ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬೀಚ್‌ ‌| ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿ: ಜಿಲ್ಲಾಧಿಕಾರಿ

Published 16 ನವೆಂಬರ್ 2023, 13:24 IST
Last Updated 16 ನವೆಂಬರ್ 2023, 13:24 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಗರಿಷ್ಟ ಒತ್ತು ನೀಡುವ ಮೂಲಕ ಸಾವು-ನೋವುಗಳಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲ್ಪೆ ಕಡಲ ತೀರದ ಸುಧಾರಣೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಆಧುನಿಕ ಮೂಲಸೌಕರ್ಯ ಒದಗಿಸಲು ಕಡಲ ತೀರದ ನೈಸರ್ಗಿಕ ಸೌಂದರ್ಯ ಹಾಗೂ ಪರಿಸರಕ್ಕೆ ಮಾರಕವಾಗದಂತೆ ಮಾಸ್ಟರ್ ಪ್ಲಾನ್ ತಯಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಮಾಸ್ಟರ್ ಪ್ಲಾನ್‌ ತಯಾರಿಸುವ ಮುನ್ನ ಸ್ಥಳೀಯ ನುರಿತ ಅನುಭವಿಗಳು, ಮೀನುಗಾರರ ಜತೆ ಚರ್ಚಿಸಬೇಕು. ಸಮುದ್ರದಲ್ಲಿ ಪ್ರವಾಸಿಗರ ಸುರಕ್ಷತೆ, ಭದ್ರತೆ ಹಾಗೂ ಸಮುದ್ರಗಳ ಏರಿಳಿತಗಳ ಬಗ್ಗೆ ಮಾಹಿತಿ ಪಡೆಯಬೇಕು. ಸ್ಥಳೀಯವಾಗಿ ಮೀನುಗಾರಿಕೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮಾಸ್ಟರ್ ಪ್ಲಾನ್ ರಚಿಸಬೇಕು’ ಎಂದರು.

ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಲ್ಪೆ ಬೀಚ್‌ ಹಾಗೂ ಸೇಂಟ್ ಮೇರೀಸ್ ಐ-ಲ್ಯಾಂಡ್‌ನಲ್ಲಿ ನೀರಿನ ಆಳ ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಅರಿವು ಇರುವುದಿಲ್ಲ. ಪರಿಣಾಮ ಕಳೆದ ವರ್ಷ ಹಲವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಸುರಕ್ಷತಾ ಫಲಕಗಳನ್ನು ಎಲ್ಲಡೆ ಅಳವಡಿಸಬೇಕು. ಜೀವ ರಕ್ಷಕ ಸಿಬ್ಬಂದಿಗಳಿಗೆ ಪ್ರವಾಸಿಗರ ಸುರಕ್ಷತೆ ಕುರಿತು ತರಬೇತಿ ನೀಡಬೇಕು ಎಂದರು.

ಮಲ್ಪೆ ಸೀವಾಕ್ ಹಾಗೂ ಬೀಚ್‌ನಿಂದ ಸೇಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪ್ರವಾಸಿ ಬೋಟುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವ ಹಾಗೂ ಪ್ರಯಾಣಿಕರನ್ನು ಲೈಫ್ ಜಾಕೆಟ್‌ ಧರಿಸದೆ ಕರೆದೊಯ್ಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ನಿರ್ವಹಣೆ ಗುತ್ತಿಗೆದಾರರಿಗೆ ಕೂಡಲೇ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಮುದ್ರ ತೀರದಲ್ಲಿ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿದಾಗ ಅವರ ರಕ್ಷಣೆಗೆ ಇರುವ ಜೆಟ್ ಸ್ಕೀ ಬೋಟ್‌ಗಳನ್ನು ದುರಸ್ತಿ ಮಾಡಿಸಿ  ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅವಘಡಗಳು ಸಂಭವಿಸಿದಾಗ ತಕ್ಷಣ ನೆರವಿಗೆ ಧಾವಿಸಲು ಸನ್ನದ್ಧವಾಗಿರಿಸಬೇಕು ಎಂದರು.

ಬೀಚ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಟೇಜು, ಹೋಟೆಲ್‌ಗಳಿಂದ ರಾಜಸ್ವ ಶುಲ್ಕವನ್ನು ನಿಯಮಿತವಾಗಿ ವಸೂಲಿ ಮಾಡಬೇಕು. ಗುತ್ತಿಗೆ ಅವಧಿ ಮುಗಿದಿದ್ದರೆ ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೀಡಲು ಸಮಿತಿಯ ತೀರ್ಮಾನದನ್ವಯ ಕ್ರಮ ಕೈಗೊಳ್ಳಬೇಕು. ಮಲ್ಪೆ ಬೀಚ್ ಪ್ರದೇಶದಲ್ಲಿ ಹೈಮಾಸ್ಟ್ ಕಂಬಗಳಿಗೆ ದೀಪ ಅಳವಡಿಕೆ, ದುರಸ್ತಿ ಹಾಗೂ ಹೊಸ ದಾರಿದೀಪ ಅಳವಡಿಸುವ ಕಾಮಗಾರಿ ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ, ಎಸ್‌ಪಿ ಕೆ.ಅರುಣ್, ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಲ್ಪೆ ಭಾಗದ ನಗರಸಭಾ ಸದಸ್ಯರು, ಭಜನಾ ಮಂಡಳಿಗಳ ಪ್ರತಿನಿಧಿಗಳು ಇದ್ದರು.

ಸುರಕ್ಷತಾ ಫಲಕ ಎಲ್ಲಡೆ ಅಳವಡಿಸಿ ಮೀನುಗಾರಿಕೆಗೆ ತೊಂದರೆ ಉಂಟಾಗದಂತೆ ಮಾಸ್ಟರ್ ಪ್ಲಾನ್ ರಚಿಸಬೇಕು ‌ಜೆಟ್ ಸ್ಕೀ ಬೋಟ್‌ ದುರಸ್ತಿ ಮಾಡಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಿ
‘ಶುಲ್ಕ ಹೊರೆಯಾಗದಿರಲಿ’
ಮಲ್ಪೆ ಬೀಚ್ ಪ್ರದೇಶದಲ್ಲಿ ಜಲ ಸಾಹಸ ಕ್ರೀಡಾ ಚಟುವಟಿಕೆಗಳು ಸೇರಿದಂತೆ ಮತ್ತಿತರ ಪ್ರವಾಸಿ ಚಟುವಟಿಕೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಮುನ್ನ ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು. ಪ್ರವಾಸಿಗರಿಗೆ ಆರ್ಥಿಕ ಹೊರೆಯಾಗದಂತೆ ಶುಲ್ಕ ವಿಧಿಸುವ ಷರತ್ತುಗಳೊಂದಿಗೆ ಗುತ್ತಿಗೆ ನೀಡಬೇಕು. ಮಲ್ಪೆ ಬೀಚ್‌ನ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT