ಬೈಂದೂರು: ಹಿಂದೂ ಸಂಸ್ಕೃತಿಯ ಪ್ರತಿ ಆಚರಣೆಗೂ ಮಹತ್ವವಿದೆ. ಅದರಲ್ಲೂ ವಿಘ್ನವಿನಾಶಕ ಗಣಪತಿಯ ಆರಾಧನೆಯಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ವೆಂಕಟರಮಣ ದೇವಸ್ಥಾನ, ಯರುಕೋಣೆ ಮಠದ ಪ್ರಧಾನ ಅರ್ಚಕ ಎಂ. ಕೃಷ್ಣ ಭಟ್ ಹೇಳಿದರು.
ನಾವುಂದದ ಹಿಂದೂ ಅಭ್ಯುದಯ ಸಂಘದ ವತಿಯಿಂದ ನಡೆದ ಗಣೇಶೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಗಣಪತಿಯನ್ನು 44 ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದಲ್ಲದೆ, ಸಾಮಾಜಿಕ ಚಟುವಟಿಕೆಗಳ ಮೂಲಕ ಮನೆಮಾತಾಗಿರುವ ಹಿಂದೂ ಅಭ್ಯುದಯ ಸಂಘವು ಮಾದರಿ ಸಂಸ್ಥೆಯಾಗಿದೆ ಎಂದರು.
ಹಿಂದೂ ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಅರುಣ್ ಕುಮಾರ್ ಎನ್., ಮಸ್ಕಿಯ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ, ನಾವುಂದ ಮಹಾಗಣಪತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅಭಿಷೇಕ್, ಹಿಂದೂ ಅಭ್ಯುದಯ ಸಂಘದ ಉಪಾಧ್ಯಕ್ಷ ಪ್ರವೀಣ್ ಪೂಜಾರಿ ಇದ್ದರು.
ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ನೇರ ನೇಮಕಾತಿ ಹೊಂದಿರುವ ನಾವುಂದದ ಭರತ್ ಬಾಬು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಮೂವರಿಗೆ ಸಂಘದ ವತಿಯಿಂದ ಒಟ್ಟು ₹14 ಸಾವಿರ ವೈದ್ಯಕೀಯ ನೆರವು ನೀಡಲಾಯಿತು. ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಕೋಶಾಧಿಕಾರಿ ರತ್ನಾಕರ ಕೆ. ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಕೆ. ವಂದಿಸಿದರು. ಸಂಘದ ಕಾರ್ಯದರ್ಶಿ ಎ. ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಸಂಜೀವ ಗಾಣಿಗ, ನರಸಿಂಹ ಆಚಾರ್ಯ, ರವಿಕುಮಾರ್ ಅರೆಹೊಳೆ, ಸತ್ಯನಾರಾಯಣ ಗಾಣಿಗ, ಜಿತೇಶ್ ಕೆ.ಪೂಜಾರಿ, ಮನೋಹರ ಎನ್.ಕೆ., ಹವನ ಆರ್.ಗಾಣಿಗ, ಸತೀಶ್ ಎಸ್.ಪೂಜಾರಿ, ಗುರುರಾಜ ಶೇಟ್ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.