ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಹಿಜಾಬ್ ವಿದ್ಯಾರ್ಥಿನಿಯ ಪೋಷಕರ ಹೋಟೆಲ್ ಮೇಲೆ ದಾಳಿ, ಸಹೋದರನ ಮೇಲೆ ಹಲ್ಲೆ

Last Updated 22 ಫೆಬ್ರುವರಿ 2022, 12:48 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಅವರ ಹೋಟೆಲ್ ಮೇಲೆ ಸೋಮವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ವಿದ್ಯಾರ್ಥಿನಿಯ ಸಹೋದರ ಸೈಫ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ರಾತ್ರಿ 9ರ ಸುಮಾರಿಗೆ 50ಕ್ಕೂ ಹೆಚ್ಚು ಜನರಿದ್ದ ಗುಂಪು ಮಲ್ಪೆಯ ಬಿಸ್ಮಿಲ್ಲಾ ಹೋಟೆಲ್‌ಗೆ ನುಗ್ಗಿ ಕಿಟಕಿಯ ಗಾಜುಗಳನ್ನು ಪುಡಿ ಮಾಡಿ, ಸೈಫ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ನಗರದ ಹೈಟೆಕ್ ಆಸ್ಪತ್ರೆಯಲ್ಲಿ ಸೈಫ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಹಾಗೂ ಹಲ್ಲೆ ಘಟನೆಯ ಹಿಂದೆ ಶಾಸಕ ರಘುಪತಿ ಭಟ್ ಅವರ ಕೈವಾಡದ ಶಂಕೆಯಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಬೇಕು ಎಂದು ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಅಕ್ರಂ ಅಸೀಲ್ ಗಂಭೀರ ಆರೋಪ ಮಾಡಿದ್ದಾರೆ.

ವಿದ್ಯಾರ್ಥಿನಿ ಟ್ವೀಟ್‌

'ಹಿಜಾಬ್‌ಗಾಗಿ ಹೋರಾಟ ನಡೆಸಿದ್ದಕ್ಕೆ ಕಿಡಿಗೇಡಿಗಳು ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್ ಧ್ವಂಸಗೊಳಿಸಿದ್ದಾರೆ. ಹಕ್ಕಿಗಾಗಿ ಧನಿ ಎತ್ತುವುದು ತಪ್ಪೇ ? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಹಿಜಾಬ್‌ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಟ್ವೀಟ್ ಮಾಡಿದ್ದಾರೆ. ಹಿಜಾಬ್‌ಗಾಗಿ ಹೋರಾಟ ನಡಸುತ್ತಿರುವ ಹಲವು ವಿದ್ಯಾರ್ಥಿನಿಯರು ಶಿಫಾಗೆ ಬೆಂಬಲ ಸೂಚಿಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ

ಸಂಘ ಪರಿವಾರದ ಗೂಂಡಾಗಳು ವಿದ್ಯಾರ್ಥಿನಿ ಹಾಜ್ರ ಶಿಫಾ ಪೋಷಕರ ಹೋಟೆಲ್‌ ಮೇಲೆ ದಾಳಿ ನಡೆಸಿ, ಶಿಫಾಳ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಬೇಕು, ದಾಳಿಯ ಹಿಂದಿರುವ ಬಿಜೆಪಿ ನಾಯಕರನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.

ವೈಯಕ್ತಿಕ ದ್ವೇಷದ ದಾಳಿ

ಹೋಟೆಲ್ ಮೇಲಿನ ದಾಳಿಗೆ ಹಾಗೂ ಸೈಫ್ ಎಂಬಾತನ ಮೇಲೆ ನಡೆದ ಹಲ್ಲೆಗೆ ವೈಯಕ್ತಿಕ ದ್ವೇಷ ಕಾರಣ ಇರಬಹುದು. ಹಿಜಾಬ್ ವಿಚಾರವಾಗಿ ನಡೆದ ದಾಳಿಯಲ್ಲ. ಸಧ್ಯ ಅಧಿವೇಶನದಲ್ಲಿ ಭಾಗವಹಿಸಿದ್ದು, ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಶಾಸಕ ಕೆ.ರಘುಪತಿ ಭಟ್‌ ‘ಪತ್ರಿಕೆ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT