ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗದಿಂದ ಆರೋಗ್ಯ ಸಂಪತ್ತು: ಪುತ್ತಿಗೆ ಶ್ರೀ

ಸೌಖ್ಯವನ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’
Published 22 ಜೂನ್ 2024, 5:01 IST
Last Updated 22 ಜೂನ್ 2024, 5:01 IST
ಅಕ್ಷರ ಗಾತ್ರ

ಉಡುಪಿ: ಯಾರು ಯೋಗವನ್ನು ಅನುಸರಿಸುತ್ತಾರೊ ಅವರಿಗೆ ಆರೋಗ್ಯ ಸಂಪತ್ತು ಸೇರಿದಂತೆ ಎಲ್ಲಾ ಸಂಪತ್ತುಗಳು ಪ್ರಾಪ್ತಿಯಾಗಲಿವೆ. ಕೃಷ್ಣನೇ ಯೋಗಕ್ಕೆ ಈಶ್ವರ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ವಿಶ್ವ ಯೋಗ ದಿನದ ಅಂಗವಾಗಿ ಪರೀಕದ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಹಾಗೂ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಯೋಗ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಈ ಕಾರ್ಯಕ್ರಮವು ಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಶ್ರೀಕೃಷ್ಣನ ಸಂದೇಶವೇ ಯೋಗ. ಭಗವದ್ಗೀತೆಯೇ ಯೋಗ ಶಾಸ್ತ್ರ. ಈ ಗ್ರಂಥದ ಆದಿಯಿಂದ ಅಂತ್ಯದವರೆಗೂ ಕರ್ಮ, ಭಕ್ತಿ, ಜ್ಞಾನ ಯೋಗ ಸೇರಿದಂತೆ ಯೋಗಗಳೇ ತುಂಬಿವೆ ಎಂದು ಹೇಳಿದರು.

ಯೋಗ ಎಂದರೆ ಆಸನ ಮತ್ತು ಪ್ರಾಣಾಯಾಮ ಮಾತ್ರವಲ್ಲ. ನಮ್ಮ ಜೀವನದ ಪ್ರತಿಯೊಂದು ಕ್ರಿಯೆಗಳು ಕೂಡ ಯೋಗದ ಅಡಿಯಲ್ಲೇ ಬರುತ್ತವೆ. ಕ್ರಿಯೆಯ ಪರಿಪೂರ್ಣತೆಯೇ ಯೋಗ. ಮನೋಯೋಗವೇ ನಿಜವಾದ ಯೋಗ. ಮನಸ್ಸು ಯಾವಾಗ ನಮ್ಮ ಕೈಯಲ್ಲಿರುತ್ತದೊ ಆಗ ಯೋಗ ಪ್ರಾಪ್ತವಾಗುತ್ತದೆ. ಆದ್ದರಿಂದಲೇ ಯೋಗದ ತಿರುಳು ಮನೋಯೋಗವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ನಮ್ಮ ಮನಸ್ಸನ್ನು ನಾವೇ ವಶೀಕರಿಸಲು ಸಮರ್ಥರಾದರೆ ಆಗ ನಾವು ಯೋಗಿ‌ಗಳಾಗುತ್ತೇವೆ. ಯಾವಾಗ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೊ ಆಗ ಯೋಗ ಸಿದ್ಧಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಆಸನಗಳು, ಪ್ರಾಣಾಯಾಮಗಳು ಪ್ರಾಥಮಿಕ ಹಂತಗಳಾದರೆ ಅಂತಿಮವಾಗಿ ಭಗವಂತನನ್ನು ಹೊಂದುವುದೇ ಜೀವನದ ಗುರಿ. ಯೋಗದ ತಿರುಳನ್ನು ಅರ್ಥೈಸಿಕೊಂಡು, ಸಮತ್ವವನ್ನು ಕಾಯ್ದುಕೊಂಡರೆ ಯೋಗ ಸಾಧಕರಾಗುತ್ತೇವೆ. ಯೋಗವು ನಮ್ಮ ದೇಶದ ಬಹುದೊಡ್ಡ ಸಂಪತ್ತು ಎಂದು ತಿಳಿದು, ಮಕ್ಕಳಿಗೂ ಯೋಗ ಕಲಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು. ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಎಂದರೆ ಶ್ರೀಕೃಷ್ಣನ ಸಂದೇಶವನ್ನು ಇಡೀ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರತವು ವಿಶ್ವಗುರುವಾಗಬೇಕೆಂಬುದು ಪ್ರತಿಯೊಬ್ಬರ ಇಚ್ಛೆಯಾಗಿದೆ. ಯೋಗದ ಮೂಲಕ ನಮ್ಮ ದೇಶವು ವಿಶ್ವಕ್ಕೆ ಗುರುವಾಗಿದೆ. ಪ್ರಕೃತಿಯ ಮಡಿಲಲ್ಲಿ ಬದುಕಬೇಕಾದರೆ ಯೋಗ ಮುಖ್ಯ. ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್‌. ಚಂದ್ರಶೇಖರ್‌, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಪಾಲ್ಗೊಂಡಿದ್ದರು.

‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮದ ಸಮಾರೋಪದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು
‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮದ ಸಮಾರೋಪದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು
ಕೃಷ್ಣನೆಡೆಗೆ ಯೋಗ ನಡಿಗೆ...
‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ಯು ನಗರದ ಸರ್ವೀಸ್‌ ಬಸ್‌ ನಿಲ್ದಾಣದ ಬಳಿಯಿಂದ ಆರಂಭಗೊಂಡು ಶ್ರೀಕೃಷ್ಣ ಮಠದ ಗೀತಾ ಮಂದಿರದ ವರೆಗೆ ನಡೆಯಿತು. ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು ನಡಿಗೆ ಕಾರ್ಯಕ್ರಮ ಉದ್ಘಾಟಿಸಿದರು. ತುಂತುರು ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿಗಳು ವೈದ್ಯರು ಸೇರಿದಂತೆ ಹಲವು ಮಂದಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT