಿಡಿಯುವವರಿಂದ ಹಿಡಿದು ಮೀನು ಮಾರಾಟ ಮಾಡುವವರೆಗೂ ಎಲ್ಲರೂ ಪ್ರತಿಭಟನೆ ಮಾಡಬೇಕು ಎಂದು ಸಲಹೆ ನೀಡಿದರು.

ಮೀನುಗಾರಿಕಾ ಕ್ಷೇತ್ರದಿಂದ ನೂರಾರು ಕೋಟಿ ವಿದೇಶಿ ವಿನಿಮಯ ಗಳಿಸುತ್ತಿರುವ ಕೇಂದ್ರ ಸರ್ಕಾರ ಸಮುದಾಯದ ಹಿತ ಕಾಯಬೇಕು. ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್‌ ಕೊಡಬೇಕು, ಮಕ್ಕಳ ಮದುವೆಗೆ ಸಹಾಯಧನ ಸಿಗಬೇಕು, ಅಪಘಾತ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಗಳು ದೊರೆಯಬೇಕು ಎಂದು ಮನೀರ್ ಕಾಟಿಪಳ್ಳ ಒತ್ತಾಯಿಸಿದರು.

ಮೀನುಗಾರಿಕೆ ಸಂಕಷ್ಟಕ್ಕೆ ಸಿಲುಕಿದ್ದು, ಸಮುದ್ರದಲ್ಲಿ ನಿರೀಕ್ಷಿತ ಮೀನುಗಳು ಸಿಗುತ್ತಿಲ್ಲ. ಡೀಸೆಲ್‌ ದರ ಏರಿಕೆಯಿಂದ ನಷ್ಟಕ್ಕೆ ಹೆದರಿ ಮೀನುಗಾರರು ಸಮುದ್ರಕ್ಕೆ ಬೋಟ್‌ಗಳನ್ನು ಇಳಿಸುತ್ತಿಲ್ಲ. ಸರ್ಕಾರ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡದಿದ್ದರೆ ವೃತ್ತಿಯಿಂದ ವಿಮುಖರಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಮೀನುಗಾರರು ಮತ್ತು ಮೀನು ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಶಂಕರ್ ಮಾತನಾಡಿ, ಕೇಂದ್ರ ಸರ್ಕಾರ ಮೀನುಗಾರಿಕಾ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆ ತೀರಾ ಕಡಿಮೆಯಾಗಿದ್ದು, ಅಗತ್ಯ ಅನುದಾನ ಸಿಗುತ್ತಿಲ್ಲ. ಮೀನುಗಾರರಿಗೆ ವಸತಿ, ನಿವೇಶನಗಳು ಸಿಗುತ್ತಿಲ್ಲ. ಸಿಆರ್‌ಝೆಡ್ ಸಮಸ್ಯೆಯಲ್ಲಿ ಸಿಲುಕಿ ನರಳುವಂತಾಗಿದೆ. ಮೀನಿಗೆ ಸೂಕ್ತ ದರ ನಿಗದಿಯಾಗಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಇರುವಂತೆ ಮೀುನುಗಾರರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೂ ಕಿವಿಗೊಡುತ್ತಿಲ್ಲ. ದೆಹಲಿಯಲ್ಲಿ 2 ತಿಂಗಳಿನಿಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಲಕ್ಷಾಂತರ ರೈತರು ಹೋರಾಟ ಮಾಡುತ್ತಿದ್ದರೂ ಸ್ಪಂದಿಸದೆ ಬಂಡವಾಳ ಶಾಯಿಗಳ ಪರವಾಗಿ ನಿಂತಿದೆ. ರೈತರ ಹೋರಾಟಕ್ಕೆ ಮೀನುಗಾರರ ಬೆಂಬಲ ಅಗತ್ಯವಿದೆ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮೀನುಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪೂಜಾರಿ, ಸಿಐಟಿಯು ಕಾರ್ಯದರ್ಶಿ ಕವಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT