ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು: ವಾಹನ ಸವಾರರಿಗೆ ದಟ್ಟಣೆ ಕಿರಿಕಿರಿ

ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು: ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವ ವಾಹನಗಳು
Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಟ್ಟುನಿಂತ ಟ್ರಾಫಿಕ್ ಸಿಗ್ನಲ್‌ಗಳು, ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿರುವ ವಾಹನಗಳು ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಅಗತ್ಯ ಸಿಬ್ಬಂದಿಯ ಕೊರತೆಯಿಂದಾಗಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯ ಉಡುಪಿ–ಮಣಿಪಾಲ ಮುಖ್ಯರಸ್ತೆಯಲ್ಲಿರುವ ಇಂದ್ರಾಳಿ ಬಳಿ ಹೆದ್ದಾರಿ ಕಾಮಗಾರಿ ಆರಂಭವಾಗಿರುವುದರಿಂದ ವಿಪರೀತ ವಾಹನಗಳ ದಟ್ಟಣೆ ಉಂಟಾಗಿದೆ. ಸಂಜೆಯ ಹೊತ್ತು ಕರಾವಳಿ ಜಂಕ್ಷನ್‌ನಿಂದ ಮಣಿಪಾಲ ತಲುಪಲು (6 ಕಿ.ಮೀ) 1 ತಾಸು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹಾಗೆಯೇ, ಮಲ್ಪೆ ಬೀಚ್‌ನಿಂದ ಕರಾವಳಿ ಜಂಕ್ಷನ್‌ (4 ಕಿ.ಮೀ) ತಲುಪಬೇಕಾದರೂ ತಾಸುಗಟ್ಟಲೆ ಸಮಯ ಬೇಕು. ಒಂದೆಡೆ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದ ಮಲ್ಪೆ ರಸ್ತೆ ಸವಾರರನ್ನು ಹೈರಾಣಾಗಿಸಿದರೆ, ಸಂಚಾರ ವ್ಯವಸ್ಥೆ ಹದಗೆಟ್ಟಿರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.

ದಟ್ಟಣೆ ಹೆಚ್ಚಲು ಕಾರಣ

ದಸರಾ ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಪ್ರಸಿದ್ಧ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಲ್ಲಿ ವಾಹನಗಳು ಗಿಜಿಗಿಡುತ್ತಿವೆ. ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ ಬೀಚ್‌, ಸಂಪರ್ಕಿಸುವ ರಸ್ತೆಗಳು ಹಾಗೂ ಕೃಷ್ಣಮಠ, ಕೊಲ್ಲೂರು ದೇವಸ್ಥಾನ, ಕಾಪು ಮಾರಿಗುಡಿ, ಉಚ್ಚಿಲ ಮಹಾಲಕ್ಷ್ಮಿ, ಮಂದಾರ್ತಿ, ಹಟ್ಟಿಯಂಗಡಿ, ಕುಂಭಾಶಿ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ದಟ್ಟಣೆ ಹೇಳತೀರದು.

ಪ್ರವಾಸಿ ತಾಣಗಳಿಗೆ ತೆರಳಲು ಸರಿಯಾದ ಮಾರ್ಗಸೂಚಿ ಫಲಕಗಳು ಇಲ್ಲದೆ ಪ್ರವಾಸಿ ವಾಹನಗಳು ಹೆದ್ದಾರಿ ಬದಲಾಗಿ ನಗರದ ರಸ್ತೆಗಿಳಿಯುತ್ತಿರುವುದು ಸಮಸ್ಯೆ ಹೆಚ್ಚಾಗಲು ಕಾರಣ. ಕೃಷ್ಣಮಠಕ್ಕೆ ಬರುವ ಪ್ರವಾಸಿಗರ ವಾಹನಗಳು ನಗರವನ್ನೆಲ್ಲ ಸುತ್ತಿ ಬಳಸಿ ಮಠಕ್ಕೆ ಸಂಪರ್ಕಿಸುವ ಅತ್ಯಂತ ಕಿರಿದಾದ ರಸ್ತೆಗಳಲ್ಲಿ ಸಿಲುಕುತ್ತಿದ್ದು ಗಂಟೆಗಟ್ಟಲೆ ವಾಹನಗಳು ಜಮಾವಣೆಯಾಗುತ್ತಿವೆ.

ಉಡುಪಿಯ ಕಲ್ಸಂಕ ವೃತ್ತ ಸಮಸ್ಯೆಯ ಮೂಲವಾಗಿದ್ದು ಈ ಭಾಗದಲ್ಲಿ ಟ್ರಾಫಿಕ್ ವ್ಯವಸ್ಥೆ ಬಲಗೊಂಡರೆ ನಗರದ ಅರ್ಧ ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ಸಿಕ್ಕಂತೆ. ಅಂಬಾಗಿಲಿನಿಂದ ಬರುವ, ಮಲ್ಪೆ ಬೀಚ್‌ನಿಂದ ಉಡುಪಿ ಮಣಿಪಾಲದ ಕಡೆಗೆ ಬರುವ, ಮಣಿಪಾಲದಿಂದ ಉಡುಪಿ ಹಾಗೂ ಮಲ್ಪೆ ಬೀಚ್‌ಗೆ ಹೋಗುವ ಹಾಗೂ ಕೃಷ್ಣಮಠದಿಂದ ಹೊರಬರುವ ಎಲ್ಲ ವಾಹನಗಳು ಕಲ್ಸಂಕ ವೃತ್ತ ದಾಟಿಯೇ ಹೋಗುವುದರಿಂದ ಇಲ್ಲಿ ವಿಪರೀತ ವಾಹನಗಳ ದಟ್ಟಣೆ ಇರುತ್ತದೆ.

ಈ ಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್‌ ಕೆಟ್ಟುನಿಂತಿರುವ ಕಾರಣ ವಾಹನಗಳು ಅಡ್ಡಾದಿಡ್ಡಿಯಾಗಿ ನುಗ್ಗುತ್ತಿವೆ. ಬೆರಳೆಣಿಕೆ ಸಂಚಾರ ಸಿಬ್ಬಂದಿಯಿಂದ ದಟ್ಟಣೆ ನಿಯಂತ್ರಿಸಲು ಸಾದ್ಯವಾಗುತ್ತಿಲ್ಲ. ಕೆಲವು ವಾಹನಗಳು ಯೂ ಟರ್ನ್‌ ತೆಗೆದುಕೊಳ್ಳುವಾಗ ಸೃಷ್ಟಿಸುವ ಅವಾಂತರಗಳಿಂದ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಕುಂದಾಪುರದ ಸ್ಥಿತಿ

ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕುಂದಾಪುರ ತಾಲ್ಲೂಕಿನಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾದ ಬಳಿಕ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಶಾಸ್ತ್ರಿ ಸರ್ಕಲ್‌ನಿಂದ‌ ಹೊಸ ಬಸ್ಸು ನಿಲ್ದಾಣದವರೆಗಿನ ಎರಡು ಬದಿಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕೊರತೆಯಿಂದ ಸಮಸ್ಯೆ ಬೃಹದಾಕಾರವಾಗಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳು, ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಮೀಸಲಾದ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು,ಪಾದಚಾರಿ ಮಾರ್ಗ ಜಾಹೀರಾತು ಹಾಗೂ ಖಾಸಗಿ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ಸಂಚಾರ ಸಮಸ್ಯೆ ಹೆಚ್ಚಾಗಲು ಪರೋಕ್ಷ ಕಾರಣವಾಗಿದೆ.

ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇರುವುದರಿಂದ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ವಾಹನಗಳ ಸಂಚಾರ ದುಸ್ತರವಾಗಿದ್ದು, ಈ ವೇಳೆ ಹೆಚ್ಚುವರಿ ಸಂಚಾರ ಸಿಬ್ಬಂದಿ ನಿಯೋಜಿಸುವ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿಯಾದರೂ ಬಗೆಹರಿಸಬಹುದು.

ಕಾರ್ಕಳ ವರದಿ

ಕಾರ್ಕಳ ಬಸ್ ನಿಲ್ದಾಣದಲ್ಲಿ ಯದ್ವಾ ತದ್ವಾ ಬಸ್‌ಗಳ ಓಡಾಟದಿಂದ ದಟ್ಟಣೆ ಹೆಚ್ಚಾಗಿದೆ. ಬಸ್‌ಗಳ ಆಗಮನ ಹಾಗೂ ನಿರ್ಗಮನಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಇರುವುದು ಸಮಸ್ಯೆಗೆ ಕಾರಣ. ಜನರು ಎಚ್ಚರಿಕೆಯಿಂದ ಬಸ್ ಇಳಿದು ಸಾಗಬೇಕಾಗಿದೆ. ಹತ್ತುವಾಗ, ಇಳಿಯುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಬಸ್‌ ಚಕ್ರದ ಅಡಿಗೆ ಸಿಲುಕಬೇಕಾಗುತ್ತದೆ.

ಬಸ್ ನಿಲ್ದಾಣದಲ್ಲಿನ ಕಿರಿಕಿರಿಗೆ ಜನ ಅಸಹಾಯಕರಾಗಿದ್ದಾರೆ. ಕಾರಣ, ಬಸ್ ನಿಲ್ದಾಣದ ನಿವೇಶನ ಪುರಸಭೆ ಮಾಲೀಕತ್ವದಲ್ಲಿ ಇಲ್ಲ. ಪರ್ಯಾಯವಾಗಿ ಬಂಡಿಮಠ ಬಳಿ ₹ 2ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಹೆಸರಿಗಷ್ಟೆ ಇದ್ದು, ಕೇವಲ ಸರ್ಕಾರಿ ಬಸ್‌ಗಳ ನಿಲುಗಡೆ ತಾಣವಾಗಿ ಬಳಕೆಯಾಗುತ್ತಿದೆ. ಪ್ರಮುಖ ಬಸ್ ನಿಲ್ದಾಣವಾಗಿ ಬಳಸಲು ಹಿತಾಸಕ್ತಿ ಲಾಬಿ ಬಿಡುತ್ತಿಲ್ಲ

ಹೆದ್ದಾರಿ ಗೋಳು

ಕಾಪು ತಾಲ್ಲೂಕಿನ ಕಾಪು ಪೇಟೆ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಲ್ಲಿ ವಾಹನ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಪಡುಬಿದ್ರಿಯಲ್ಲಿ ತೊಡಕು ಉಂಟಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂದಿಸುವ ಜಂಕ್ಷನ್‌ನಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಟ್ರಾಫಿಕ್ ಪೊಲೀಸರ ನಿಯೋಜನೆ ಇದ್ದರು ಪರಿಸ್ಥಿತಿ ನಿಭಾಯಿಸಲು ಸಾದ್ಯವಾಗುತ್ತಿಲ್ಲ. ಪಡುಬಿದ್ರಿಯ ಕಿರಿದಾದ ಸರ್ವೀಸ್ ರಸ್ತೆಯಲ್ಲಿಯೇ ಬಸ್‌ಗಳ ತಂಗುದಾಣ ನಿರ್ಮಾಣದಿಂದ ದಟ್ಟಣೆ ಹೆಚ್ಚಾಗಿದೆ.

ರಸ್ತೆ ವಿಸ್ತರಣೆ ಆಗಬೇಕು

ಉಡುಪಿ, ಧರ್ಮಸ್ಥಳ, ಹೆಬ್ರಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳವಾಗಿರುವ ಹಿರಿಯಡಕದಲ್ಲೂ ಟ್ರಾಫಿಕ್ ಸಮಸ್ಯೆ ಇದೆ. ಇಲ್ಲಿನ ವೀರಭದ್ರ ದೇವಸ್ಥಾನದ ಮುಂಭಾಗ ಬೆಳಿಗ್ಗೆ, ಸಂಜೆ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಜತೆಗೆ ಪೇಟೆಯ‌ ರಸ್ತೆ ತೀರಾ ಇಕ್ಕಟ್ಟಾಗಿರುವುದರಿಂದ ಉಡುಪಿ, ಧರ್ಮಸ್ಥಳ, ಹೆಬ್ರಿ ಕಡೆಯಿಂದ ಬರುವ ವಾಹನಗಳು ಒಂದೆಡೆ ಜಮಾವಣೆಯಾಗಿ ಕಿರಿಕಿರಿ ಉಂಟಾಗುತ್ತಿದೆ.

ಪಾದಚಾರಿ ಮಾರ್ಗ ಸಮಸ್ಯೆ

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನಲ್ಲಿ ಬಸ್‌ ನಿಲ್ದಾಣ, ಪಾದಾಚಾರಿ‌ ಮಾರ್ಗ ಇಲ್ಲದಿರುವುದರಿಂದ ವಾಹನ‌ ಸವಾರರು ಮತ್ತು‌ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಬಾರ್ಕೂರು ಪೇಟೆಯಲ್ಲಿ ಹಾದುಹೋಗುವ ಇಕ್ಕಟ್ಟಾದ ರಸ್ತೆಯಲ್ಲಿ ಎರಡೂ ಕಡೆಯಿಂದ ವಾಹನಗಳು ಬಂದು ಸಮಸ್ಯೆ ಸೃಷ್ಟಿಯಾಗುತ್ತದೆ.

ಬೈಂದೂರು ತಾಲೂಕಿನ ಯಡ್ತರೆಯ ಮಂಜಯ್ಯ ಶೆಟ್ಟಿ ವೃತ್ತದಲ್ಲಿ ಕೊಲ್ಲೂರಿಗೆ ಹೋಗಿ ಬರುವ ವಾಹನಗಳು ಹೆದ್ದಾರಿ 66 ರಲ್ಲಿ ಸಾಗಲು ಹರಸಾಹಸ ಪಡಬೇಕಾಗಿದೆ. ಬೈಂದೂರಿನಿಂದ ರಾಣಿಬೆನ್ನೂರು ಸಂಪರ್ಕಿಸುವ ಹೆದ್ದಾರಿ 66 ಸಿ ಯಡ್ತರೆಯಲ್ಲಿ ಹೆದ್ದಾರಿ 66ಕ್ಕೆ ಸಂಧಿಸುತ್ತದೆ. ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಅಪಘಾತ ವಲಯವಾಗಿ ಪರಿಣಮಿಸಿದೆ.

ಬೈಂದೂರು ಸರ್ಕಾರಿ ಬಸ್ ನಿಲ್ದಾಣ ಬಳಿಯ ಯೋಜನಾ ನಗರ ಕ್ರಾಸ್, ಮೂಕಾಂಬಿಕಾ ರೋಡ್ ರೈಲು ನಿಲ್ದಾಣಗೆ ಹೋಗುವ ವಾಹನಗಳು, ತಹಶೀಲ್ದಾರ್‌ ಕಚೇರಿ, ಶಾಸಕರ ಕಚೇರಿ ಬಳಿ ಸಂಚಾರ ದಟ್ಟಣೆ ಹೆಚ್ಚಿದೆ.

‘ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಇತ್ಯರ್ಥ’

ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ಬಳಿ ಹೆದ್ದಾರಿ ಕಾಮಗಾರಿಯ ಕಾರಣದಿಂದ ಹಾಗೂ ದಸರಾ ರಜೆಗೆ ಪ್ರವಾಸಿಗರು ಜಿಲ್ಲೆಗೆ ಹೆಚ್ಚಾಗಿ ಬರುತ್ತಿರುವ ಕಾರಣದಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ. ಭಾರಿ ವಾಹನಗಳು ನಗರ ಪ್ರವೇಶಿಸುವ ಬದಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚಿಸಿರುವ ಬದಲಿ ಮಾರ್ಗಗಳನ್ನು ಬಳಸಿದರೆ ದಟ್ಟಣೆ ಕಡಿಮೆಯಾಗಲಿದೆ. ಇಂದ್ರಾಳಿ ಬಳಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕು.

–ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

------------

ಪೂರಕ ಮಾಹಿತಿ: ಅಬ್ದುಲ್ ಹಮೀದ್, ಕೆ.ಸಿ.ರಾಜೇಶ್‌, ವಾಸುದೇವ್ ಭಟ್‌, ಶೇಷಗಿರಿ ಭಟ್‌, ಡಾ.ಸುಬ್ರಹ್ಮಣ್ಯ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT