ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ನಡಿಗೆಯಲ್ಲಿ ಹಜ್: ಯಾತ್ರೆಗೆ ನಿರೀಕ್ಷೆ ಮೀರಿ ಜನರ ಬೆಂಬಲ

ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಸ್ವಾಗತ
Last Updated 12 ಜೂನ್ 2022, 6:04 IST
ಅಕ್ಷರ ಗಾತ್ರ

ಪಡುಬಿದ್ರಿ: ‘ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬುದು ನನ್ನ ಏಳು ವರ್ಷಗಳ ಕನಸಾಗಿತ್ತು. ಮುಂದಿನ ವರ್ಷದ ಹಜ್‌ಗಾಗಿ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದೇನೆ. ಯಾತ್ರೆ ಸಂದರ್ಭದಲ್ಲಿ ಜನರು ಕುತೂಹಲದಿಂದ ನನ್ನೊಂದಿಗೆ ಹೆಜ್ಜೆ ಹಾಕುತ್ತಾರೆ. ಇಷ್ಟೊಂದು ಬೆಂಬಲ ಸಿಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ’ ಎಂದು ಶಿಹಾಬ್ ಚೊಟ್ಟೂರು ಮನದ ಮಾತನ್ನು ಹಂಚಿಕೊಂಡರು.

ಜೂನ್ 2ರಂದು ಕೇರಳದ ಮಲ್ಲಪ್ಪುರಂ ಜಿಲ್ಲೆಯಿಂದ ಕಾಲ್ನಡಿಗೆಯಿಂದ 2023ರ ಹಜ್ ಯಾತ್ರೆಗೆ ಹೊರಟು, ಶನಿವಾರ ಉಡುಪಿ ಜಿಲ್ಲೆ ಪ್ರವೇಶಿಸಿ ಮೂಳೂರಿನಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ‘ಪಾಕಿಸ್ತಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮೂಲಕ ಮೆಕ್ಕಾ ತಲುಪಲು 8,640 ಕಿ.ಮೀ ಕಾಲ್ನಡಿಗೆಯಲ್ಲಿಯೇ ಹೋಗುತ್ತೇನೆ. ಕೇರಳ ಹಾಗೂ ಕರ್ನಾಟಕದಲ್ಲಿ ಜನರು ನನ್ನ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದುವರೆಗಿನ ಯಾತ್ರೆಯಲ್ಲಿ ಸಮಸ್ಯೆ ಆಗಲಿಲ್ಲ. ಅಲ್ಲಾಹನ ಇಚ್ಛೆಯಂತೆ ಯಾತ್ರೆ ಕೈಗೊಂಡಿದ್ದೇನೆ’ ಎಂದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾ ಸದಸ್ಯ ಎಸ್.ಕೆ. ಇಕ್ಬಾಲ್ ಕಟಪಾಡಿ ಮಾತನಾಡಿ, ‘100 ವರ್ಷಗಳ ಹಿಂದೆ ಈಗಿನಷ್ಟು ಸಂಪರ್ಕ ವ್ಯವಸ್ಥೆ ಇಲ್ಲದ ಸಮಯದಲ್ಲಿ ನಮ್ಮ ಹಿರಿಯರು ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಇತ್ತೀಚಿನ ಆಧುನಿಕ ವ್ಯವಸ್ಥೆ ಇರುವ ಸಂದರ್ಭದಲ್ಲಿ ಯಾರೂ ಕಾಲ್ನಡಿಗೆಯಲ್ಲಿ ಹಜ್‌ಗೆ ಯಾತ್ರೆ ಕೈಗೊಂಡಿರುವ ಮಾಹಿತಿ ಇಲ್ಲ. ಇಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳುವುದು ಸಾಹಸವಾಗಿದೆ. ಶಿಹಾಬ್ ಅವರು ಪ್ರಚಾರಕ್ಕಾಗಿ ಈ ಯಾತ್ರೆಯನ್ನು ಕೈಗೊಂಡಿಲ್ಲ. ಯಾರೂ ಟ್ರೋಲ್, ಕಮೆಂಟ್ ಮಾಡಬೇಡಿ. ಅವರನ್ನು ಹಿಂಬಾಲಿಸಿಕೊಂಡು ಅವರ ಯಾತ್ರೆಗೆ ಅಡ್ಡಿಯಾಗಬೇಡಿ’ ಎಂದು ವಿನಂತಿಸಿದರು.

ಹೆಜಮಾಡಿಯಲ್ಲಿ ಸ್ವಾಗತ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಅಲ್ಲಿಂದ 6 ಗಂಟೆಗೆ ಹೊರಟು ಸುಮಾರು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಗೆ ಬಂದ ಶಿಹಾಬ್ ಅವರನ್ನು ಕಣ್ಣಂಗಾರ್ ಜುಮ್ಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಕಿನ್ಯ ಸ್ವಾಗತಿಸಿದರು.

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನರು ಅವರನ್ನು ಕುತೂಹಲದಿಂದ ನೋಡಲು ಸಾಲುಗಟ್ಟಿ ನಿಂತಿದ್ದರು. ಯುವಕರು, ವೃದ್ಧರು, ಮಕ್ಕಳು ಅವರೊಂದಿಗೆ ಹೆಜ್ಜೆ ಹಾಕಿ ಯಾತ್ರೆಗೆ ಸಾಥ್ ನೀಡಿದರು.

ಮೂಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜುಮ್ಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಕ್ಕಿಂಜೆ ಅಭಿನಂದಿಸಿರು. ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಎಫ್ ರಫೀಕ್, ಅಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ, ಕಟಪಾಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಮುಹಿಯುದ್ದೀನ್, ಕಾರ್ಯದರ್ಶಿ ಎಸ್.ಆರ್ ರಫೀಕ್, ಕೋಶಾಧಿಕಾರಿ ಎನ್.ಎಸ್. ಅಬ್ದುಲ್ ರಹ್ಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT