ಶನಿವಾರ, ಜುಲೈ 2, 2022
20 °C

ದ್ವಿತೀಯ ಪಿಯು ಪರೀಕ್ಷೆ- ಹಿಜಾಬ್‌: ಮೂವರು ವಿದ್ಯಾರ್ಥಿನಿಯರು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಕಾರಣಕ್ಕೆ ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರಾದ ಅಲಿಯಾ ಅಸಾದಿ ಹಾಗೂ ರೇಶಮ್ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯದೆ ಮನೆಗೆ ವಾಪಸಾದರು.

ಚಿಕ್ಕಬಳ್ಳಾಪುರದ ಸರ್‌ ಎಂ.ವಿಶ್ವೇಶ್ವರಯ್ಯ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಿಂದಲೂ, ಹಿಜಾಬ್ ತೆರೆಯಲು ನಿರಾಕರಿಸಿದ ವಿದ್ಯಾರ್ಥಿನಿ ನೂರ್ ಮಿಸ್ಬಾ ಕ್ವಾನೈನ್ ಅವರು ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದಾರೆ.

ಉಡುಪಿಯಲ್ಲಿ ತಹಶೀಲ್ದಾರ್ ಅರ್ಚನಾ ಭಟ್‌ ಮತ್ತು ಕಾಲೇಜು ಪ್ರಾಂಶುಪಾಲರು ಮನವೊಲಿಸಲು ಯತ್ನಿಸಿದರೂ  ವಿದ್ಯಾರ್ಥಿನಿಯರು ಒಪ್ಪ ಲಿಲ್ಲ. ಕೊಠಡಿಗೆ ತೆರಳುವ ಗಡುವು ಮುಗಿದಿದ್ದರಿಂದ ಹೊರಗೆ ಕಳಿಸ ಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಲು ವಿದ್ಯಾರ್ಥಿಗಳು ನಿರಾಕರಿಸಿದರು.

ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವವರಲ್ಲಿ ಇಬ್ಬರು ವಾಣಿಜ್ಯ ವಿಭಾಗ, ನಾಲ್ವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು. ಹಿಂದೆ ಆಂತರಿಕ ಪರೀಕ್ಷೆಗಳಿಗೆ ಎಲ್ಲರೂ ಗೈರಾಗಿದ್ದರು. ಈಗ ವಾರ್ಷಿಕ ಪರೀಕ್ಷೆಯ ಮೊದಲ ದಿನವೇ ಅಲಿಯಾ ಅಸಾದಿ, ರೇಶಮ್ ಗೈರಾಗಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಗೊಂದಲವಿಲ್ಲ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಹಿಜಾಬ್‌, ಬುರ್ಖಾ ಧರಿಸಿಕೊಂಡು ಬಂದಿದ್ದ ವರೂ ಅದನ್ನು ತೆಗೆದು ಪರೀಕ್ಷೆಗೆ ಹಾಜರಾದರು.

ಮಂಗಳೂರಿನ ರಥಬೀದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ವಿದ್ಯಾರ್ಥಿನಿಯೊಬ್ಬರು ರಸ್ತೆ ಬದಿ ಯಲ್ಲಿಯೇ ಬುರ್ಖಾ ತೆಗೆಯುತ್ತಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿಯರಿಗೆ ಬುರ್ಖಾ, ಹಿಜಾಬ್‌ ತೆಗೆಯಲು ಕೊಠಡಿ ವ್ಯವಸ್ಥೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಶಾಸಕ ರಘುಪತಿ ಭಟ್ ಖಂಡನೆ: ‘ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿನಿಯರು ಹೈಕೋರ್ಟ್‌ಗಿಂತ ದೊಡ್ಡವರಲ್ಲ. ನ್ಯಾಯಾಂಗ ನಿಂದನೆ ಆರೋಪದಡಿ ವಿದ್ಯಾರ್ಥಿನಿಯರ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸಬೇಕು’ ಎಂದು ಶಾಸಕ ರಘುಪತಿ ಭಟ್‌ ಒತ್ತಾಯಿಸಿದರು.

ಹಿಜಾಬ್‌: ಉಪನ್ಯಾಸಕಿಗೆ ನಿರ್ಬಂಧ

ಮಡಿಕೇರಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಲು ಹಿಜಾಬ್‌ ಧರಿಸಿ ಬಂದಿದ್ದ ನಗರದ ಮಡಿಕೇರಿಯ ರಾಜೇಶ್ವರಿ ಕಾಲೇಜಿನ ಉಪನ್ಯಾಸಕಿ ಅನಿಷತ್‌ ಅವರನ್ನು ಪರೀಕ್ಷಾ ಕೇಂದ್ರದೊಳಕ್ಕೆ ಬಿಡದೆ ವಾಪಸು ಕಳಿಸಲಾಯಿತು.

ಕಿರಿಯ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅವರು, ‘ಭಯ, ಆತಂಕ ವಿಲ್ಲದೇ ಪರೀಕ್ಷೆ ಬರೆಯಿರಿ’ ಎಂದು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಕೇಂದ್ರ ಪ್ರವೇಶಿಸದಂತೆ ತಡೆದ ಸಿಬ್ಬಂದಿ ಹೊರಕ್ಕೆ ಕಳುಹಿಸಿದರು.

‘ಅಪ್ಪ ಬುದ್ಧಿ ಹೇಳಿದ್ರೂ ಕೇಳಲಿಲ್ಲ...’

ಚಿಕ್ಕಬಳ್ಳಾಪುರ: ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿ ನೂರ್ ಮಿಸ್ಬಾ ಕ್ವಾನೈನ್‌ ಪ್ರಾಂಶುಪಾಲರು, ಪೋಷಕರ ಮನವೊಲಿಕೆಗೂ ಸ್ಪಂದಿಸದೇ ಸರ್‌ ಎಂ.ವಿಶ್ವೇಶ್ವರಯ್ಯ ಪಿಯು ಕಾಲೇಜು ಕೇಂದ್ರದಿಂದ ಹೊರನಡೆದರು.

ಚಿಕ್ಕಬಳ್ಳಾಪುರದ ಬ್ಲೂಮ್ಸ್ ಕಾಲೇಜಿನ ವಿದ್ಯಾರ್ಥಿನಿಯಾದ ಇವರು ಇಬ್ಬರು ಗೆಳತಿಯರ ಜತೆ ಬಂದಿದ್ದರು.

ಸಿಬ್ಬಂದಿಯ ಮಾತು ಕೇಳಿ ಸ್ನೇಹಿತೆಯರು ಹಿಜಾಬ್ ತೆಗೆರಿಸಿದರು.   

‘ನಾನು ಹಿಜಾಬ್ ತೆಗೆಯುವು ದಿಲ್ಲ. ಹಿಜಾಬ್ ತೆಗೆದರೆ ಪರೀಕ್ಷೆ ಬರೆಯಲು ಆಗುವುದಿಲ್ಲ’ ಎಂದು ವಿದ್ಯಾರ್ಥಿನಿ ಹೇಳಿದಳು.

ಪ್ರಾಂಶುಪಾಲರು, ಡಿಡಿಪಿಯು ಅಲ್ಲದೆ ಆಕೆಯ ಅಪ್ಪ ಹೇಳಿದರೂ ಕೇಳಲಿಲ್ಲ’ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದರು.

10,830 ವಿದ್ಯಾರ್ಥಿಗಳು ಗೈರು

ಬೆಂಗಳೂರು: ಕೋವಿಡ್-19 ಕಾರಣಕ್ಕೆ ಒಂದು ವರ್ಷದ ಅಂತರದ ಬಳಿಕ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬಹುತೇಕ ಸುಸೂತ್ರವಾಗಿ ಆರಂಭವಾಗಿದೆ.

ಕೋವಿಡ್ ಕಾರಣ ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ. ಈ ಸಾಲಿನಲ್ಲಿ ಕೋವಿಡ್ ಭೀತಿ ಕಡಿಮೆಯಾಗಿರುವ ಕಾರಣ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಮೊದಲ ದಿನವಾದ ಶುಕ್ರವಾರ, ತರ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಪರೀಕ್ಷೆಗಳು ನಡೆದವು. ಈ ವಿಷಯಗಳಿಗೆ ನೋಂದಾಯಿಸಿಕೊಂಡಿದ್ದ ಒಟ್ಟು 2.36 ಲಕ್ಷ ವಿದ್ಯಾರ್ಥಿಗಳಲ್ಲಿ 10,830 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ವ್ಯವಹಾರಗಳ ಅಧ್ಯಯನ ವಿಷಯಕ್ಕೆ 2,35,498 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 10,762 ಮಂದಿ ಗೈರು ಹಾಜರಾಗಿದ್ದರು. ಇವರಲ್ಲಿ 7,795 ಹೊಸ ವಿದ್ಯಾರ್ಥಿಗಳಾಗಿದ್ದು, 475 ವಿದ್ಯಾರ್ಥಿಗಳು ಖಾಸಗಿ ಮತ್ತು 2,492 ಪುನರಾವರ್ತಿತರು ಸೇರಿದ್ದಾರೆ.

ತರ್ಕಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿದ್ದ 621 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇವರಲ್ಲಿ 61 ವಿದ್ಯಾರ್ಥಿಗಳು ಹೊಸಬರು, 6 ಪುನರಾ ವರ್ತಿತ ಅಭ್ಯರ್ಥಿಗಳು, ಇಬ್ಬರು ಖಾಸಗಿಯವರು ಸೇರಿದ್ದಾರೆ.

ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚಿನ 1,220 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 1,204 ವಿದ್ಯಾರ್ಥಿ ಗಳು ಗೈರು ಹಾಜರಾಗಿದ್ದಾರೆ.

‘ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿರಲಿಲ್ಲ. ಇದರಿಂದ, ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹಾಜರಾಗಿಲ್ಲ. ಇದು ಸಹ ಒಂದು ಕಾರಣವಾಗಿದೆ’ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿತ್ತು ಎಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಎಳೆದು ತರಲು ಸಾಧ್ಯವಿಲ್ಲ’

ಚಿಕ್ಕಮಗಳೂರು: ‘ಉಡುಪಿಯ ಆರು ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಪಟ್ಟುಹಿಡಿದಿದ್ದಾರೆ. ಪರೀಕ್ಷೆಗೆ ಹಾಜರಾಗುವುದು, ಬಿಡುವುದು ಅವರಿಗೆ ಬಿಟ್ಟಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಎಳೆದು ತರಲು ಸಾಧ್ಯವಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಸ್ಲಿಂ ಸಮುದಾಯದ ಬಹುತೇಕ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಈ ಆರು ವಿದ್ಯಾರ್ಥಿಗಳು ಯಾರಿಂದಲೋ ಪ್ರೇರಿತವಾಗಿ ಹೀಗೆ ಮಾಡುತ್ತಿದ್ದಾರೆ. ಇದರಲ್ಲಿ ಹೊರಗಿನ ಶಕ್ತಿಯ ಕೈವಾಡ ಇದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು