ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ವಲಸೆ ಕಾರ್ಮಿಕರನ್ನು ತವರು ಸೇರಿಸಿದ ಯುವತಿ

ತೆಲಂಗಾಣದ 49 ಮಂದಿಗೆ ಬಸ್‌ ಸೌಲಭ್ಯಕ್ಕಾಗಿ ಶ್ರಮಿಸಿದ ಮಂಬೈನ ಸಾಯಿಶ್ರೀ ಅಂಕೋಡಿ
Last Updated 20 ಮೇ 2020, 10:08 IST
ಅಕ್ಷರ ಗಾತ್ರ

ಉಡುಪಿ: ‌ಸ್ವತಃ ಲಾಕ್‌ಡೌನ್‌ನಲ್ಲಿ ಸಿಲುಕಿದ್ದ ಮುಂಬೈನ ಯುವತಿಯೊಬ್ಬಳು ತೆಲಂಗಾಣ ರಾಜ್ಯದ 49 ಮಂದಿ ವಲಸೆ ಕಾರ್ಮಿಕರನ್ನು ತವರು ಸೇರಿಸಿದ್ದಾರೆ. ನಿರಂತರ 8 ದಿನ ತೆಲಂಗಾಣ ಹಾಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳ ಬೆನ್ನುಬಿದ್ದು ಕಾರ್ಮಿಕರನ್ನು ಗೂಡು ಮುಟ್ಟಿಸಿದ್ದಾರೆ. ಯುವತಿಯ ಕಾಳಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಈಕೆ ಮುಂಬೈನ ಸಾಯಿಶ್ರೀ ಅಂಕೋಡಿ. ಮಣಿಪಾಲದ ಎಂಐಟಿ ವಿದ್ಯಾಸಂಸ್ಥೆಯಲ್ಲಿ ಮೆಡಿಕಲ್‌ ಡಿವೈಸ್‌ ಸ್ಟಾರ್ಟ್‌ ಆ್ಯಪ್‌ ಕಲಿಕೆಯಲ್ಲಿ ತೊಡಗಿದ್ದಾರೆ. ತೆಲಂಗಾಣದ ವಲಸೆ ಕಾರ್ಮಿಕರಿಗೆ ನೆರವಾದ ಬಗೆಯನ್ನು ಸಾಯಿಶ್ರೀ ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಮೇ 11ರಂದು ಮಣಿಪಾಲದಿಂದ ವಲಸೆ ಕಾರ್ಮಿಕರ ತಂಡ ತೆಲಂಗಾಣಕ್ಕೆ ನಡೆದುಕೊಂಡು ಹೊರಟಿತ್ತು. 19 ‍ಪುರುಷರು, 20 ಮಹಿಳೆಯರು, ಇವರಲ್ಲಿ ಒಬ್ಬರು ತುಂಬು ಗರ್ಭಿಣಿ, 10 ಮಕ್ಕಳು ಇದ್ದರು. ಕುತೂಹಲಕ್ಕೆ ತಡೆದು ವಿಚಾರಿಸಿದಾಗ, ಫೆ.28ರಂದು ರೈಲ್ವೆ ಕಾಮಗಾರಿಗೆ ಬಂದು, ಲಾಕ್‌ಡೌನ್‌ನಲ್ಲಿ ಸಿಲುಕಿರುವ ವಿಚಾರ ತಿಳಿಯಿತು‌.

ಗುತ್ತಿಗೆದಾರ ವಸತಿ, ಊಟದ ವ್ಯವಸ್ಥೆ ನಿಲ್ಲಿಸಿದ್ದರಿಂದ ಅವರೆಲ್ಲ ಕಾಲ್ನಡಿಗೆಯಲ್ಲಿ ಸ್ವಂತ ರಾಜ್ಯಕ್ಕೆ ಹೊರಟಿದ್ದರು. ಇದಕ್ಕಿಂತ ಮುಂಚೆ ಬಸ್‌ ಸೌಲಭ್ಯಕ್ಕಾಗಿ ಸರ್ಕಾರದ ಕಚೇರಿಗಳಿಗೆ ಅಲೆದಿದ್ದರು. ಅಧಿಕಾರಿಗಳು ಸೇವಾ ಸಿಂಧು ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿ ಎಂದು ಹೇಳಿದ್ದುಬಿಟ್ಟರೆ ಯಾವ ನೆರವೂ ನೀಡಿರಲಿಲ್ಲ.

ಅನಕ್ಷರಸ್ಥರಾದ ವಲಸೆ ಕಾರ್ಮಿಕರಿಗೆ ನೋಂದಣಿ ಸಾಧ್ಯವಾಗಿರಲಿಲ್ಲ. ಅವರ ವ್ಯಥೆ ಕೇಳಿ ಸಹಾಯಕ್ಕೆ ನಿರ್ಧರಿಸಿ ಸಾಮಾಜಿಕ ಜಾಲತಾಣವನ್ನು ‍ಪ‍ರಿಣಾಮಕಾರಿಯಾಗಿ ಬಳಸಿಕೊಂಡೆ’ ಎಂದರು ಸಾಯಿಶ್ರೀ.

’ಮಣಿಪಾಲ ಪೊಲೀಸರು ಕಾರ್ಮಿಕರಿಗೆ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದರು. ಅಲ್ಲಿಗೆ ಹೋಗಿ ಸೇವಾ ಸಿಂಧು ಆ್ಯಪ್‌ನಲ್ಲಿ ಎಲ್ಲರ ಹೆಸರು ನೋಂದಾಯಿಸಿದೆ. ಬಳಿಕ ಕಾರ್ಮಿಕರ ನೆರವಿಗೆ ಬರುವಂತೆ ಟ್ವಿಟ್ಟರ್‌ನಲ್ಲಿ ತೆಲಂಗಾಣ ಸರ್ಕಾರ, ಬಿಜೆಪಿ ಕರ್ನಾಟಕಕ್ಕೆ ಮನವಿ ಮಾಡಿದೆ. ಒಂದೆರಡು ದಿನಗಳಲ್ಲಿ ತೆಲಂಗಾಣ ಸರ್ಕಾರದ ಅಧಿಕಾರಿಗಳು ಕರೆ ಮಾಡಿ ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದರು.

ಉಡುಪಿಯ ಸಾರಿಗೆ ಇಲಾಖೆ 2 ಬಸ್‌ಗಳಿಗೆ ಪರ್ಮಿಟ್‌ ಕೊಟ್ಟು, ₹ 1.93 ಲಕ್ಷ ಬಾಡಿಗೆ ವಿಧಿಸಿತು. ಈ ವಿಚಾರವನ್ನು ತೆಲಂಗಾಣದ ಅಧಿಕಾರಿಗಳ ಗಮನಕ್ಕೆ ತಂದಾಗ ₹ 1.48 ಲಕ್ಷವನ್ನು ನೇರವಾಗಿ ಕೆಎಸ್‌ಆರ್‌ಟಿಸಿ ಖಾತೆಗೆ ಪಾವತಿಸಿದರು.ಆನ್‌ಲೈನ್‌ನಲ್ಲಿ ₹ 42,000 ಸಂಗ್ರಹಿಸಲಾಯಿತು. ಉಳಿದ ಹಣವನ್ನು ಕಾರ್ಮಿಕರೇ ಭರಿಸಿದರು. ಮಂಗಳವಾರ 2 ಬಸ್‌ಗಳಲ್ಲಿ 49 ಮಂದಿ ಕಾರ್ಮಿಕರು ತೆಲಂಗಾಣಕ್ಕೆ ತೆರಳಿದರು. ಹೋಗುವಾಗ ಬಾಲಕಿಯೊಬ್ಬಳು ಗುಲಾಬಿ ಹೂ ಕೊಟ್ಟು ಕೃತಜ್ಞತೆ ಸಲ್ಲಿಸಿದಳು’ ಎಂದರುಸಾಯಿಶ್ರೀ ಅಂಕೋಡಿ.

ಸಹಪಾಠಿಗಳಾದ ವಿನೀತ್, ಪ್ರದೀಪ್, ವಿಷ್ಣು ಹಾಗೂ ಮಣಿಪಾಲ ಪೊಲೀಸರ ಸಹಕಾರ ಮರೆಯುವಂತಿಲ್ಲ ಎಂದು ಸಾಯಿಶ್ರೀ ಧನ್ಯವಾದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT