ಉಡುಪಿ: ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಮೌಲ್ಯಗಳಿಗೆ ಮೂಲ ಪ್ರೇರಣೆಯೇ ಜಾನಪದ ಎಂದು ಜನಪದ ವಿದ್ವಾಂಸ ಗಣನಾಥ ಎಕ್ಕಾರು ಅಭಿಪ್ರಾಯಪಟ್ಟರು.
ಪರ್ಯಾಯ ಪುತ್ತಿಗೆ ಕೃಷ್ಣ ಮಠ, ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮದವರು ತಮ್ಮ ಆಚರಣೆಗಳನ್ನು ಆಚರಿಸಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದ ಕರಾವಳಿಯಲ್ಲಿ ಇಂದು ಎಲ್ಲಾ ಧರ್ಮಗಳಲ್ಲಿರುವ ಕೆಲವು ಧರ್ಮಾಂಧರು , ಸೌಹಾರ್ದ ಜಾನಪದ ಸಂಸ್ಕೃತಿಗೆ ಕೊಳ್ಳಿ ಇಡುವ ಪ್ರಯತ್ನ ನಡೆಸಿದ ಕಾರಣ ಇಲ್ಲಿನ ಸೌಹಾರ್ದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ , ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಜಾನಪದ ಎಸ್. ಬಾಲಾಜಿ, ಜಿಲ್ಲಾ ಘಟಕ ಅಧ್ಯಕ್ಷ ಗಣೇಶ್ ಗಂಗೊಳ್ಳಿ, ಮಾಜಿ ಶಾಸಕ ರಘಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.