ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆನ್ನಾಗಿ ಆಡುವುದಷ್ಟೇ ಗುರಿ: ಸೂರ್ಯಕುಮಾರ್ ಯಾದವ್

Published 9 ಜುಲೈ 2024, 18:34 IST
Last Updated 9 ಜುಲೈ 2024, 18:34 IST
ಅಕ್ಷರ ಗಾತ್ರ

ಪಡುಬಿದ್ರಿ (ಉಡುಪಿ ಜಿಲ್ಲೆ): ‘ಆಟದಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನ ಹರಿಸಿದ್ದೇನೆ. ದೇಶಕ್ಕೆ ಕಪ್ ತಂದುಕೊಡುವ ಸಂದರ್ಭವನ್ನು ದೇವರು ಸೃಷ್ಟಿ ಮಾಡಿದ್ದಾನೆ. ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗೋದು ನಮ್ಮ ಕೈಯಲ್ಲಿ ಇಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ಗುರಿ’ ಎಂದು ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದವರಾದ ಅವರ ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ದಕ್ಷಿಣ ಕನ್ನಡ–ಉಡುಪಿ ಪ್ರವಾಸದಲ್ಲಿರುವ ಅವರು, ಕಾಪುವಿನ ಹೊಸ ಮಾರಿಗುಡಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿಶ್ವಕಪ್‌ ಅನ್ನೋದು ಇಡೀ ಜೀವನ ಅಲ್ಲ, ಅದೊಂದು ಭಾಗ. ಜೀವನದಲ್ಲಿ ಇಂತಹ ಹಲವನ್ನು ನೋಡುತ್ತಾ ಸಾಗಬೇಕಾಗಿದೆ. ಮಂಗಳೂರಿನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೇವೆ. ಜೀವನದಲ್ಲಿ ಒಂದೇ ಬಾರಿ ಇಷ್ಟೊಂದು ಕೇಕ್‌ಗಳನ್ನು ನಾನು ಕಟ್ ಮಾಡಿಲ್ಲ, ತಿಂದಿಲ್ಲ. ಕ್ಯಾಚ್ ಹಿಡಿದು ಎಂಟು ದಿವಸ ಆಯಿತು. ವಿವಾಹ ವಾರ್ಷಿಕೋತ್ಸವದ ದಿನ ಕಳೆದು ಎಂಟು ದಿವಸ ಆಯಿತು. ಆದರೂ, ಮಂಗಳೂರಿನವರು ಇಷ್ಟು ಪ್ರೀತಿ ತೋರಿದ್ದಾರೆ’ ಎಂದರು.

ಕ್ಯಾಚ್ ಬಗ್ಗೆ ಚರ್ಚೆ ಉಂಟಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‌‘ಕ್ಯಾಚ್ ಹಿಡಿಯುವ ಸಂದರ್ಭ ನಾನು ಬೌಂಡರಿ ಲೈನ್‌ಗೆ ತಾಗಿಲ್ಲ. ಪ್ರಪಂಚದ ಎಲ್ಲಾ ಜನರನ್ನು ಖುಷಿ ಪಡಿಸಲು ಸಾಧ್ಯವಿಲ್ಲ. ದೇವರ ಆಶೀರ್ವಾದದಿಂದ ನಾನು ಆ ಸಂದರ್ಭದಲ್ಲಿ ಆ ಜಾಗದಲ್ಲಿ ಇದ್ದೆ. ಅಂತಹ ಒಂದು ಅದ್ಭುತ ಕ್ಯಾಚ್ ಹಿಡಿಯುವ ಅವಕಾಶ ನನಗೆ ಸಿಕ್ಕಿತು. ಅಭ್ಯಾಸ ಮಾಡುವಾಗ ಅಂತಹ ಕ್ಯಾಚ್‌ಗಳನ್ನು ಹಿಡಿಯಲು ನಾವು ತರಬೇತಿ ಪಡೆಯುತ್ತೇವೆ. ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದ. ಆ ಸಂದರ್ಭದಲ್ಲಿ ನಾನು ದೇವರನ್ನು ನೆನೆದುಕೊಂಡೆ’ ಎಂದರು.

‘ನಾನು ಮೈದಾನಕ್ಕೆ ಇಳಿಯುವಾಗ ಬಬುಲ್ ಗಮ್‌ ತಿನ್ನಲು ಇಷ್ಟಪಡುತ್ತೇನೆ. ಬ್ಯಾಟಿಂಗ್ ಮಾಡಲು ಮತ್ತು ಚೆನ್ನಾಗಿ ಆಡಲು ಬಬುಲ್ ಗಮ್‌ ಜಗಿಯುವುದು ನನಗೆ ಖುಷಿ ಕೊಡುತ್ತದೆ’ ಎಂದು ಹೇಳಿದರು.

₹14 ಲಕ್ಷ ಮೌಲ್ಯದ ಶಿಲಾಸ್ಥಂಭ ಸಮರ್ಪಣೆ

ಹೊಸ ಮಾರಿಗುಡಿಗೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ಅವರು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ದೇವಸ್ಥಾನದ ಕಾಮಗಾರಿಯನ್ನು ವೀಕ್ಷಿಸಿ  ₹14 ಲಕ್ಷ ಮೌಲ್ಯದ ಮುಖಮಂಟಪದ ಶಿಲಾಸ್ಥಂಭ ಸಮರ್ಪಿಸಿದರು. ಅಲ್ಲದೆ ಸ್ವರ್ಣ ಗದ್ದುಗೆಗೆ ಚಿನ್ನವನ್ನೂ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT