ಭಾನುವಾರ, ಜುಲೈ 25, 2021
21 °C
ಕಾಪು: ಮೂರು ಆಂಬುಲೆನ್ಸ್ ಸೇವೆ ಲೋಕಾರ್ಪಣೆ

ನರ್ಸಿಂಗ್ ಸಿಬ್ಬಂದಿ ಹೆಚ್ಚಳಕ್ಕೆ ತೀರ್ಮಾನ; ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಪು(ಪಡುಬಿದ್ರಿ): ‘ರಾಜ್ಯದಲ್ಲಿ 2,000 ವೈದ್ಯರನ್ನು ವರ್ಷದ ಮಟ್ಟಿಗೆ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯ ಸೇವೆ ಒಡಂಬಡಿಕೆಯೊಂದಿಗೆ ಸೇವೆಗೆ ನಿಯೋಜಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಕಾಪು ಕ್ಷೇತ್ರಕ್ಕೆ ಒದಗಿಸಿದ ಮೂರು ಆಂಬುಲೆನ್ಸ್‌ಗಳನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ 1,730 ಪೂರ್ಣಕಾಲಿಕ ವೈದ್ಯರನ್ನು ನೇಮಿಸಲಾಗಿದ್ದು, ನರ್ಸಿಂಗ್ ಸಿಬ್ಬಂದಿ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.

ಮಾದರಿ ಆರೋಗ್ಯ ಕೇಂದ್ರ: ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ರೂಪುಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 2 ಮಾದರಿ ಆರೋಗ್ಯ ಕೇಂದ್ರ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

 ರಾಜ್ಯದಲ್ಲಿ ಸೇವೆ ನೀಡುತ್ತಿರುವ 108 ಅಂಬುಲೆನ್ಸ್‌ಗಳ ಸೇವೆ ಉತ್ಕೃರ್ಷ ಮಟ್ಟಕ್ಕೆ ಏರಿಸಲಾಗುತ್ತಿದೆ. ಪ್ರಸ್ತುತ 7,00 ಆಂಬುಲೆನ್ಸ್‌ಗಳಿದ್ದು, ಮುಂದೆ 1,500 ಸಂಖ್ಯೆಗೆ ಏರಿಸಲಾಗುವುದು. ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆ ಖಂಡನೀಯ, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳಾದಲ್ಲಿ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು. ಹಲ್ಲೆ ಆರೋಪಿಗಳಿಗೆ ಗರಿಷ್ಠ ಏಳು ವರ್ಷ ಕಠಿಣ ಶಿಕ್ಷೆಗೊಳಪಡಿಸಲು ಅವಕಾಶಗಳಿದ್ದು, ಈ ಬಗ್ಗೆ ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕಾಪುವಿನಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯನ್ನು ಆರಂಭಿಸಲು ವಿಶೇಷ ಒತ್ತು ನೀಡುವಂತೆ, ಲಸಿಕೆ ಲಭ್ಯತೆ ಕೊರತೆಯನ್ನು ನೀಗಿಸುವಂತೆ ಮತ್ತು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಪೂರ್ಣಕಾಲಿಕ ವೈದ್ಯರನ್ನಾಗಿ ನಿಯೋಜಿಸುವಂತೆ ಸಚಿವ ಸುಧಾಕರ್ ಅವರಲ್ಲಿ ಮನವಿ ಮಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್, ವಿಶೇಷ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು