ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಕುಟುಂಬಗಳಿಗೆ ಆಸರೆಯಾದ ಮಲ್ಲಿಗೆ ಕೃಷಿ

ಜಿಐ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆಯ ತವರೂರು ಶಂಕರಪುರ
Published 26 ಜೂನ್ 2024, 5:57 IST
Last Updated 26 ಜೂನ್ 2024, 5:57 IST
ಅಕ್ಷರ ಗಾತ್ರ

ಶಿರ್ವ: ಜಿಐ ಮಾನ್ಯತೆ ಪಡೆದಿರುವ ಉಡುಪಿ ಮಲ್ಲಿಗೆಯ ತವರೂರು ಕಾಪು ತಾಲ್ಲೂಕಿನ ಮೂಡಬೆಟ್ಟು ಗ್ರಾಮದ ಪುಟ್ಟ ಹಳ್ಳಿ ಶಂಕರಪುರ. ಈ ಭಾಗದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಬಹುತೇಕ ಕುಟುಂಬಗಳು ಮಲ್ಲಿಗೆ ಕೃಷಿಯಿಂದಲೇ ಜೀವನಾಧಾರ ಕಂಡುಕೊಂಡಿವೆ.

ಶಂಕರಪುರ ಮಲ್ಲಿಗೆಗೆ ದೇಶ–ವಿದೇಶಗಳ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಉಡುಪಿ, ಕಾರ್ಕಳ ತಾಲ್ಲೂಕಿನಲ್ಲೂ ಮಲ್ಲಿಗೆ ಕೃಷಿಕರು ಇದ್ದಾರೆ. ಕೇರಳ ರಾಜ್ಯದಲ್ಲೂ ಉಡುಪಿ ಮಲ್ಲಿಗೆ ತಳಿ ಕೊಂಡೊಯ್ದು ಕೃಷಿ ಮಾಡಿ ಯಶ ಕಂಡವರಿದ್ದಾರೆ.

ನವೆಂಬರ್‌ನಿಂದ ಮೇ ಅಂತ್ಯದವರೆಗೆ ದೇವಸ್ಥಾನ, ದೈವಸ್ಥಾನ ಇನ್ನಿತರ ಶ್ರದ್ಧಾಕೇಂದ್ರಗಳಲ್ಲಿ ಪೂಜೆ, ಪುನಸ್ಕಾರಗಳು, ಊರಿನ ಜಾತ್ರೆಗಳ ಜೊತೆಯಲ್ಲೇ ವಿವಾಹ, ಮುಂಜಿ, ಮುಂತಾದ ಮಂಗಳ ಕಾರ್ಯಗಳ ಸೀಜನ್. ಘಮಘಮಿಸುವ ಸುವಾಸನೆ ಭರಿತ ಮಲ್ಲಿಗೆ ಹೂವಿಗೆ ಅಪಾರ ಬೇಡಿಕೆ ಇರುವ ಕಾಲ. ಉಳಿದಂತೆ ಮಳೆಗಾಲದಲ್ಲಿ ಮಲ್ಲಿಗೆಗೆ ಬೇಡಿಕೆ ಕಡಿಮೆ. ಈ ಅವಧಿಯಲ್ಲಿ ಮಲ್ಲಿಗೆ ಇಳುವರಿ ಕೂಡಾ ಅಧಿಕವಿರುತ್ತದೆ. ಆದರೆ ಪೂರಕ ಬೆಲೆ ದೊರೆಯದೆ ಕೃಷಿಕರು ನಷ್ಟ ಅನುಭವಿಸಬೇಕಿದೆ.

ಕನಿಷ್ಟ 25 ಮಲ್ಲಿಗೆ ಗಿಡಗಳನ್ನು ಬೆಳೆಸಿ, ವೈಜ್ಞಾನಿಕ ಮಾದರಿಯಲ್ಲಿ ಕೃಷಿ ಕೈಗೊಂಡಲ್ಲಿ 4 ಜನರ ಚಿಕ್ಕ ಕುಟುಂಬ ಉತ್ತಮ ಜೀವನ ನಡೆಸಲು ಸಾಧ್ಯ. 50–60 ವರ್ಷಗಳಿಂದ ಬಡ ಕುಟುಂಬಗಳು ಈ ಭಾಗದಲ್ಲಿ ಮಲ್ಲಿಗೆ ಕೃಷಿಯಿಂದಲೇ ಶ್ರಮದ ಜೀವನ ನಡೆಸಿ, ಅವರ ಮಕ್ಕಳು, ಮೊಮ್ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಮಲ್ಲಿಗೆ ಕೃಷಿಕರಿಗೆ ಹಿಂದೆ ಮಾರುಕಟ್ಟೆಯಲ್ಲಿ ವ್ಯವಸ್ಥಿತ ಧಾರಣೆ ವ್ಯವಸ್ಥೆ ಇಲ್ಲದ್ದರಿಂದ ಮಧ್ಯವರ್ತಿಗಳೇ ಹೆಚ್ಚಿನ ಲಾಭ ಪಡೆಯುತ್ತಿದ್ದು, ಕೃಷಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಪ್ರಸ್ತುತ ಶಂಕರಪುರವನ್ನು ಕೇಂದ್ರವಾಗಿಟ್ಟುಕೊಂಡು ಮಲ್ಲಿಗೆ ಕೃಷಿಕರೇ ಒಂದು ಸಂಘಟನೆ ಮಾಡಿಕೊಂಡಿದ್ದು, ಮಲ್ಲಿಗೆ ಕೃಷಿಕರಿಗೆ ಪೂರಕವಾಗಿ ವ್ಯವಸ್ಥಿತ ದರ ನಿಗದಿ ಮಾಡಿ ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರಿಂದ ಕೃಷಿಕರಿಗೂ ಅನುಕೂಲವಾಗಿದೆ.

ಬೇಡಿಕೆ ಗಮನದಲ್ಲಿಟ್ಟುಕೊಂಡು ಆಯಾ ದಿನದ ಮಾರುಕಟ್ಟೆ ದರ ಪ್ರತಿ ದಿನ 11.30ರಿಂದ 12.00ರ ಒಳಗೆ ನಿಗದಿಯಾಗುತ್ತದೆ. ಕೃಷಿಕರಿಗೆ ಪ್ರತಿ ವಾರ ತಕ್ಕ ಪ್ರತಿಫಲ ಕೈಸೇರುತ್ತದೆ. ಇದೊಂದು ಆರೋಗ್ಯಪೂರ್ಣ ವ್ಯವಸ್ಥೆ ಎಂಬುದು ಕೃಷಿಕರ ಅಂಬೋಣ.

ಕರಾವಳಿ ಭಾಗದ ಮಣ್ಣು, ಮಲ್ಲಿಗೆ ಕೃಷಿಗೆ ಪೂರಕವಾಗಿದೆ. ಕೃಷಿಗೆ ಉತ್ತಮ ಬಿಸಿಲು, ನೀರು ಅಗತ್ಯ. ಇಂದು ವ್ಯವಸ್ಥಿತ, ವೈಜ್ಞಾನಿಕ ಮಾದರಿಯಲ್ಲಿ ಮಲ್ಲಿಗೆ ಸಹಿತ ಈ ಭಾಗದಲ್ಲಿ ಬೆಳೆಯಬಹುದಾದ ಇನ್ನಿತರ ಆರ್ಥಿಕ ಬೆಳೆಗಳ ಬಗ್ಗೆ ಕೃಷಿ ಇಲಾಖೆ, ಕೃಷಿ ಸಂಘಟನೆಗಳು ಉಚಿತವಾಗಿ ಮಾಹಿತಿ, ತರಬೇತಿ ನೀಡುತ್ತಿವೆ. ಆದರೂ ಹೆಚ್ಚಿನ ಕೃಷಿಕರು ಹಿರಿಯರು ಅನುಸರಿಸಿಕೊಂಡು ಬಂದ ಹಳೆಯ ಪದ್ಧತಿಯನ್ನೇ ಮುಂದುವರಿಸುತ್ತಿರುವುದರಿಂದ ಗಿಡಗಳು ಹಾಳಾಗುತ್ತವೆ.

ಮಳೆಗಾಲದಲ್ಲಿ ಬಿಸಿಲು ಕಡಿಮೆಯಾಗಿ ನೀರು ಹೆಚ್ಚಾಗಿರುವುದು, ವಿವಿಧ ಕೀಟ, ರೋಗಾಣುಗಳ ಪ್ರಭಾವದಿಂದ ಗಿಡಗಳ ಬೇರುಗಳು ಕೊಳೆತು ಎಲೆ ಉದುರುವುದು, ಗಿಡದ ಗಂಟಿಗಳು ಸಾಯುವುದಲ್ಲದೆ ಪೂರ್ತಿ ಗಿಡವೇ ನಾಶವಾಗುತ್ತದೆ.

ಹಳೆಯ ಅವೈಜ್ಞಾನಿಕ ಕೃಷಿ ಪದ್ಧತಿಯನ್ನೇ ಮಾಡುತ್ತಿರುವ ಅನೇಕ ಕೃಷಿಕರು ಗಿಡಗಳಿಗೆ ಮಣ್ಣನ್ನು ಹಾಕಿ ಮುಚ್ಚುವುದರಿಂದ, ನೆಲ ಅಗೆಯುವುದರಿಂದ ಬೇರುಗಳಿಗೆ ಗಾಳಿ ಸಿಗದೆ ಕೊಳೆಯುತ್ತವೆ. ಮಳೆಗಾಲದಲ್ಲಿ ಗೊಬ್ಬರ, ನೆಲಕಡಲೆ ಹಿಂಡಿ, ಕೀಟನಾಶಕಗಳ ಬಳಕೆ ಮಾಡುವುದರಿಂದ ಗಿಡಗಳು ಸಂಪೂರ್ಣ ಹಾಳಾಗುತ್ತವೆ. ಎರೆಹುಳುಗಳು ನಾಶವಾಗುತ್ತವೆ. ಮಲ್ಲಿಗೆ ತೋಟಕ್ಕೆ ಇಳಿಜಾರು ನಿರ್ಮಿಸಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಅಗತ್ಯ. ಹುಲ್ಲು ಬೆಳೆಯದಂತೆ ನೆಲಕ್ಕೆ ಮಲ್ಚಿಂಗ್ ಅಳವಡಿಸುವುದರಿಂದ ನೀರು ಹರಿದುಹೋಗಲು ಅನುಕೂಲವಾಗುತ್ತದೆ.

ಈ ಭಾಗದಲ್ಲಿ ನರ್ಸರಿಗಳು ಪ್ರಾರಂಭ ಅದಂದಿನಿಂದಲೇ ಕುಂಡಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸುವ ಕ್ರಮ ಪ್ರಾರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ, ಕಾಂಕ್ರಿಟ್ ಮಾಡಿನ ಮೇಲೆಯೂ ಕುಂಡಗಳಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸಿ ಅಧಿಕ ಪ್ರಮಾಣದಲ್ಲಿ ಇಳುವರಿ ಪಡೆದ ನಿರ್ದಶನಗಳಿವೆ. ಪ್ಲಾಸ್ಟಿಕ್ ಚೀಲಗಳ ಮೂಲಕ ಮಲ್ಲಿಗೆ ಕೃಷಿಯಲ್ಲಿ ಅನುಕೂಲತೆಗಳೇ ಜಾಸ್ತಿ.

ಲಕೋಟೆಗಳು ಹಗುರ ಮತ್ತು ಅಗ್ಗ. ಕುಂಡಗಳಲ್ಲಿ ಗಿಡಗಳಿಗೆ ನೀರಿನ ಅಭಾವ ಸೃಷ್ಟಿಸಲು ಸಾಧ್ಯ, ಇದರಿಂದ ವರ್ಷದ ಎಲ್ಲಾ ಕಾಲದಲ್ಲೂ ಇಳುವರಿ ಪಡೆಯಬಹುದು. ನೆಲಕ್ಕೆ ಪ್ಲಾಸ್ಟಿಕ್ ಹೊದಿಸುವುದರಿಂದ ಕಳೆಗಳ ಸಮಸ್ಯೆ ಇಲ್ಲ. ಸ್ಥಳ ಬದಲಾವಣೆ ಸಾಧ್ಯ. ಗಿಡಗಳಿಗೆ ಹಾಕಿದ ಗೊಬ್ಬರ ಪೂರ್ತಿಯಾಗಿ ಗಿಡಗಳಿಗೆ ಸಿಗುತ್ತದೆ. ನೆಲಕ್ಕೆ ಪ್ಲಾಸ್ಟಿಕ್ ಹೊದಿಸುವುದರಿಂದ ರೋಗ, ಕೀಟಗಳು ಕಡಿಮೆ. ಗಿಡಗಳು ಎತ್ತರದಲ್ಲಿ ಇರುವುದರಿಂದ ಹೂವು ಕೊಯ್ಯಲು ಅನುಕೂಲ. ಮರಗಳ ನೆರಳು ಬೀಳುವ ಜಾಗದಲ್ಲಿದ್ದರೆ ಸ್ಥಳ ಬದಲಾವಣೆಯಿಂದ ಹೆಚ್ಚು ಇಳುವರಿ ಪಡೆಯಬಹುದು. ನೆಲಕ್ಕಿಂತ ಪ್ಲಾಸ್ಟಿಕ್ ಲಕೋಟೆ ಉತ್ತಮ.

ಅನಾನುಕೂಲ ಏನೆಂದರೆ ಪ್ರತಿದಿನ ನೀರು ಹಾಕಬೇಕು, ಇಲ್ಲದಿದ್ದರೆ ಗಿಡಗಳು ಸಾಯುತ್ತವೆ. ಆಗಾಗ ಗೊಬ್ಬರ ಹಾಕುತ್ತಿರಬೇಕು. ಹೆಚ್ಚು ಇಳುವರಿ ಬೇಕಾದರೆ ದೊಡ್ಡ ಚೀಲಗಳನ್ನು ಬಳಸಬೇಕು. ಭಾರ ಆಗಿರುವುದರಿಂದ ಸ್ಥಳಾಂತರ ಕಷ್ಟ. ವೈಜ್ಞಾನಿಕ ಮಾಹಿತಿ ಜೊತೆಗೆ ಆಸಕ್ತಿ, ಉತ್ಸಾಹ, ಸಮಯಪ್ರಜ್ಞೆ, ಬದ್ಧತೆ ಇದ್ದವರು ಪ್ಲಾಸ್ಟಿಕ್ ಚೀಲದ ಮಲ್ಲಿಗೆ ಕೃಷಿಯಿಂದ ಅಧಿಕ ಪ್ರಯೋಜನ ಪಡೆಯಬಹುದು.

ಮಳೆಗಾಲ ಸಮೀಪಿಸುತ್ತಿದ್ದಂತೆ ಮೇ, ಜೂನ್ ಆರಂಭದಲ್ಲಿ ಗಿಡಗಳ ಬುಡಕ್ಕೆ ಸುಣ್ಣದ ಜೊತೆ ಹುಡಿಗೊಬ್ಬರ, ಕಹಿಬೇವು ಹಿಂಡಿ ನಿರ್ದಿಷ್ಟ ಪ್ರಮಾಣದಲ್ಲಿ ಹಾಕುವುದು ಉತ್ತಮ. ನವೆಂಬರ್ ತಿಂಗಳಲ್ಲಿ ಗಿಡಗಳ ಪ್ರೋನಿಂಗ್, ನಂತರ ಗಿಡಗಳ ಬುಡಕ್ಕೆ ಒತ್ತಿಕೊಳ್ಳದಂತೆ ಸ್ವಲ್ಪ ಜಾಗ ಬಿಟ್ಟು ದೂರದಲ್ಲಿ ಗೊಬ್ಬರ ಹಾಕುವುದರಿಂದ ಗಿಡಗಳು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ.

ನವೆಂಬರ್‌ನಿಂದ ಫೆಬ್ರುವರಿವರೆಗೆ ದಿನಕ್ಕೆ ತಲಾ ಒಂದು ಕೊಡ ನೀರು ಹಾಕಬೇಕು. ಮಾರ್ಚ್‌ನಿಂದ ಮಳೆ ಬರುವವರೆಗೆ ಗಿಡದ ಗಾತ್ರಕ್ಕೆ ಅನುಗುಣವಾಗಿ ಸಲ್ಪ ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕಾಗುತ್ತದೆ. ಪೈಪ್ ಮೂಲಕ ನೇರವಾಗಿ ನೀರು ಬಿಡುವುದು ಒಳ್ಳೆಯದಲ್ಲ. ಟೈಮೆಟ್, ಫೆರಡಾನ್ ಉಪಯೋಗ ಮಾಡುವಂತಿಲ್ಲ ಎಂದು ವಿವರಿಸುತ್ತಾರೆ ಪ್ರಗತಿಪರ ಮಲ್ಲಿಗೆ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ.

ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳು ಹಾಳಾಗಲು ನಾವು ಮಾಡುವ ತಪ್ಪುಗಳೇ ಕಾರಣ. ಗಿಡಕ್ಕೆ ಕಾಂಪೊಸ್ಟ್ ಆಗದ ಗೊಬ್ಬರ ಹಾಕುವುದು, ಕ್ರಿಮಿನಾಶಕಗಳ ಬಳಕೆ, ಮಣ್ಣು ಅಗೆಯುವುದು, ದ್ರವರೂಪದ ಗೊಬ್ಬರ ನೀಡುವುದೇ ಆಗಿದೆ. ಇದರೊಂದಿಗೆ ಪ್ರಾಕೃತಿಕ ಕಾರಣವೂ ಇದೆ. ಅತಿಮಳೆ, ಹಲವು ದಿನ ನಿರಂತರ ಮಳೆ, ಬಿಸಿಲು ಇಲ್ಲದಿರುವುದು, ರೋಗ, ಕೀಟಗಳ ಹರಡುವಿಕೆ ಪ್ರಮುಖ ಕಾರಣ. ಇದಕ್ಕೆ ಸಮಗ್ರ, ಸರಿಯಾದ ನಿರ್ವಹಣೆ ಮಾಡುವುದೇ ಪರಿಹಾರ ಎನ್ನುತ್ತಾರೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ.

ಮಳೆಗಾಲದಲ್ಲಿ ಅಧಿಕ ಇಳುವರಿಯಾದ ಮಲ್ಲಿಗೆ ಪೇರಿಸಿಟ್ಟಿರುವುದು

ಮಳೆಗಾಲದಲ್ಲಿ ಅಧಿಕ ಇಳುವರಿಯಾದ ಮಲ್ಲಿಗೆ ಪೇರಿಸಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT